ಮತ್ತೆ ಮನಸು ಮುರಿದಿದೆ. ಕನಸು ಮುರುಟಿದೆ. ಒಂದು ವರ್ಷದಿಂದ ಅದೆಷ್ಟು ಗೆಲುವಾಗಿದ್ದೆ ಗೊತ್ತಾ? ಯಾಕೋ ಮಾರಾಯ ಮೂಡಿಯಾಗಿದ್ದಿಯಲ್ಲಾ ಎಂದು ಹೇಳುತ್ತಿದ್ದ ನನ್ನ ಸಹೋದ್ಯೋಗಿಗಳೆಲ್ಲಾ ನನ್ನ ನೋಡಿ ಪಟ್ಟ ಸಂತೋಷ ಅಷ್ಟಿಷ್ಟಲ್ಲ..
ಪ್ರೀತಿ ಜೀವನದ ಭಾಗವೇ ಹೊರತು, ಪ್ರೀತಿಯೇ ಜೀವನ ಅಲ್ಲ ನೋಡು. ನಮ್ಮನ್ನು ನಂಬಿಕೊಂಡು ಇನ್ನಷ್ಟು ಜನ ಇದ್ದಾರೆ ಎನ್ನುವುದು ಸತ್ಯ ತಾನೆ? ಕಾಲೇಜಿನಲ್ಲಿ ನಡೆದ ಪ್ರೀತಿಯ ಕಹಿ ನೆನಪಲ್ಲೇ ಬೆಂಗಳೂರಿಗೆ ಬಂದೆ. ಮನಸ್ಸು, ಹೊಟ್ಟೆ ದೇಹದ ಅವಿಭಾಜ್ಯ ಅಂಗವಾದರೂ ಮನಸ್ಸಿನ ಮಾತನ್ನು ಹೊಟ್ಟೆ ಕೇಳಬೇಕಲ್ಲಾ? ಹಸಿವು ಬಿಟ್ಟರೆ ಅದಕ್ಕೆ ಬೇರೇನು ಗೊತ್ತು. ಹಸಿವು ಕೆಲಸವನ್ನು ಅರಸುವಂತೆ ಮಾಡಿತು. ಕೆಲಸವೇನೊ ಸಿಕ್ಕಿತು. ವೃತ್ತಿ ಜೀವನದ ವಿಷಯದಲ್ಲಿ ನಾನು ಗೆದ್ದೆನಾದರೂ, ಪ್ರೀತಿ ಜೀವನದಲ್ಲಿ ಸೋತೆನಲ್ಲಾ ಎಂಬ ಕೊರಗು ಪ್ರತಿ ಕ್ಷಣ ಕಾಡುತ್ತಿತ್ತು.
ಎಲ್ಲದೊಕ್ಕೊಂದು ಅಂತ್ಯ ಇದ್ದೇ ಇದೆ ಎಂಬ ಹಿರಿಯರ ಮಾತು ಸತ್ಯ ಆಯಿತು ನೋಡು. ಅದೊಂದು ದಿನ ಕಂಪ್ಯೂಟರ್ ಮುಂದೆ ಕುಳಿತು ಫೇಸ್‌ಬುಕ್ ಪುಟ ತೆರೆದು ಕುಳಿತೆ. ಕೆಲ ತಿಂಗಳ ಹಿಂದಷ್ಟೆ ಮ್ಯಾರಿಟಲ್ ಸ್ಟೇಟಸ್ ಅನ್ನು ’ಇನ್ ಅ ರಿಲೇಷನ್‌ಶಿಪ್’ನಿಂದ ’ಸಿಂಗಲ್’ಗೆ ಬದಲಾಯಿಸಿದ್ದೆ. ಆ ದಿನ ಕೆಲವು ಮಂದಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಕೆಲವರು ನನಗೆ ಪರಿಚಿತರಾಗಿದ್ದರೆ ಇನ್ನು ಕೆಲವರು ನನ್ನ ಗೆಳೆಯರ ಮ್ಯೂಚುವಲ್ ಫ್ರೆಂಡ್ಸ್ ಪಟ್ಟಿಯಲ್ಲಿದ್ದವರು. ಒಬ್ಬಳ ಹೊರತಾಗಿ!
