ಶನಿವಾರ, ಜುಲೈ 18, 2009

ಪ್ರೇಮ ಧ್ಯಾನದ ಪಥದಲ್ಲಿ, ಕರ್ವಾಲೋ ಮತ್ತು ತೂಫಾನ್ ಮೇಲ್

ನಾನು ಇದುವರೆಗೆ ಮಾಡಿದ ಬಹು ದೊಡ್ಡ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಸಹೋದ್ಯೋಗಿ ಮಿತ್ರರೊಬ್ಬರು ನಾನು ಬರೆದ "ಮನಸೇ ಮತ್ತೆ ಮತ್ತೆ ಕಾಡಬೇಡ ಪ್ಲೀಸ್" ಲೇಖನವನ್ನು ಓದಿ ನಿಮ್ಮ ಜೀವನದಲ್ಲಿ ನೀವು ಮಾಡಿದ ಬಹು ದೊಡ್ಡ ತಪ್ಪು ಇದೇ ಅನಿಸುತ್ತೆ ಅಂತ ಕೆಣಕಿದ್ದರು. ಅವರಿಗೆ ಅದು ನನ್ನ ಕಥೆಯಲ್ಲ ಸುಮ್ಮನೆ ಹಾಗೆ ಬರೆದೆ ಎಂದು ಹಲವು ಬಾರಿ ಹೇಳಿದ್ದೆನಾದರೂ ಅವರು ನಂಬಲು ಸಿದ್ದರಿರಲಿಲ್ಲ. (ಅವರು ಮಾತ್ರವಲ್ಲ ಆತ್ಮೀಯ ಸ್ನೇಹಿತರೂ ಕೂಡ ಲೇಖನ ಓದಿ ಇದೇ ಅಭಿಪ್ರಾಯವನ್ನು ಹೇಳಿದ್ದರು).
ವಿಷಯಾಂತರ ಮಾಡುತ್ತಿಲ್ಲ. ಸಾಹಿತ್ಯವನ್ನು ಓದಲು ಆರಂಭಿಸಿದ್ದೇನೆ. ಇದುವರೆಗೆ ಕನ್ನಡ ಸಾಹಿತ್ಯವನ್ನು ಓದದೇ ಇದ್ದುದು ನಾನು ಮಾಡಿದ ಮಹಾನ್ ತಪ್ಪು ಎಂಬುದು ಮನದಟ್ಟಾಗಿದೆ. ಓದದೇ ಇರುವುದಕ್ಕೂ ಕಾರಣವಿತ್ತು. ವಿದ್ಯಾರ್ಥಿ ಜೀವನದಲ್ಲಿ ವಿಜ್ಞಾನವನ್ನು ನಿರ್ದಿಷ್ಟ ವಿಷಯವನ್ನಾಗಿ ಆರಿಸಿಕೊಂಡಿದ್ದರಿಂದ ಸಾಹಿತ್ಯ,ದ ಕಡೆಗೆ ಗಮನಕೊಡಲಾಗಿಲ್ಲ ಎಂಬ ಕಾರಣವನ್ನು ಸಂಪೂರ್ಣವಾಗಿ ಒಪ್ಪತಕ್ಕದ್ದಲ್ಲ ಎಂದು ಹೇಳಿ ಹಿರಿಯ ಸಹೋದ್ಯೋಗಿಯೊಬ್ಬರು ಕಿವಿಹಿಂಡಿದ್ದರು. ನೀವು ಸಾಹಿತ್ಯವನ್ನು ಓದಲೇ ಬೇಕೆಂಬುದು ಅವರ ಪ್ರೀತಿಪೂರ್ವಕ ಹಕ್ಕೋತ್ತಾಯವಾಗಿತ್ತು. ನಾನೇ ಖುದ್ದಾಗಿ ನಿಮಗೊಂದು ಪುಸ್ತಕ ತಂದು ಕೊಡುತ್ತೇನೆ ಎಂದು ಹೇಳಿ ಕೆಲವು ವಾರಗಳ(!) ಬಳಿಕ ಓಶೋ ಅವರ ಪ್ರೇಮ ಧ್ಯಾನದ ಪಥದಲ್ಲಿ ಎಂಬ ಪುಸ್ತಕವನ್ನು ಕೈಗಿತ್ತರು.
