ಗುರುವಾರ. ನನಗೆ ವಾರದ
ರಜಾ. ಮರೆಯ ಬೇಡಿ ಅದು ರಾಯರ ದಿನ! ನಾಲ್ಕು ವರ್ಷದಿಂದ ಅದೇ ದಿನದ ರಜೆಗೆ ಒಗ್ಗಿ ಹೋಗಿದ್ದೇನೆ.
ಅಪ್ಪಿ ತಪ್ಪಿ ಬೇರೆ ದಿನ ರಜೆ ತೆಗೆದುಕೊಂಡನೆಂದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ವಾರವಿಡೀ ಮನಸ್ಸು
ಗೊಂದಲದ ಗೂಡಾಗುತ್ತದೆ. ಕಂಫರ್ಟ್ ಅನ್ನುವುದೇ ಇರುವುದಿಲ್ಲ. ಕಳೆದ ಒಂದೆರಡು ತಿಂಗಳಿನಿಂದ ಬೇರೆ
ಬೇರೆ ಕಾರಣಕ್ಕೆ ಗುರುವಾರ ರಜೆ
ತೆಗೆದುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಆದರೆ ಎರಡು ವಾರಗಳಿಂದ ಮತ್ತೆ ಗುರುವಾರವೇ ವಾರದ ರಜೆ
ಸಿಗುತ್ತಿದೆ. ಹಾಗಾಗಿ ಮನಸ್ಸು ಉಲ್ಲಸಿತದಿಂದಲೇ ಇದೆ.
ಒಂದು ವಾರದ ಕಚೇರಿಯ
ಸುಸ್ತನ್ನು ಆ ದಿನವಿಡೀ ರೂಮಲ್ಲಿ ಕುಳಿತು ನಿವಾರಿಸುವುದು ನನ್ನ ರೂಢಿ. ರಾಯರ ದಿನ ಬಂತೆಂದರೆ
ನನ್ನ ರೂಮಿನ ಹುಡುಗರು ಮುಸಿ ಮುಸಿ ನಗುತ್ತಾರೆ. ರೂಮಲ್ಲೇ ಸ್ವ ಪ್ರತಿಷ್ಠಾಪನೆಗೊಳ್ಳುತ್ತಾನೆ.
ಕನಿಷ್ಠ ಪಕ್ಷ ಸಂಜೆ ಹೊತ್ತಾದರೂ ಹೊರಗಡೆ ಹೋಗಿ
ಸುತ್ತಾಡಿ ಬರುವುದಿಲ್ಲ. ಮಂತ್ರಿಮಾಲ್ ಅಷ್ಟು ಸನಿಹದಲ್ಲೇ ಇದ್ದರೂ ಅದಕ್ಕೆ ಒಂದು ವಿಸಿಟ್‌ಕೊಡುವುದಿಲ್ಲ.
ಶಾಪಿಂಗ್‌ಮಾಡುವುದು ಬೇಡಪ್ಪ, ವಿಂಡೋ ಶಾಪಿಂಗ್‌ಮಾಡುವುಕ್ಕೆ ಏನು ದಾಡಿ ಅಂತ ನನಗೆ ಕೇಳಿಸುವಂತೆ ಪರಸ್ಪರ
ಮಾತನಾಡುತ್ತಾ ಜಾಡಿಸುತ್ತಾ ಇರುತ್ತಾರೆ. ಮತ್ತೊಬ್ಬನಂತು
ಏ.... ಅಟ್‌ಲಿಸ್ಟ್ ಸ್ಯಾಂಕಿ ಟ್ಯಾಂಕಿ ಹತ್ತಿರ ಸುಳಿದಾಡಿ ಕಣ್ಣನ್ನಾದರೂ ತಂಪು
ಮಾಡಿಕೊಂಡು ಬಾ ... ವೇಸ್ಟ್ ಬಾಡಿ ಟೇಸ್ಟೇ ಇಲ್ಲ ನಿನಗೆ’ ಅಂತ ಕಾಲೆಳೆಯುತ್ತಿರುತ್ತಾನೆ. ಎಲ್ಲದಕ್ಕೂ ನನ್ನ ಉತ್ತರ ನಗುವೇ. ಅವರೂ ನಗುತ್ತಲೇ ಮಾತಿಗೆ
ಪೂರ್ಣ ವಿರಾಮ ಇಡುತ್ತಾರೆ.
ಮೊನ್ನೆ ಗುರುವಾರ
ಸಂತೋಷದಿಂದಲೇ ರೂಮಲ್ಲಿ ಕೂತು ದಿನಕಳೆದೆ. ಯಾವತ್ತೂ ರಾತ್ರಿ ೧.೩೦ ಬಳಿಕವಷ್ಟೇ ನಿದ್ರಾ ದೇವಿಯ
ಆಹ್ವಾನೆಗೆ ತೊಡಗುವವನು ಅಂದು ೧೧ ಗಂಟೆಗೆ ಆ ಕಾರ್ಯಕ್ಕೆ ಕೈ ಹಾಕಿದೆ. ನಿದ್ರಾ ದೇವಿ ಶರಣಾಗುವ ಯೋಚನೆಯಲ್ಲಿ
ಇರಲಿಲ್ಲ. ತಲೆಯಲ್ಲಿ ಹರಿದಾಡುತ್ತಿದ್ದ ಹಲವು ಆಲೋಚನೆಗಳು ನಿದ್ರಾ ದೇವತೆಯನ್ನು ಹತ್ತಿರಕ್ಕೂ
ಬಿಟ್ಟು ಕೊಡಲಿಲ್ಲ. ಮಲಗಿದವ ಎದ್ದು ಮತ್ತೆ ಟಿವಿ
ನೋಡುತ್ತಾ ಯಾ ಪುಸ್ತಕ ಓದುತ್ತಾ ಕೂರುವುದು ದೂರದ ಮಾತು. ಇಯರ್‌ಫೋನ್ ಕಿವಿಗಿಟ್ಟು ಮೊಬೈಲ್‌ನಲ್ಲಿ
ಎಫ್‌ಎಂ ಚಾಲೂ ಮಾಡಿದೆ. ಒಂದಷ್ಟು ಎಫ್ಎಂ ಚಾನೆಲ್‌ಗಳು ಠೇಂಕರಿಸುತ್ತಿದ್ದವು.