ಅವಳ ಪರಿಚಯ ನನಗಿಲ್ಲ. ಹೋಗಲಿ ನನ್ನ ಗೆಳೆಯರ‍್ಯಾರು ಆಕೆಯ ಫ್ರೆಂಡ್ ಲಿಸ್ಟ್‌ನಲ್ಲಿ ಇಲ್ಲ. ಅವಳ ಪ್ರೊಫೈಲ್ ಎಲ್ಲ ತಡಕಾಡಿದೆ. ಫೋಟೊಗಳಲ್ಲಿ ಇಣುಕಿದೆ. ಉಹ್ಞುಂ... ಅವಳು ಅಪರಿಚಿತೆ. ಹಾಗಾಗಿ ಮನವಿಯನ್ನು ಪುರಸ್ಕರಿಸಲಿಲ್ಲ. ಆದರೆ ಅವಳು ಯಾರು? ಯಾವನಿಗ್ಗೊತ್ತು ಅಂತ ಸುಮ್ಮನಾದೆ. ಪ್ರೀತಿಯ ಸಿಹಿ-ಕಹಿ ನೆಂಪಲ್ಲಿ ಆಫೀಸ್ ಕೆಲಸ ಸಾಗೇ ಇತ್ತು. ವಾರ ಬಿಟ್ಟು ಫೇಸ್‌ಬುಕ್ ತೆರೆದೆ. ಮೆಸೇಜುಗಳ ಪಟ್ಟಿಯಲ್ಲಿ ಆ ಹುಡುಗಿಯ ಮೆಸೇಜು ತಣ್ಣಗೆ ಕುಳಿತಿತ್ತು.
ಹಾಯ್ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಯಾಕೆ ಮಾಡಿಲ್ಲ? ಐ ವನ್ನಾ ಬಿ ಯುವರ್ ಫ್ರೆಂಡ್. ಪ್ಲೀಸ್... ಡೋಂಟ್ ಡಿಸಪಾಂಯಿಟ್ ಮಿ
ಯುವರ‍್ಸ್..
ಯಾರಪ್ಪಾ ಇದು ಈ ಥರ ತಲೆತಿಂತಾಳೆ ಅಂದುಕೊಂಡೆ. ಎಷ್ಟೆ ಆದ್ರೂ ಹುಡುಗೀರ ಗೋಗರೆಯುವ ರಿಕ್ವೆಸ್ಟ್‌ಗೆ ಜಾರಿ ಹೋಗುವ ಮನಸ್ಸು ಅಲ್ವಾ ನಮ್ಮದು. ನಾನು ಜಾರಿ ಹೋದೆ. ಫ್ರೆಂಡ್ ರಿಕ್ವೆಸ್ಟ್ ಕನ್‌ಫರ್ಮಡ್! ನನ್ನ ಜೀವನದ ಹೊಸ ಅಧ್ಯಾಯದ ಪುಟ ತೆರೆದುಕೊಂಡಿದ್ದು ಆಗಲೇ!
ಅವಳು ಇದ್ದದ್ದೂ ಬೆಂಗಳೂರಲ್ಲೇ. ದೊಡ್ಡ ಹುದ್ದೆ. ಸಾಫ್ಟ್‌ವೇರ್ ಎಂಜಿನಿಯರ್ ಬೇರೆ. ನನ್ನನ್ನು ಎಲ್ಲಿ ನೋಡಿದ್ದಳೋ.? ನನ್ನ ಫ್ರೆಂಡ್ ಶಿಪ್ ಏಕೆ ಬೇಕೋ ಎಂದು ಅವಳಿಗೆ ಎನಿಸಿತ್ತೋ.. ? ಈ ಪ್ರಶ್ನೆಗಳಿಗೆ ಇನ್ನೂ ನನಗೆ ಉತ್ತರ ಸಿಕ್ಕಿಲ್ಲ. ಉತ್ತರ ಹುಡುಕುವ ಪ್ರಯತ್ನ ಮುಂದುವರೆದೇ ಇದೆ. ಸಿಕ್ಕುತ್ತದೋ ಇಲ್ವೋ ಗೊತ್ತಿಲ್ಲ. ಪ್ರಯತ್ನ ಮಾತ್ರ ನಿರಂತರ...