ಇನ್ನೋರ್ವ ಸಹೋದ್ಯೋಗಿ ಮಿತ್ರರೊಬ್ಬರಿಗೆ (ಸಮಾನ ವಯಸ್ಕ) ಈ ವಿಷಯ ತಿಳಿಸಿದೆ. ನನ್ನನ್ನು ಕೆಣಕಲು ಅವರಿಗೆ ಇಷಯವೊಂದು ಸಿಕ್ಕಿತ್ತು ಅನ್ಸತ್ತೆ. ಏನ್ ಸೂರ್ಯ.... ೨೦ರ ಆಸುಪಾಸಿನಲ್ಲೆ ಓಶೋ ಅವರ ಪುಸ್ತಕವನ್ನು ಓದಲು ಶುರು ಮಾಡಿದ್ದೀರಿ? ಎಂದು ಪ್ರಶ್ನೆ ಕೇಳಿದರು ಹಾಗೆ ಸುಮ್ಮನೆ. ಪುಸ್ತಕದಲ್ಲಿನ ವಿಚಾರವೂ ಹಾಗಿತ್ತು. ಅಧ್ಯಾತ್ಮ, ಧ್ಯಾನ ಇವುಗಳೇ ಆ ಪುಸ್ತಕದಲ್ಲಿ ಆಗಾಗ ಪುನರಾವರ್ತನೆ ಆಗುತ್ತಿದ್ದ ಎರಡು ಪದಗಳು. (ಅದೇ ಪುಸ್ತಕದಲ್ಲಿ ಜೀವನದಲ್ಲಿ ಪ್ರೀತಿ, ಸ್ನೇಹ, ಮುಖವಾಡಗಳ ಕುರಿತೂ ಮಾಹಿತಿ ಇತ್ತು.) ಇವೆರಡೂ ಈ ವಯಸ್ಸಿನಲ್ಲಿ ಯಾಕೆ? ಎಂಬುದು ಅವರ ಪ್ರಶ್ನೆಯ ತಾತ್ಪರ್ಯವಾಗಿತ್ತು. (ಬಹುಶಃ ಆ ಪುಸ್ತಕವನ್ನು ಅವರು ಓದದಿದ್ದರೂ ಓಶೋ ಅವರ ಬೇರೆ ಪುಸ್ತಕಗಳನ್ನು ಓದಿರಬಹುದು. ಅದನ್ನು ನಾನು ಅವರಲ್ಲಿ ಕೇಳಲಿಲ್ಲ.)
ಅವರು ಏನಂದುಕೊಂಡರೋ ಏನೋ ಅವರ ಬ್ಯಾಗ್‌ನಿಂದ ಎರಡು ಪುಸ್ತಕಗಳನ್ನು ನನಗೆ ನೀಡಿ ಇದನ್ನು ಓದಿ ಎಂಬ ಸಲಹೆ ನೀಡಿದರು. ಪುಸ್ತಕ ತೆಳ್ಳಗೆ ಇದ್ದಿದ್ದರಿಂದ ಏನೂ ಮಾತಾಡದೆ ತೆಗೆದುಕೊಂಡೆ. ಪ್ರೇಮ ಧ್ಯಾನದ ಪಥದಲ್ಲಿ ಪುಸ್ತಕದಲ್ಲಿ ೨೦೦ ಚಿಲ್ಲರೆ ಪುಟಗಳಿದ್ದರೆ ಇವೆರಡೂ ಪುಸ್ತಕಗಳು ಒಟ್ಟು ಸುಮಾರು ೨೪೦ ಪುಸ್ತಕಗಳನ್ನು ಹೊಂದಿದ್ದವು. ಒಂದು ಪೂರ್ಣ ಚಂದ್ರ ತೇಜಸ್ವಿ ಅವರ ಕರ್ವಾಲೋ ಹಾಗೂ ಇನ್ನೊಂದು "ಅನಿಸುತಿದೆ ಯಾಕೋ ಇಂದು’ ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲ್.
ತೇಜಸ್ವಿ ಅವರು ತೆಗೆದಿರುವ ಛಾಯಾಚಿತ್ರಗಳ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ದಿನಪತ್ರಿಕೆಯಲ್ಲಿ, ಸಾಹಿತ್ಯ ಪ್ರೇಮಿಗಳ ಮಾತುಗಳ ಮೂಲಕ ಕೇಳಿ ತಿಳಿದಿದ್ದೆ. ಕಾಯ್ಕಿಣಿಯವರು ಇತ್ತೀಚಿನವರು. ಅವರ ಬಗ್ಗೆಯೂ ಸ್ವಲ್ಪ ಗೊತ್ತಿದೆ.
ಈ ಎರಡು ಪುಸ್ತಕಗಳು ಕೈ ಸೇರೋ ಹೊತ್ತಿಗೆ ಓಶೋ ಅವರ ಪಥದಲ್ಲಿ ಅರ್ಧ ಓದಿ ಮುಗಿಸಿದ್ದೆ. ’ಪಥದಲಿ’ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿರುವಂತದು. ಅದರಲ್ಲಿರುವ ವಿಚಾರಗಳು ಮುದ ನೀಡಿತಾದರೂ, ಭಾಷಾಂತರ ಇಷ್ಟಾಗಲಿಲ್ಲ. ಓಶೋ ಅವರು ಹೇಳಿರುವ ಪ್ರತಿಯೊಂದು ವಿಚಾರವೂ ಚಿಂತನೆಗೆ ಹಚ್ಚುವಂತವು. ಅವರು ನೀಡುವ ಪ್ರತಿಯೊಂದು ಸಲಹೆಯು ಕೂಡ ನಮ್ಮ ಸಭ್ಯ ಜೀವನಕ್ಕೆ ನೆರವಾಗಬಲ್ಲುದು. ಆದರೆ ಅದನ್ನು ಜೀವನದಲ್ಲಿ ಅಳವಡಿಸಲು ದೃಢ ನಿಶ್ಚಯ ಬೇಕು, ಬದ್ಧತೆ ಬೇಕು.