ರಾತ್ರಿ ೧೧ರ ನಂತರ ನೀವು ಎಫ್‌ಎಂ ಕೇಳಬೇಕು... ಕೆಲವು
ಚಾನೆಲ್‌ಗಳು ಓತಪ್ರೋತವಾಗಿ ಹಾಡುಗಳನ್ನು ಪ್ರಸಾರ ಮಾಡಿದರೆ, ಇನ್ನು ಕೆಲವು ಚಾನೆಲ್‌ಗಳಲ್ಲಿ
ಮುಸ್ಸಂಜೆ ಮಾತು ಚಿತ್ರದಲ್ಲಿ ಸುದೀಪ್ ನಡೆಸಿಕೊಡುತ್ತಿದ್ದ ಮುಸ್ಸಂಜೆ ಮಾತು’ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದು ರೂಪುಗೊಂಡ ಕಾರ್ಯಕ್ರಮಗಳು
ಪ್ರಸಾರವಾಗುತ್ತವೆ. ಅವುಗಳ ಹೆಸರುಗಳೆಲ್ಲಾ ಆಕರ್ಷಕವಾಗಿವೆ. ಪ್ರೇಮಿಗಳಿಗೆ/ ನೊಂದವರಿಗೆ ತಮ್ಮ
ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವ ವೇದಿಕೆ ಅದು. ಹಗಲು ಹೊತ್ತಿನಲ್ಲಿ ಕಿವಿ ತಮಟೆ ಹರಿದು
ಹೋಗುವಂತೆ ಕಿರುಚಾಡುವ ರೇಡಿಯೊ ಜಾಕಿಗಳು ಆ ಕಾರ್ಯಕ್ರಮದಲ್ಲಿ ಬಹಳ ನಾಜೂಕಾಗಿ, ಮನಸ್ಸಿಗೆ
ತಾಕುವಂತೆ (?!) ಮಾತಾಡುತ್ತಾರೆ.
ಆ ಕಾರ್ಯಕ್ರಮಗಳ ವಿಶ್ವಾಸಾರ್ಹತೆಯ
ಬಗ್ಗೆ ನೀವು ಪ್ರಶ್ನಿಸಿದರೆ ನನ್ನಲ್ಲಿ ಉತ್ತರ ಇಲ್ಲ. ಅಂದ ಮಾತ್ರಕ್ಕೆ ಆ ಕಾರ್ಯಕ್ರಮಗಳಿಗೆ
ದೂರವಾಣಿ ಕರೆ ಮಾಡಿ ಯುವಕ ಯುವತಿಯರು ನೋವನ್ನು ತೋಡಿಕೊಳ್ಳುವುದು ಸುಳ್ಳೇ? ಆರ್‌ಜೆ ಒಂದಷ್ಟು
ಸಾಂತ್ವನದ ಮಾತುಗಳನ್ನು ಹೇಳಿ ಶೋತೃಗಳ ಕಣ್ಣೀರು ಬರಿಸುವಂತಹ ಹಾಡನ್ನು ಕೇಳಿಸುವುದು ಕೇವಲ
ತೋರ್ಪಡಿಕೆಗಾಗಿಯೇ? ಹೇಳಲು ಸಾಧ್ಯವಿಲ್ಲ. ಪ್ರೀತಿ ಪ್ರೇಮ ವಿಷಯದಲ್ಲಿ ಮೋಸ ಹೋದವರು ನೊಂದವರು
ನಮ್ಮ ಸುತ್ತ ಹಲವು ಜನರು ಇರುವಾಗ, ಆ ಕಾರ್ಯಕ್ರಮಗಳು ಸುಳ್ಳಿನ ಕಂತೆಗಳು ಎಂದು ಹೇಳಲು
ಸಾಧ್ಯವಿಲ್ಲ. ಇರಲಿ. ನಾನು ಹಾದಿ ತಪ್ಪುತ್ತಿದ್ದೇನೆ ಅನಿಸುತ್ತಿದೆ. ಮತ್ತೆ ಟ್ರ‍್ಯಾಕ್‌ಗೆ
ಮರಳುತ್ತೇನೆ.
ಮೊನ್ನೆ ಇದೇ
ಕಾರ್ಯಕ್ರಮವನ್ನು ಎಫ್‌ಎಂ ಒಂದರಲ್ಲಿ ಕೇಳುತ್ತಿದ್ದೆ. ಆರ್‌ಜೆ ಹಲೋ ಅಂದ. ಆ ಕಡೆಯಿಂದ ಒಬ್ಬಳು
ಹುಡುಗಿ ಮಾತಾಡುತ್ತಿದ್ದಳು. ಹೆಸರು ಚೆನ್ನಾಗಿಯೇ ಇತ್ತು ಆಕೆಯದ್ದು. ಆರ್‌ಜೆ ಹೇಳಿದ... ನಿನ್ನ
ಕತೆ ಹೇಳು... ಹೇಳಿದ್ದೇ ತಡ ಅವಳ ದುಃಖ ಕಟ್ಟೆಯೊಡೆದಿತ್ತು. ಬಿಕ್ಕಳಿಸುತ್ತಲೇ ತನ್ನ ಕತೆ ಆರಂಭಿಸಿದಳು.
ಆಕೆ ಕಾಲೇಜಿನಲ್ಲಿ ಒಬ್ಬನನ್ನು ಪ್ರೀತಿಸಿದ್ದಳಂತೆ. ಇಬ್ಬರೂ ಮೂರು ವರ್ಷಗಳ ಕಾಲ
ಅನ್ಯೋನ್ಯವಾಗಿದ್ದರಂತೆ. ಯಾಕೋ ಏನೋ ಒಂದು ದಿನ ಆತ ಕೈಕೊಟ್ಟನಂತೆ. ಪ್ರೀತಿಸಿದ ಹುಡುಗನೇ ದೂರವಾದ
ಮೇಲೆ ಬದುಕಿದ್ದು ಏನು ಪ್ರಯೋಜನ ಅಂದುಕೊಂಡು ಕೈಯನ್ನೇ ಕುಯ್ದು ಕೊಂಡಳಂತೆ... ಒಎಂಜಿ...! ಆರ್‌ಜೆ
ಬಾಯಿಂದ ನಿಟ್ಟುಸಿರು ಬಿಡುತ್ತಾ ತೆಗೆದ ಉದ್ಗಾರ ನನ್ನ ಕಿವಿಗೆ ತಾಕಿತು. ಹುಡುಗಿ ಬಿಕ್ಕಳಿಸತ್ತಾ
ಮುಂದುವರಿಸಿದಳು. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರಿಂದ ಬದುಕಿಕೊಂಡಳಂತೆ. ಆ ಮೇಲೆ ಆ
ಘಟನೆಯನ್ನು, ಹುಡುಗನನ್ನು ಮರೆಯಲು ಯಶಸ್ವಿಯಾದಳೆನ್ನಿ.
ಕತೆ ಮುಗಿದಿಲ್ಲ! ಹೀಗೆ ಮುಂದುವರೆಯುತ್ತದೆ...