ನನ್ನ ಪೇಸ್‌ಬುಕ್ ಫ್ರೆಂಡ್‌ಗಳ ಸಾಲಿಗೆ ಅವಳು ಸೇರಿಕೊಂಡಳು. ಅಲ್ಲಿ ನನಗೆ ನೇರವಾಗಿ ಪರಿಚಯ ಇಲ್ಲದೇ ಇದ್ದ ಹಲವು ಗೆಳೆಯರಿದ್ದರು. ಆ ಪಟ್ಟಿಯಲ್ಲಿ ಇವಳೂ. ಅದರ ಹೊರತಾಗಿ ಆಕೆಯ ಬಗ್ಗೆ ನನಗೆ ಅಷ್ಟೇನೂ ಕುತೂಹಲ ಇರಲಿಲ್ಲ. ನನಗೆ ಬೇಕಾಗಿಯೂ ಇರಲಿಲ್ಲ. ಆದರೆ ಆ ಹುಡುಗಿ ಬಿಡಬೇಕಲ್ಲ. ದಿನದ ೨೪ ಗಂಟೆಯೂ ಫೇಸ್‌ಬುಕ್‌ನಲ್ಲಿ ಕಣ್ಣಿಡುತ್ತಿದ್ದಳೋ ಏನೋ. ನಾನು ಯಾವಾಗ ಫೇಸ್‌ಬುಕ್ ತೆರೆದರೂ ಆನ್‌ಲೈನ್‌ನಲ್ಲಿ ಅವಳಿರುತ್ತಿದ್ದಳು ಒಂದಷ್ಟು ಮೆಸೇಜುಗಳೊಂದಿಗೆ. ಹಲವು ಸ್ಟೇಟಸ್ ಅಪ್‌ಡೇಟ್‌ಗಳೊಂದಿಗೆ.
ನಾನು ಆನ್‌ಲೈನ್‌ಗೆ ಬರುವುದೇ ತಡ ಶುರು ಹಚ್ಚುಬಿಡುತ್ತಿದ್ದಳು ಮಾತುಗಳನ್ನು. ತುಂಬಾ ದಿನದಿಂದ ಪರಿಚಯ ಇರುವ ವ್ಯಕ್ತಿ ಜೊತೆ ಹರಟೆ ಹೊಡೆಯುವ ರೀತಿಯಲ್ಲಿ ಚಾಟ್ ಬಾಕ್ಸ್‌ಗಳಲ್ಲಿ ಶಬ್ದಗಳನ್ನು ಹರಿಯ ಬಿಡುತ್ತಿದ್ದಳು. ನನಗೋ ಮಾತಾಡಲು ಮುಜುಗರ, ನಂಬಲು ಸಂಶಯ. ಯಾರಪ್ಪ ಇವಳು ಹೀಗೆ ಮಾತಡ್ತಾಳೆ ಒಮ್ಮೆನೂ ನೋಡಿಲ್ಲ. ಹೇಗಪ್ಪಾ ಇವಳ ಜೊತೆ ಹೆಣಗೋದು ಅಂತ ಅಂದುಕೊಂಡೆ. ಅವಳೇ ಇಷ್ಟೊಂದು ಮಾತಾಡುವಾಗ ನಾನು ಪ್ರತಿಕ್ರಿಯಿಸದೇ ಇರುವುದು ಸರಿ ಇರಲ್ಲ ಅಂತ ನಾನು ರಿಪ್ಲೈ ಮಾಡಿದೆ. ಯಾವಾಗಲೂ ನಾಲ್ಕು ದಿನಕ್ಕೊಮ್ಮೆ ಫೇಸ್‌ಬುಕ್ ತೆರೆಯುವತ್ತಿದ್ದವ, ಅವಳ ಸಲುವಾಗಿ ಪ್ರತಿ ದಿನ ತೆರೆಯಲೇ ಬೇಕಾಯಿತು! ಪೇಸ್‌ಬುಕ್‌ನ ಚಾಟ್ ಬಾಕ್ಸ್‌ನಲ್ಲಿ ಶುರುವಾಯಿತು ನೋಡು ನಮ್ಮ ಮನಸ್ಸಿನ ಪದಗಳ ವಿನಿಮಯ. ಆರಂಭದಲ್ಲಿ ಫೇಸ್‌ಬುಕ್‌ಗಷ್ಟೇ ಸೀಮಿತವಾಗಿದ್ದ ನಮ್ಮ ಮಾತುಕತೆ ಆ ಬಳಿಕ ಮೊಬೈಲ್‌ನಲ್ಲೂ ಆರಂಭವಾಯಿತು.