ತೇಜಸ್ವಿಯವರ ಮೇಲಿದ್ದ ಸಹಜ ಕುತೂಹಲ ನನ್ನನ್ನು ಕಾರ್ವಾಲೋ ಕಡೆ ವಾಲುವಂತೆ ಮಾಡಿತು. ಮೊದಲ ಅಧ್ಯಾಯವನ್ನು ಓದುತ್ತಿರುವಾಗಲೇ ನಾನು ಎಂಥಾ ತಪ್ಪು ಮಾಡಿದ್ದೇನೆ ಎಂದನ್ನಿಸಿತು. ಪುಟದ ಮೊದಲ ಸಾಲೇ ನನ್ನನ್ನು ಆಕರ್ಷಿಸಿತು. ನವಿರಾದ ನಿರೂಪಣೆ ಆ ಪುಸ್ತಕವನ್ನು ಓದುವಂತೆ ಮಾಡುತ್ತದೆ. ಮಂದಣ್ಣ, ಕಿವಿ, ಜೇನ್ನೊಣ, ಹಳೆ ಜೀಪು, ಪ್ರತಿಯೊಂದು ಕೂಡ ನೆನಪಿನಂಗಳದಲ್ಲಿ ಉಳಿಯುವಂತೆ ತೇಜಸ್ವಿ ಬರೆದಿದ್ದಾರೆ. ಕೊನೆಗೆ ಒಂಚೂರು ಬೋರು ಹೊಡೆಸಿದರೂ ಓದಿಸಿಕೊಂಡು ಹೋಗಿತ್ತು. ಅಂತ್ಯದಲ್ಲಿ ಹಾರುವ ಓತಿ ಸಿಕ್ಕಿದ್ದರೆ ಚೆನ್ನಾಗಿತ್ತು ಅಂತ ನನಗೆ ಅನ್ನಿಸಿದ್ದು ಸುಳ್ಳಲ್ಲ. ಮಂದಣ್ಣ ಹಾಗೂ ಕರ್ವಾಲೋ, ಕಿವಿ ಮನಸ್ಸನ್ನು ಆಕರ್ಷಿಸಿದ ಮೂರು ಪಾತ್ರಗಳು. ಕರ್ವಾಲೋ ಓದಿ ಮುಗಿಸಿದ ತಕ್ಷಣ ಜೇನು ಕೃಷಿ ಮಾಡುವ ಆಲೋಚನೆ ಮನದಲ್ಲಿ ಮೂಡಿತಾದರೂ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಜೇನು ಸಾಕಣೆ ಅಸಂಭವ ಎಂದು ತಕ್ಷಣ ಮನಸ್ಸು ಮೆದುಳಿಗೆ ಸೂಚನೆ ನೀಡಿ ನನ್ನ ಆಲೋಚನೆಗೆ ಬ್ರೇಕ್ ಹಾಕಿತು.
ತೂಫಾನ್ ಮೇಲ್ ಜಯಂತ ಕಾಯ್ಕಿಣಿ ಅವರ ಬಳಿಯಿರುವ ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿ ಈ ಪುಸ್ತಕ. ಅದರಲ್ಲಿ ೧೨ ಕಥೆಗಳಿವೆ. ಒಂದಕ್ಕಿಂತ ಒಂದು ಭಿನ್ನ. ಪ್ರತಿ ಕಥೆಯನ್ನು ಎರಡೆರಡು ಬಾರಿ ಓದಿದರೆ ಮಾತ್ರ ನಿಮಗೆ ಅರ್ಥವಾಗುವುದು. ಹೋಲಿಕೆ ಮಾಡುವ ಕೌಶಲ ಅವರಿಗೆ ದೈವದತ್ತವಾಗಿ ಒಲಿದಿರುವುದು ಪ್ರತಿ ಕತೆಯಲ್ಲೂ ಗೋಚರವಾಗುತ್ತದೆ.
ಇನ್ನು ಮುಂದೆ ಸಾಹಿತ್ಯ ಓದಬೇಕು ಎಂದು ಮೂರು ಪುಸ್ತಕಗಳನ್ನು ಓದಿ ಮುಗಿಸಿದಾಗ ತೀರ್ಮಾನಿಸಿದ್ದೆ.

ನನ್ನ ಸಾಹಿತ್ಯ ಓದಿಗೆಕಾರಣರಾದ ಇಬ್ಬರು ಸಹೋದ್ಯೋಗಿ ಮಿತ್ರರಿಗೆ ನಾನು ಕೃತಜ್ಞ.