ಅಷ್ಟೆಲ್ಲ ನೋವು ಮರೆತು ಒಂದು ಕೆಲಸಕ್ಕೆ ಸೇರಿದಳಂತೆ. ಅದೇ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ
ಯುವಕ ಇವಳಿಗೆ ಪ್ರೊಪೋಸ್ ಮಾಡಿದನಂತೆ. ಸ್ವಲ್ಪ ಟೈಮ್‌ಕೊಡಿ ಆ ಮೇಲೆ ನಿರ್ಧಾರ ತಿಳಿಸುತ್ತೇನೆ
ಅಂತ ಹೇಳಿದ್ದಳಂತೆ. ಹುಡುಗ ತುಂಬಾ ಒಳ್ಳೆಯವನು ಎಂಬುದು ದೃಢಪಟ್ಟ ನಂತರ ಆತನ ಪ್ರೊಪೋಸ್‌ನ್ನು
ಎಕ್ಸೆಪ್ಟ್‌ಮಾಡಿದಳಂತೆ. ಮತ್ತೆ ಆರು ತಿಂಗಳು ಪ್ರೀತಿಯೇ ಜೀವನ ಎನ್ನುತ್ತಾ ಇಬ್ಬರು
ಸುತ್ತಾಡಿದರಂತೆ. ಆದರೆ ಆಕೆಗೆ ಮತ್ತೊಮ್ಮೆ ಕೈಯನ್ನು ಕುಯ್ದುಕೊಳ್ಳುವ ಪ್ರಸಂಗ ಬಂತು; ಆ ಹುಡುಗನ
ಮನೆಯವರು ಇವರ ಪ್ರೀತಿಗೆ ಸಮ್ಮತಿಸದೇ ಇದ್ದಾಗ. ನನಗೇ ಯಾಕೆ ಹೀಗೆ ಆಗುತ್ತಿದೆ ಎಂದು ಅಳುತ್ತಾ
ಆರ್‌ಜೆ ಮುಂದೆ ಪ್ರಶ್ನೆಯನ್ನಿಟ್ಟಳು ಆ ಯುವತಿ. ಆರ್‌ಜೆಯ ಧ್ವನಿಯೂ ಆಕೆಯ ಕತೆ ಕೇಳಿ
ಕ್ಷೀಣಿಸಿತ್ತು. ಒಂದಷ್ಟು ಸಮಾಧಾನದ ಮಾತುಗಳನ್ನಾಡಿ ಆಕೆಯ ಕರೆಯನ್ನು ಕಟ್‌ಮಾಡಿ ಒಂದು
ಭಾವನಾತ್ಮಕ ಗೀತೆಯನ್ನು ಪ್ಲೇ ಮಾಡಿದ ಆರ್‌ಜೆ.
ನಿದ್ರೆ ಬರದೆ
ತೊಳಲಾಡುತ್ತಿದ್ದ ನನಗೆ ಈ ಕತೆಯನ್ನು ಕೇಳಿದಾಗ ಆತ್ಮೀಯ ಸ್ನೇಹಿತ ನೆನಪಾದ. ಹಾಗಿದ್ದರೆ
ಅವನೆಷ್ಟು ಬಾರಿ ಕೈಯನ್ನು ಕುಯ್ದುಕೊಳ್ಳಬೇಕಿತ್ತು ಅಂದುಕೊಂಡೆ. ನೀವು ಅವನನ್ನು ನೋಡಬೇಕು. ಅವನ
ಜೀವನೋತ್ಸಾಹವನ್ನು ಕಂಡು ನಾನೇ ಅದೆಷ್ಟು ಬಾರಿ ಕರುಬಿದ್ದೇನೆ ಗೊತ್ತಾ? ಒಂದೇ ಮಾತಿನಲ್ಲಿ
ಹೇಳುವುದಾದರೆ ಹಿ ಇಸ್ ಸಿಂಪ್ಲಿ ಅಮೇಜಿಂಗ್!
~
ಅವನದು ಬಡ ಅವಿಭಕ್ತ
ಕುಟುಂಬ. ಮನೆಯಲ್ಲಿ ೧೨ ಜನ. ಒಬ್ಬೊಬ್ಬರ ಗುಣ,
ವರ್ತನೆ ಒಂದೊಂದು ರೀತಿ. ಹಾಗಾಗಿ ಜನರೊಂದಿಗೆ ಆಪ್ತವಾಗಿ ಬೆರೆಯುವ ಗುಣ ಬಾಲ್ಯದಿಂದಲೇ
ಉಡುಗೊರೆಯಾಗಿ ಬಂದಿತ್ತು. ಅವನ ದೊಡ್ಡ ಶಕ್ತಿಯೇ ಅದು. ತನ್ನ ಸುತ್ತಲೂ ಎಷ್ಟೇ ಜನರಿರಲಿ, ಎಲ್ಲರೂ
ಆತನಿಗೆ ಪರಿಚಯ. ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡುತ್ತಿದ್ದ. ಅವನ ಆತ್ಮೀಯ ನಡವಳಿಕೆ
ಹೇಗಿತ್ತೆಂದರೆ, ಅವನಾಗಿ ಬಂದು ಮಾತನಾಡದಿದ್ದರೂ ಉಳಿದವರೇ ಆತನ ಬಳಿ ತೆರಳಿ ಹರಟುತ್ತಿದ್ದರು.
ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದುದು ಬಲು ಅಪರೂಪ!
ಹೃದಯ ವೈಶಾಲ್ಯತೆಯಲ್ಲಿ
ಆತ ಶ್ರೀಮಂತ. ಆದರೆ ದುಡ್ಡಿನ ವಿಚಾರದಲ್ಲಿ ಅವನಿಗೆ ಈ ಮಾತು ಅನ್ವಯವಾಗದು. ಬಡತನ ಆತನ ಬೆನ್ನಿಗೆ
ಅಂಟಿ ಕೊಂಡ ಶಾಪ. ವರ್ಷಗಳ ಕೆಳಗೆ ಕೆಲಸ ಸಿಗುವವರೆಗೇ ಆತ ಬಡವನೇ. ಈಗ ಪರವಾಗಿಲ್ಲ.
ಸುಧಾರಿಸಿದ್ದಾನೆ. ಈಗ ನಾನು ಮಧ್ಯಮ ವರ್ಗದ ಬಡವ ಎಂದು ಆತ ತನ್ನನ್ನೇ ತಾನು ವ್ಯಂಗ್ಯವಾಗಿ ಹೇಳುವುದುಂಟು
ನಗು ಬೀರುತ್ತಾ. ಆ ನಗುವಿನಲ್ಲಿ ಅದೆಷ್ಟು ವಿಷಾದವಿದೆ ಎಂಬುದನ್ನು ನಾನು ಅರ್ಥೈಸಬಲ್ಲೆ.