ಪ್ರತಿ ದಿನ ಪೋನ್ ಕಾಲ್, ಪ್ರತಿ ಕ್ಷಣ ಮೆಸೇಜು.. ನನ್ನ ಮೊಬೈಲಿಂದ ಅವಳಿಗೆ, ಅವಳ ಮೊಬೈಲಿಂದ ನನಗೆ... ದಿನಕಳೆದಂತೆ ಇದು ನಮ್ಮ ದಿನ, ಕ್ಷಣ ಚರಿ ಆಗಿ ಹೋಯಿತು! ಈ ಅವಧಿಯಲ್ಲಿ ನಾವು ಮಾತನಾಡದ ವಿಷಯಗಳೇ ಇಲ್ಲ. ನಮ್ಮಿಬ್ಬರ ವೈಯಕ್ತಿಕ ವಿಚಾರಗಳಲ್ಲದೇ ಜಗತ್ತಿಗೆ ಸಂಬಂಧಿಸಿದ ಅದೆಷ್ಟೋ ವಿಚಾರಗಳು ಕೂಡ ನಮ್ಮ ನಾಲಿಗೆಗಳಲ್ಲಿ ನಲಿದಾಡಿದ್ದವು.
ನಮ್ಮ ಪರಿಚಯ ಆದ ಮೊದಲ ಮೂರು ತಿಂಗಳು ನಾವಿಬ್ಬರು ಮುಖತಾ ಭೇಟಿಯಾಗಿರಲಿಲ್ಲ. ಆ ಕಾರ್ಯಕ್ರಮ ಒಂದು ಬಾಕಿ ಇತ್ತು. ಒಂದು ಭಾನುವಾರ ಅದನ್ನೂ ಪೂರೈಸಿದೆವು. ಎಂಜಿ ರೋಡಿನ ಕೆಫೆ ಕಾಫಿ ಡೇನಲ್ಲಿ. ಮೊದಲ ಬಾರಿ ನಮ್ಮ ನಡುವೆ ನಡೆದ ಭೇಟಿ ಅದು. ಅಂದು ನಾನು ಕುತೂಹಲದ ಸಾಕಾರಮೂರ್ತಿಯಾಗಿದ್ದೆ. ಪ್ರಾಯಶಃ ಕುತೂಹಲ ಅವಳಲ್ಲೂ ಇದ್ದಿರಬಹುದು. ಅವಳ ಕಣ್ಣು ಅದನ್ನೇ ಹೇಳುತ್ತಿತ್ತು ಅಂತ ತೋರುತ್ತದೆ.
ಅದೊಂದು ಸುಂದರ ಸಂಜೆ. ಒಬ್ಬ ಒಳ್ಳೆಯ ಸಹೃದಯಿ ಗೆಳತಿಯನ್ನು ಅಂದು ನಾನು ಮುಖತಾ ಭೇಟಿಯಾಗಿದ್ದೆ. ಆ ಮೂರು ತಿಂಗಳ ಅವಧಿಯಲ್ಲಿ ನಮ್ಮಿಬ್ಬರ ನಡುವೆ ಚಿಗುರಿದ ಸ್ನೇಹ, ನನ್ನ ಹಳೆಯ ಕಹಿ ನೆನಪುಗಳನ್ನು ಭಾಗಶಃ ಮರೆಯುವಂತೆ ಮಾಡಿತ್ತು. ಹರಿಯುವ ನದಿ ಕಸ ಕಡ್ಡಿಗಳನ್ನು ಕೊಚ್ಚಿಕೊಂಡು ಹೋಗುವಂತೆ, ಹೊಸ ಹುಡುಗಿಯ ಸ್ನೇಹ ಕಹಿ ನೆನಪುಗಳನ್ನು ತಳ್ಳಿಕೊಂಡು ಹೋಗಿತ್ತು. ಕೆಲವು ನೆನಪುಗಳು ಇದ್ದರೂ ಅವು ಅಸ್ಪಷ್ಟವಾಗಿದ್ದವು.