ಪ್ರಾಥಮಿಕ ಶಾಲೆಯಿಂದಲೇ
ಆತನನ್ನು ನಾನು ಬಲ್ಲೆ. ಮನೆಗೆ ತುಂಬಾ ಹತ್ತಿರದಲ್ಲಿ ಸರ್ಕಾರಿ ಶಾಲೆ. ಗೆಳೆಯ ಸೇರಿದ ಎರಡು
ದಿನಗಳ ಬಳಿಕ ನಾನು ಅದೇ ಶಾಲೆಗೆ ಸೇರಿದೆ. ಅಕ್ಕ ಪಕ್ಕದಲ್ಲಿ ನಾವು ಕೂರುತ್ತಿದ್ದೆವು. ಮೊದಲ
ದಿನದಿಂದಲೇ ನಾವು ಸ್ನೇಹಿತರಾಗಿದ್ದೆವು. ಅಲ್ಲಿಂದ ಇಂದಿನವರೆಗೆ ನಮ್ಮ ಗೆಳೆತನ ಮುಂದುವರಿದಿದೆ. ಭವಿಷ್ಯದ
ಶಿಕ್ಷಣದ ಬಗ್ಗೆ ಆತನಿಗೆ ವಿಶೇಷ ಕಲ್ಪನೆಗಳಿರಲಿಲ್ಲ. ಮನೆಯಲ್ಲಿ ಸೂಕ್ತ ಮಾರ್ಗದರ್ಶಕರ ಇಲ್ಲದೇ
ಇದ್ದುದು ಅದಕ್ಕೆ ಕಾರಣವಾಗಿರಬಹುದು. ಅವನ ಮನೆಯಲ್ಲಿ ಯಾರೂ ಉತ್ತಮ ಶಿಕ್ಷಣ ಪಡೆದಿರಲಿಲ್ಲ. ಮೊದಲ
ಏಳು ವರ್ಷ ತುಂಟಾಟ ಮಾಡುತ್ತಾ ಕಳೆದು ಹೋಯ್ತು.
ಹೈಸ್ಕೂಲ್ ಸೇರುವ ಹೊತ್ತಿಗೆ
ಶಿಕ್ಷಣದ ಮಟ್ಟುಗಳು ಅರ್ಥವಾಗಲು ಆರಂಭವಾಗಿದ್ದವು. ಮುಂದೇನಾಗಬೇಕು, ಏನು ಮಾಡಬೇಕು, ಶಿಕ್ಷಣದ
ಯಾವ ದಿಕ್ಕಿನಲ್ಲಿ ಸಾಗಿದರೆ ಉತ್ತಮ ಎಂಬಿತ್ಯಾದಿ ಪ್ರಶ್ನೆಗಳು ಕಾಡಲು ಆರಂಭಿಸಿದ್ದವು. ಭವಿಷ್ಯದ
ದೃಷ್ಟಿಯಿಂದ ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ
ಹರಡಲು ಆರಂಭಿಸಿದ್ದ ಕಾಲ ಅದು. ಇಂಗ್ಲಿಷ್ ಮಾಧ್ಯಮಕ್ಕೆ ಸೇರಬೇಕು ಎಂಬ ಆಸೆ ಗೆಳೆಯನಲ್ಲಿ ಮೊಳಕೆ
ಒಡೆದಿತ್ತು. ಇಂಗ್ಲಿಷ್ ಶಿಕ್ಷಣ ಸ್ವಲ್ಪ ದುಬಾರಿ. ಅದಕ್ಕಾಗಿ ೧೦ ಕಿ.ಮೀ ದೂರ ಸಾಗಬೇಕು. ಮನೆಯ ಆರ್ಥಿಕ
ಪರಿಸ್ಥಿತಿ ಆತನ ಆಸೆಯ ಚಿಗುರನ್ನು ಚಿವುಟಿ ಹಾಕಿತ್ತು. ತನ್ನ ಆಸೆಯನ್ನು ಮನೆಯಲ್ಲಿ
ಪ್ರಸ್ತಾಪಿಸನಾದರೂ ಸೂಕ್ತ ಪ್ರತಿಕ್ರಿಯೆ ಬಂದಿರಲಿಲ್ಲ. ಪಾಪ ಮನೆಯವರು ಏನು ಮಾಡುತ್ತಾರೆ? ಅಷ್ಟು ಫೀಸ್ ಕೊಟ್ಟು ಇಂಗ್ಲಿಂಷ್ ಶಾಲೆಗೆ ಸೇರಿಸುವ
ತಾಕತ್ತು ಅವರಿಗೆಲ್ಲಿ ಇತ್ತು.? ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದುದೇ ಬಹಳ ಕಷ್ಟದಲ್ಲಿ. ಈ
ಸತ್ಯ ನನ್ನ ಗೆಳೆಯನಿಗೆ ಬಲು ಬೇಗ ಅರ್ಥವಾಗಿತ್ತು. ಮೊದಲ ಬಾರಿ ಅವನು, ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ತತ್ವ ಪದವನ್ನು
ನಗುವುನಿಂದಲೇ ಅನುಮೋದಿಸಿದ್ದ. ಜೊತೆಗೆ ಅವನ ಅಜ್ಜಿ ಆಗಾಗ ಹೇಳುತ್ತಿದ್ದ ‘ಆಗುವುದೆಲ್ಲಾ ಒಳ್ಳೆಯದಕ್ಕೆ’
ಎಂಬ ಪದವನ್ನು ಗುನುಗಲು ಆರಂಭಿಸಿದ್ದ.
ಪ್ರೌಢ ಶಾಲೆ ಸೇರಿದ
ಮೊದಲ ಒಂದು ವಾರ ಖಿನ್ನನಾಗಿದ್ದ. ಆಸೆ ಈಡೇರಲಿಲ್ಲ ಎಂಬ ಸಹಜ ದುಃಖ ಅವನಲ್ಲಿ ಇತ್ತು. ಒಂದೇ ವಾರ,
ನಂತರ ಅವನು ಎಂದಿನಂತೆ ಎಲ್ಲರನ್ನೂ ನಗಿಸಲು ಆರಂಭಿಸಿದ್ದ, ಸ್ವಯಂ ನಗಲು ಶುರು ಹತ್ತಿದ್ದ. ಮತ್ತೆ
ಮೂರು ವರ್ಷ ಹಾಗೆ ಕಳೆದು ಹೋಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳು ಬಂದಿತ್ತು. ಇನ್ನು
ಪದವಿ ಪೂರ್ವ ಶಿಕ್ಷಣ. ಪಿಯುಸಿಗೆ ಹೋಗುತ್ತೇನೆ ಇಲ್ಲವೋ ಎಂಬ ಅಳುಕು ಆತನಿಗೆ. ಕಾರಣ ಮತ್ತೆ ಮನೆಯ
ಸ್ಥಿತಿ. ಆದರೆ ಅದೃಷ್ಟವಶಾತ್ ಆತನ ಮನೆಯವರಿಗೆ, ಎಷ್ಟು ಕಷ್ಟವಾದರೂ ಪರವಾಗಿಲ್ಲ ಮಕ್ಕಳಿಗೆ
ಶಿಕ್ಷಣ ಕೊಡಿಸಬೇಕು ಎಂಬ ಮನೋಭಾವ ಇದ್ದುದರಿಂದ ಪಿಯುಸಿಗೆ ಸೇರಲು ಅಡ್ಡಿ ಆತಂಕಗಳು ಇರಲಿಲ್ಲ.
ಆದರೆ ಖಾಸಗಿ ಶಾಲೆಗೆ ಸೇರುವ ಪ್ರಸ್ತಾವವನ್ನು ಮನೆಯಲ್ಲಿ ಇಡುವ ಹಾಗಿರಲಿಲ್ಲ. ಮನೆಯಿಂದ ೧೦
ಕಿ.ಮೀ ದೂರದಲ್ಲಿ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು. ಇದ್ದುದು ಮೂರು ವಿಭಾಗ. ವಿಜ್ಞಾನ,
ಕಲಾ, ವಾಣಿಜ್ಯ. ವಿಜ್ಞಾನದಲ್ಲಿ ಪಿಸಿಎಂಬಿ ಮಾತ್ರ.
ಕಂಪ್ಯೂಟರ್‌ಗಳು
ಪ್ರವರ್ಧಮಾನಕ್ಕೆ ಬಂದಂತಹ ಸಮಯ. ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮನೆಗೊಬ್ಬರಂತೆ
ತಯಾರಾಗುತ್ತಿದ್ದ ಕಾಲ ಅದು. ಇವನಿಗೆ ಕಂಪ್ಯೂಟರ್ ಕ್ಷೇತ್ರದೊಳಕ್ಕೆ ಪ್ರವೇಶಿಸುವ ಆಕಾಂಕ್ಷೆ.
ಅದಕ್ಕೆ ಪಿಸಿಎಂಸಿ ಸೇರಿದರೆ ಒಳ್ಳೆದು. ಮುಂದೆ ಸಿಇಟಿ ಬರೆದು ಎಂಜಿನಿಯರಿಂಗ್ ಮಾಡೋಣ ಎಂಬ ಕನಸೂ
ಆತನಲ್ಲಿತ್ತು. ಆದರೆ ಆ ಕಾಲೇಜಿನಲ್ಲಿ ಪಿಸಿಎಂಬಿ ಬಿಟ್ಟರೆ ಬೇರೇನೂ ಇರಲಿಲ್ಲ. ಹಾಗಾಗಿ
ಆಯ್ಕೆಗಳೇ ಇಲ್ಲದೆ ಅದಕ್ಕೆ ಸೇರಿದ. ತನ್ನ ಕನಸು ನೆರವೇರುವುದಿಲ್ಲ ಎಂಬುದು ಸ್ನೇಹಿತನಿಗೆ
ಮೊದಲನೇ ವರ್ಷದಲ್ಲಿ ಅರ್ಥವಾಗಿತ್ತು. ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಕೇಳಿ ಅವನು ಹೌಹಾರಿದ್ದ.
ಇದು ಆಗುವುದಲ್ಲ ಎಂಬುದನ್ನು ಆತ ಮನಗಂಡಿದ್ದ. ಹಾಗಾಗಿ ಸಿಇಟಿ ಬರೆಯುವ ಆಸೆಗೆ ತಿಲಾಂಜಲಿ ಬಿಟ್ಟು
ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಮತ್ತೊಮ್ಮೆ ಉದ್ಗರಿಸಿದ್ದ!
ಎರಡನೇ ವರ್ಷ ಆತನ
ಸಹಪಾಠಿಗಳೆಲ್ಲರೂ ಸಿಇಟಿ ಬರೆಯುತ್ತಿದ್ದರೆ, ಇವನು ಮನೆಯ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ. ಸಿಇಟಿ
ಬರೆಯದಿದ್ದರೂ ಡಿಗ್ರಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದು, ಎಂಸಿಎ ಅಥವಾ ಎಂಎಸ್ಸಿ
ಕಂಪ್ಯೂಟರ್ ಸೈನ್ಸ್ ಮಾಡಿಯಾದರೂ ಸಾಫ್ಟ್‌ವೇರ್ ವಲಯ ಪ್ರವೇಶಿಸಬಹುದು ಎಂಬ ಹೊಸ ಕನಸು
ಆತನಲ್ಲಿ ಚಿಗುರಿತ್ತು. ಆ ಕನಸಿಗೂ ಬಿದ್ದದ್ದು ತಣ್ಣೀರೇ. ಅದೇ ಪಟ್ಟಣದಲ್ಲಿದ್ದ ಪದವಿ ಕಾಲೇಜಿನಲ್ಲಿ
ವಿಜ್ಞಾನ ವಿಭಾಗ ಇರಲಿಲ್ಲ. ಅಲ್ಲಿಂದ ಮತ್ತೆ ೧೫ ಕಿ.ಮೀ ದೂರದಲ್ಲಿರುವ ಖಾಸಗಿ ಶಿಕ್ಷಣ
ಸಂಸ್ಥೆಗಳಲ್ಲಿ ವಿಜ್ಞಾನ ಪದವಿ ವಿಭಾಗ ಇತ್ತು. ಆದರೆ ಗೊತ್ತಲ್ಲ... ದುಬಾರಿ. ಈ ನಡುವೆ ಮನೆಯ
ಆರ್ಥಿಕ ಸ್ಥಿತಿ ಸ್ವಲ್ಪ ಪ್ರಮಾಣದಲ್ಲಿ ಸುಧಾರಿಸಿತ್ತು. ಹಾಗಾಗಿ ವಿಜ್ಞಾನ ಪದವಿ ಪಡೆಯುವುದಕ್ಕೆ
ಪೋಷಕರ ಒಪ್ಪಿಗೆ ಇತ್ತು. ಆದರೆ ಐಚ್ಛಿಕ ವಿಷಯಗಳದ್ದೇ ತಕರಾರು. ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ
ಫೀಸು ಜಾಸ್ತಿ. ಹಾಗಾಗಿ ಅದು ಬೇಡ. ಪಿಸಿಎಂ ಆದೀತು. ಅದಕ್ಕೆ ಸ್ವಲ್ಪ ಫೀಸು ಕಡಿಮೆ ಎಂಬ ಮಾತು
ಬಂತು. ಅಸಲಿಗೆ ಪಿಸಿಎಂ, ಸಿಬಿಝಡ್, ಪಿಎಂಸಿಎಸ್ ಅಂದರೆ ಏನೂ ಎಂಬುದೇ ಮನೆಯವರಿಗೆ ಗೊತ್ತಿರಲಿಲ್ಲ.