ನನಗಿಂತಲೂ ಈ ಭೇಟಿಗೆ ಅವಳೇ ಹೆಚ್ಚು ಹಾತೊರೆದಿದ್ದಳೆಂದು ತೋರುತ್ತದೆ. ಕಾಫಿ ಡೇ ಮೇಜಲ್ಲಿ ಕುಳಿತು ಕಾಫಿಗೆ ಆರ್ಡರ್ ಮಾಡಲು ಅವಳು ಮರೆತಿದ್ದಳು. ನಾನೇ ಮಾಡಿದೆ. ಫೋನಲ್ಲಿ ಅಷ್ಟು ಚೆನ್ನಾಗಿ ಮಾತಾಡುತ್ತಿದ್ದವಳು ಅಂದು ನನ್ನನ್ನು ನೋಡಿ ತಡವರಿಸಿದ್ದಳು. ನಾನೇ ವಾಸಿ. ಅವಳೊಂದಿಗೆ ಆರಾಮವಾಗಿಯೇ ಮಾತಾಡಿದೆ. ಸಮಯ ಕಳೆದಂತೆ ಆಕೆಯೂ ಸರಿಯಾಗಿಯೇ ಮಾತಾಡಿದಳು.
ನನ್ನ ಜೀವನದ ಬಹು ದೊಡ್ಡ ಅಚ್ಚರಿ, ಆಘಾತ ಸಂಭವಿಸಿದ್ದು ಅಂದೇ. ಏಕಾಏಕಿ ಐ ಲವ್ ಯೂ ಅಂತ ಹೇಳೆ ಬಿಟ್ಟಳು. ದಿಗ್ಭ್ರಾಂತನಾದೆ. ಗರಬಡಿದಂತಾಯಿತು. ಆದರೆ ಹುಡುಗಿಯ ಕಂಗಳಲ್ಲಿ ನಿರ್ಮಲ ಪ್ರೀತಿಯ ಸೆಳೆತವಿತ್ತು. ಏನನ್ನೋ ಸಾಧಿಸಿದ ನಿರಾಳತೆ ಕೂಡ.
ಸುಧಾರಿಸಲು ನನಗೆ ಸ್ವಲ್ಪ ಸಮಯವೇ ಬೇಕಾಯಿತು. ಗೆಳೆತನ ಹೊರತಾಗಿ ಅವಳ ಕುರಿತಾಗಿ ನಾನೇನು ಯೋಚಿಸಿರಲಿಲ್ಲ. ಪ್ರೀತಿಸುವ ಮನಸ್ಸು ನನಗೂ ಇರಲಿಲ್ಲ. ಆಕೆ ಅಷ್ಟು ಧೈರ್ಯದಿಂದ ಏಕಾಏಕಿ ಹೇಳುವಾಗ ನನಗೆ ಏನು ಹೇಳುವುದಕ್ಕೂ ತೋಚಲಿಲ್ಲ. ಸುಮ್ಮನೇ ಕುಳಿತೆ. ನನ್ನ ಪರಿಸ್ಥಿತಿ ಅರ್ಥವಾಗಿರಬೇಕು. ನಿರ್ಧಾರವನ್ನು ನಿಧಾನವಾಗಿ ತಿಳಿಸು ಅಂತ ಅವಳೇ ಹೇಳಿದಳು.