ಯಾವುದಕ್ಕೆ ಫೀಸು ಕಡಿಮೆ ಅದಕ್ಕೆ ಸೇರೋಣ. ಯಾವುದಾದರೂ ಏನು? ಎಂಬ ಮನೋಭಾವ. ಗೆಳೆಯನ ಕನಸಿನ
ಗೋಪುರದ ಇಟ್ಟಿಗೆ ಕುಸಿಯಲು ಆರಂಭಿಸಿತ್ತು. ನನ್ನ ಗೆಳೆಯ ಕೈ ಕುಯ್ದುಕೊಳ್ಳಬೇಕಿತ್ತು ಅಲ್ವಾ?
ಉಹ್ಞುಂ ಅವನು ಹಾಗೆ ಮಾಡಲಿಲ್ಲ. ಮತ್ತೆ ಪಾಲಿಗೆ ಬಂದಿದ್ದು....., ಎಲ್ಲವೂ ಒಳ್ಳೆಯದಕ್ಕೆ
ಆಗುತ್ತಿರುವುದು ಅಂದು ಕೊಂಡು ಪಿಸಿಎಂಗೆ ಸೇರಿದ.
ಮೂರು ವರ್ಷ ಪದವಿ ತರಗತಿಯಲ್ಲಿ
ಅವನಿಗೆ ಒಂದಷ್ಟು ಹೊಸ ಗೆಳೆಯರು ಸಿಕ್ಕಿದರು. ಜೀವನ ಎಂದರೆ ಏನು ಎನ್ನುವುದು ಅರ್ಥವಾಗುತ್ತಾ
ಹೋಯಿತು. ಪಿಸಿಎಂ ಮಾಡುತ್ತಿದ್ದರೂ
ಎಂಸಿಎ ಮಾಡುವ ಆಸೆಯನ್ನು ಆತ ಬಿಟ್ಟಿರಲಿಲ್ಲ. ಮನೆಯಲ್ಲಿ ದುಡ್ಡುಕೊಡದಿದ್ದರೆ ಪರವಾಗಿಲ್ಲ
ಬ್ಯಾಂಕ್ ಸಾಲ ಮಾಡಿ ಸ್ನಾತಕೋತ್ತರ ಮಾಡಬಹುದು ಎಂದು ಅಂದು ಕೊಂಡಿದ್ದ. ಆದರೆ ಡಿಗ್ರಿ ಕೊನೆ
ವರ್ಷಕ್ಕೆ ಬರುವಾಗ ಆತ ಆ ಕನಸನ್ನು ಕೈ ಬಿಟ್ಟಿದ್ದ. ಕನಿಷ್ಠ ತನಗೆ
ಇಷ್ಟಾದರೂ ಶಿಕ್ಷಣ ದೊರಕಿತು, ಬಡತನದ ಕಾರಣದಿಂದ ಶಿಕ್ಷಣ ಪಡೆಯದೇ ಇರುವ ಅದೆಷ್ಟು ಜನರಿದ್ದಾರೆ ಅಂದುಕೊಂಡ.
ಕಷ್ಟದ ನಡುವೆ ಇಷ್ಟು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರಲ್ಲಾ ಮನೆಯವರು? ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಪೋಷಕರ ಕಳಕಳಿಯನ್ನು ಕಂಡು
ಆತನಿಗೆ ಕಣ್ತುಂಬಿ ಬಂತು. ಇನ್ನು ಮನೆಯವರಿಗೆ ಹೊರೆ ಆಗಬಾರದು. ಕೆಲಸಕ್ಕೆ ಸೇರಬೇಕು ಎಂದು
ತೀರ್ಮಾನಿಸಿದ್ದ. ಮನೆಯವರಿಗೂ ನಿರ್ಧಾರ ತಿಳಿಸಿದ್ದ. ಎಂಎಸ್‌ಸಿ ಮಾಡುತ್ತಿದ್ದರೆ ಮಾಡು ಎಂದು
ಮನೆಯಲ್ಲಿ ಹೇಳಿದ್ದರು. ಆದರೆ ಅದು ಅವನಿಗೆ ಇಷ್ಟವಿರಲಿಲ್ಲ. ಎಂಸಿಎಗೆ ಕಳುಹಿಸುವ ತಾಕತ್ತು ಮತ್ತು ಒಂದು ವೇಳೆ ಸಾಲ ಮಾಡಿದರೆ ಇವನು ಮುಂದೆ
ಕಟ್ಟುತ್ತಾನೆ ಎಂಬ ಧೈರ್ಯವೂ ಮನೆಯವರಿಗೆ ಇರಲಿಲ್ಲ. ಇದನ್ನು ಅರಿತಿದ್ದ ಮಿತ್ರ, ಆ ಬಗ್ಗೆ
ಪ್ರಸ್ತಾಪಿಸಿಯೇ ಇರಲಿಲ್ಲ. ಡಿಗ್ರಿ ಪರೀಕ್ಷೆ ಮುಗಿದು ಫಲಿತಾಂಶ ಬರುವುದಕ್ಕೂ ಮುನ್ನ
ಬೆಂಗಳೂರಿಗೆ ಹೊರಟಿದ್ದ ಎಂದಿನಂತೆ ನಗುತ್ತಾ.
ಉತ್ತಮ ಕೆಲಸ
ಸಿಗುತ್ತದೆ ಎಂಬ ನಿರೀಕ್ಷೆ ಅವನಿಗಿರಲಿಲ್ಲ. ಒಟ್ಟಿನಲ್ಲಿ ಒಂದು ಕೆಲಸ ಸಿಕ್ಕಿದರೆ ಸಾಕು. ಎಲ್ಲಾ
ಆಮೇಲೆ ನೋಡೋಣ. ಗಾಳಿ ಬೀಸಿದೆಡೆಗೆ ಸಾಗುವ ನೀತಿಯನ್ನು ಅವನು ಜೀವನದಲ್ಲಿ ಅಳವಡಿಸಿಕೊಂಡಿದ್ದ.
ಎರಡು ಮೂರು ಸಂದರ್ಶನಕ್ಕೆ ಹಾಜರಾದ. ಒಂದು ಪುಟ್ಟ ಕಂಪೆನಿ ಸಣ್ಣ ಕೆಲಸ ಕೊಟ್ಟಿತು. ದೊಡ್ಡ ಸಂಬಳ
ಅಲ್ಲ. ಆದರೆ ಡಿಗ್ರಿಗೆ ಕಟ್ಟಿದ ಫೀಸಿಗಿಂತ ದುಪ್ಪಟ್ಟು ನೀಡಲು ಕಂಪೆನಿ ಮುಂದೆ ಬಂದಿತ್ತು.
ಮಿತ್ರನಿಗೆ ಅದುವೇ ಸಾಕಾಯ್ತು. ತುಂಬಾ ಖುಷಿ ಪಟ್ಟಿದ್ದ. ಮನೆಯವರೂ ಸಂತಸ ಪಟ್ಟಿದ್ದರು. ಇವನಿಂದ ಪ್ರತಿ
ತಿಂಗಳೂ ಸ್ವಲ್ಪ ಮಟ್ಟಿನ ಆರ್ಥಿಕ ನೆರವನ್ನು ಅವರೂ ಬಯಸಿದ್ದರು. ಮನೆಯ ಕಷ್ಟ ಗೊತ್ತಿದ್ದರಿಂದ ಅವರ
ನಿರೀಕ್ಷೆಗೆ ಸೂಕ್ತವಾಗಿ ಸ್ಪಂದಿಸಿದ್ದ.
ತಾನು ಸಣ್ಣ
ಕಂಪೆನಿಯಲ್ಲಿರುವುದು, ಕಡಿಮೆ ಸಂಬಳ ಎಂಬ ಕೀಳರಿಮೆ ಅವನಿಗೆ ಇರಲಿಲ್ಲ. ನಾನು ಶಿಕ್ಷಣ ಪಡೆಯಲು
ಹೂಡಿದ ಬಂಡವಾಳಕ್ಕಿಂತ ಹೆಚ್ಚು ಸಂಬಳ ಸಿಗುತ್ತಿದೆ. ಸಿಕ್ಕಿದ್ದರಲ್ಲೇ ತೃಪ್ತ ಎಂಬ ಸಮಾಧಾನ
ಆತನಲ್ಲಿತ್ತು. ಇವನ ಕೆಲಸವನ್ನು ಕಂಪೆನಿ ಮಾಲೀಕರು ಮೆಚ್ಚಿಕೊಂಡಿದ್ದರು. ಅವರಷ್ಟೇ ಅಲ್ಲ; ಅದೇ
ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸುಂದರ ತರುಣಿ ಕೆಲಸವನ್ನಷ್ಟೇ ಅಲ್ಲ ಇವನನ್ನೂ
ಮೆಚ್ಚಿಕೊಂಡಿದ್ದಳು ಸ್ನೇಹಿತೆಯಾಗಿ! ಇವನು ಕೆಲಸಕ್ಕೆ ಸೇರಿದ ಮರು ವರ್ಷ ಆಕೆ ಕಂಪೆನಿ
ಸೇರಿದ್ದಳು.
ಹುಡುಗಿಯರ
ವಿಷಯದಲ್ಲಿ ನನ್ನ ಗೆಳೆಯ ಸ್ವಲ್ಪ ದೂರವೇ. ವಿದ್ಯಾರ್ಥಿ ಜೀವನದಲ್ಲಿ ಎಂದೂ ಹುಡುಗಿಯರ ಹಿಂದೆ
ಬಿದ್ದವನಲ್ಲ. ಸಹಪಾಠಿ ಮಿತ್ರೆಯರೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತಾಡುತ್ತಿದ್ದ. ಆವಾಗೆಲ್ಲ
ಆತನಿಗೆ ಜೀವನದಲ್ಲಿ ನೆಲೆ ಕಂಡುಕೊಳ್ಳುವುದೇ ಮುಖ್ಯವಾಗಿತ್ತು. ಪ್ರೀತಿ ಪ್ರೇಮದ ಬಗ್ಗೆ
ತಲೆಕೆಡಿಕೊಂಡವನಲ್ಲ. ವೃತ್ತಿಗೆ ಸೇರಿದ ನಂತರ ಆತನ ಮನಸ್ಸಲ್ಲಿ ಪ್ರೀತಿ ಎಂಬ ಮಾಯಾವಿ
ತಂಗಾಳಿಯಂತೆ ಬೀಸಿರಬೇಕು. ಪ್ರೀತಿಯಲ್ಲಿ ಬಿದ್ದಿದ್ದ.
ಕಚೇರಿಯಲ್ಲಿ ಈತನೇ
ಅನುಭವಿ. ಹಾಗಾಗಿ ಹೊಸದಾಗಿ ಸೇರಿದ್ದ ಅವಳಿಗೆ ಕೆಲಸವನ್ನು ಹೇಳಿಕೊಡುವ ಜವಾಬ್ದಾರಿ ಇವನಿಗೆ
ವಹಿಸಿದ್ದರು ಮ್ಯಾನೇಜರ್. ಇವನ ಆಂತರ್ಯವನ್ನು ಸರಿಯಾಗಿ ಅರ್ಥೈಸಿಕೊಂಡ ಆಕೆ, ಇವನೊಂದಿಗೆ
ಆತ್ಮೀಯವಾಗಿ ಇದ್ದಳು. ಕೆಲವು ದಿನಗಳಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು ಅವರಿಬ್ಬರು. ಹುಡುಗಿಯ
ಆತ್ಮೀಯತೆಯನ್ನು ಗೆಳೆಯ ತಪ್ಪಾಗಿ ಅರ್ಥೈಸಿಕೊಂಡ. ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆ
ಅಂದುಕೊಂಡಿದ್ದ. ಇವನು ಅವಳನ್ನು ಆರಾಧಿಸಲು ಆರಂಭಿಸಿದ್ದ. ಮೊದಲ ಪ್ರೀತಿ ನೋಡಿ! ಆಕೆಯ ಬಗ್ಗೆ
ನನ್ನಲ್ಲಿ ಪ್ರಸ್ತಾಪಿಸಿದಾಗ ನೇರವಾಗಿ ನಿನ್ನ ಭಾವನೆಗಳನ್ನು ಹೇಳು ಅಂದಿದ್ದೆ. ಒಂದು ದಿನ
ನೇರವಾಗಿ ಕೇಳಿಬಿಟ್ಟ. ಕೈ ಕುಯ್ದು ಕೊಳ್ಳಬೇಕಾದ ಸ್ಥಿತಿ ಆ ದಿನ ಸೃಷ್ಟಿಯಾಗಿತ್ತು. ಇವನ
ಪ್ರೀತಿಯನ್ನು ಆಕೆ ತಿರಸ್ಕರಿಸಿದ್ದಳು. ಗೆಳೆತನ ಬಿಟ್ಟರೆ ಮತ್ತೇನಿಲ್ಲ ಎಂದು ನೇರವಾಗಿ
ಹೇಳಿದ್ದಳು. ನೀನು ಹೀಗೆಲ್ಲಾ ಕಲ್ಪಿಸಿಕೊಳ್ಳುತ್ತೀಯ ಅಂದುಕೊಂಡಿರಲಿಲ್ಲ ಎಂದು ಕಣ್ಣೀರು ಹಾಕುತ್ತಾ
ಜಾಡಿಸಿದ್ದಳು.
‘ಅಂದುಕೊಂಡಿದ್ದು
ಒಂದೂ ನಡೀತಿಲ್ವಲ್ಲಾ’ ಎಂದು ನನಗೆ ದೂರವಾಣಿ ಕರೆ ಮಾಡಿ ಅತ್ತಿದ್ದ. ಆ ಆರ್‌ಜೆಯಂತೆ ನಾನೂ
ಸಾಂತ್ವನ ಮಾಡಿದ್ದೆ. ಹೋಗ್ಲಿ ಬಿಡು ಅಂದಿದ್ದೆ. ‘ಪ್ರೀತಿ ಸಿಗದಿದ್ದರೆ ಹೋಗಲಿ ಮಾರಾಯ, ಇನ್ನು
ಆಫೀಸಲ್ಲಿ ಆಕೆ ಮುಖ ತೋರಿಸುವುದಾದರೂ ಹೇಗೆ’ ಎಂದು ಕೇಳಿದ್ದ. ಅದರೆಲ್ಲೇನಿದೆ? ಎಂದು ನಿನ್ನ
ಮನವಿಯನ್ನು ಸ್ವೀಕರಿಸುವುದಕ್ಕೂ, ನಿರಾಕರಿಸುವುದಕ್ಕೂ ಅವಳಿಗೆ ಸ್ವಾತಂತ್ರ‍್ಯ ಇದೆ ಎಂದು
ವಿವರಿಸಿದ್ದೆ. ಆದರೆ ಯಾಕೋ ಏನೋ ಅಪರಾಧ ಮನೋಭಾವದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಮಾಲೀಕರು
ಕಾರಣ ಕೇಳಿದಾಗ ಹೇಳಲಾಗದೇ ತಡವರಿಸಿದ್ದ. ಹುಡುಗಿಗೆ ಮುಖ ತೋರಿಸದೇ ಅಲ್ಲಿಂದ ಕಾಲ್ಕಿತ್ತಿದ್ದ.
ಬೆಂಗಳೂರಿನಲ್ಲಿ
ಅವಕಾಶಗಳಿಗೆ ದಾರಿದ್ರ‍್ಯವೇ? ಅಲ್ಲಿ ಕೆಲಸ ಬಿಟ್ಟ ಒಂದು ವಾರದಲ್ಲಿ ಮತ್ತೊಂದು ಕಂಪೆನಿಯಲ್ಲಿ
ಇನ್ನೂ ಹೆಚ್ಚಿನ ಸಂಬಳದ ಕೆಲಸ ಸಿಕ್ಕಿತ್ತು. ಮೊದಲ ಪ್ರೀತಿ ಒಂದು ವಾರಗಳ ಕಾಲ ಆತನನ್ನು
ದುಃಖಿಸುವಂತೆ ಮಾಡಿತ್ತು. ಹೊಸ ಕೆಲಸದಲ್ಲಿ ತೊಡಗಿಕೊಂಡ ನಂತರ ಆ ಘಟನೆಗಳನ್ನು ಮರೆಯಲು
ಆರಂಭಿಸಿದ್ದ. ಕನಸುಗಳು ನನಸಾಗದೇ ಇರುವುದು ಅವನಿಗೆ ಹೊಸದಲ್ಲ ನೋಡಿ! ನನಸಾಗದ ಕನಸಗಳು ಅವನ
ಜೀವನದ ಹಾಸುಹೊಕ್ಕು!
ನಾನು ಕೋರ್ಸ್
ಮುಗಿಸಿ ಬೆಂಗಳೂರಿಗೆ ಕಾಲಿಟ್ಟಿದ್ದಾಗ ಖುದ್ದು ಗೆಳೆಯನೇ ನನ್ನನ್ನು ಅದೇ ನಗು ಮುಖದಲ್ಲಿ ಸ್ವಾಗತಿಸಿ
ತನ್ನ ರೂಮಿಗೆ ಕರೆದೊಯ್ದಿದ್ದ. ಹಿ ವಾಸ್ ವೆಲ್
ಸೆಟಲ್ಡ್! ಮದುವೆ ಒಂದು ಆದರಾಯಿತು. ಕೆಲಸಕ್ಕೆ ಸೇರಿದ ಎರಡು ಮೂರು ವರ್ಷದಲ್ಲಿ ತನ್ನ ಕಾಲ ಮೇಲೆ
ಸ್ವತಂತ್ರವಾಗಿ ನಿಂತಿದ್ದಾನೆ. ನನಗೂ ಖುಷಿಯಾಯಿತು. ಅತ್ತ ಮನೆಯಲ್ಲಿ ಆತನ ಬಗ್ಗೆ ಪೋಷಕರೂ
ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.
~
ಮರುದಿನ ಶುಕ್ರವಾರ
ಬೆಳಿಗ್ಗೆ ೧೧ರ ಸುಮಾರು. ನೈನ್ ಫೋರ್ ಏಯ್ಟ್ ಡಬಲ್ ಒನ್ ಫೋರ್ ಏಯ್ಟ್ ತ್ರೀ ಫೋರ್ ಟು...
ಹೊಸ ನಂಬರಿನಿಂದ ಫೋನ್ ಬಂತು. ಯಾರಪ್ಪಾ ಅಂದುಕೊಂಡೇ ರಿಸೀವ್ ಮಾಡಿದೆ. ಆ ಕಡೆಯಿಂದ ಗೆಳೆಯನ
ಧ್ವನಿ. ನಗುತ್ತಿದ್ದ. ‘ಯಾವುದೋ ಇದು ಹೊಸ ನಂಬರ್’ ಅಂತ ಕೇಳಿದೆ. ‘ಹೊಸ ಸೆಟ್ ತೆಗೆದೆ,
ಅದಕ್ಕೆ ಹೊಸ ಸಿಮ್ ಹಾಕಿದ್ದೀನಿ’ ಅಂದ. ‘ಏನೋ ವಿಷಯ’ ಅಂದೆ. ‘ಒಂದು ಮೇಲ್ ಬಂದಿದೆ. ಅದೇ ಹಳೇ
ಕಂಪೆನಿಯಲ್ಲಿ ಇದ್ಳಲ್ಲಾ, ಮುಂದಿನ ತಿಂಗಳು ಅವಳ ಮದುವೆ ಅಂತೆ ಇನ್‌ವೈಟ್ ಮಾಡಿದ್ದಾಳೆ.
ಹೋಗ್ಲೇನೋ’ ಎಂದು ಕೇಳಿದ. ‘ನಿನ್ನಿಷ್ಟ’ ಎಂದೆ. ‘ಏನು ಮಾಡೋದು ಅಂತ ಗೋತ್ತಾಗ್ತಾ ಇಲ್ಲ ಕಣೋ. ಆಮೇಲೆ
ಮಾತಾಡ್ತೀನಿ’ ಅಂದವನೇ ಫೋನ್ ಕಟ್ ಮಾಡಿದ.