ನಾನು ನಿರೀಕ್ಷೆ ಮಾಡದೇ ಇದ್ದ, ಕನಸು ಮನಸ್ಸಿಲ್ಲಿ ಯೋಚಿಸದೇ ಇದ್ದ ಪ್ರೀತಿಯ ವಿಚಾರದ ಕುರಿತು ನಿರ್ಧಾರ ಕೈಗೊಳ್ಳಬೇಕಿತ್ತು. ಪ್ರೀತಿ ಎಂಬ ಮಾಯೆ ಒಮ್ಮೆ ಮನಸ್ಸಿಗೆ ಮಾಡಿದ್ದ ಘಾಸಿಯಿಂದ ಆಗ ತಾನೆ ಚೇತರಿಸಿಕೊಳ್ಳುತ್ತಿದ್ದೆ. ಅಕ್ಷರಶಃ ನಾನು ಕವಲುದಾರಿಯಲ್ಲಿದ್ದೆ. ಯಾವ ದಾರಿಯನ್ನು ಆಯ್ಕೆ ಮಾಡಬೇಕು ಎಂಬುದೂ ದೊಡ್ಡ ಜಿಜ್ಞಾಸೆಯಾಗಿ ಕಾಡುತ್ತಿತ್ತು. ಸ್ನೇಹ-ಪ್ರೀತಿಯಲ್ಲಿ ಯಾವುದನ್ನು ಆಯ್ಕೆ ಮಾಡುವುದು? ಸ್ನೇಹವನ್ನು ಮಾತ್ರ ಒಪ್ಪಿಕೊಳ್ಳೋಣ ಎಂದು ಅಂದುಕೊಂಡರೂ, ಅವಳ ನಿರ್ಮಲ ಪ್ರೀತಿಯನ್ನು ದೂರ ಮಾಡಲು ಮನಸ್ಸು ಹಿಂದೇಟು ಹಾಕಿತು.
ನಾವು ಪ್ರೀತಿಸುವ ವ್ಯಕ್ತಿಗಳಿಗಿಂತ ನಮ್ಮನ್ನು ಪ್ರೀತಿಸುವ ವ್ಯಕ್ತಿಗಳನ್ನು ಜೀವನದಲ್ಲಿ ಆಯ್ಕೆ ಮಾಡುವುದು ಎಂದಿಗೂ ಒಳಿತು ಎಂಬ ಮಾತು ಅಂದು ನನಗೆ ಸಹಾಯ ಮಾಡಿತು. ಅವಳ ಪ್ರೀತಿಯ ಮನವಿಗೆ ನಾನು ಪ್ರೀತಿಯಿಂದಲೇ ಸಮ್ಮತಿಸಿದೆ. ನನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಮ್ಯಾರಿಟಲ್ ಸ್ಟೇಟಸ್ ಮತ್ತೆ ’ಇನ್ ಅ ರಿಲೇಷನ್‌ಶಿಪ್’ಗೆ ಬದಲಾಯಿತು!
ಒಂದು ವರ್ಷ.. ನಮ್ಮಿಬ್ಬರ ನಡುವಿನ ನಿಷ್ಕಲ್ಮಷ ಪ್ರೀತಿ.. ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣಗಳನ್ನು ನೀಡಿತ್ತು. ಅವಳಿಗೂ ನೀಡಿರಬಹುದು. ಮುಂದಿನ ವರ್ಷ ಹಸೆಮಣೆ ಏರುವ ಬಗ್ಗೆಯೂ ನಾವು ಮಾತಾಡಿಕೊಂಡಿದ್ದೆವು...
~
ಮೊನ್ನೆ ಶನಿವಾರ ಮತ್ತೆ ಇದೇ ಎಂ.ಜಿ ರೋಡಿನ ಕಾಫಿ ಡೇನಲ್ಲಿ ಇಬ್ಬರೂ ಕಾಫಿ ಹೀರುತ್ತಿದ್ದೆವು. ಅವಳ ಮುಖದಲ್ಲಿ ಎಂದಿನ ಕಳೆ ಇರಲಿಲ್ಲ. ಕಾರಣ ಕೇಳಿದೆ. ಏನೇನೋ ಹೇಳಿ ನುಣುಚಿಕೊಂಡಳು. ’ಫ್ರೆಂಡ್, ಈ ಒಂದು ವರ್ಷ ನಡೆದ ಘಟನೆಗಳನ್ನೆಲ್ಲಾ ಮರೆತು ಬಿಡು. ನಮ್ಮಿಬ್ಬರ ನಡುವಿನ ಪ್ರೀತಿ ಇನ್ನು ಮುಂದುವರಿಯದು. ಕಾರಣ ಮಾತ್ರ ಕೇಳಬೇಡ. ದಯವಿಟ್ಟು ಕ್ಷಮಿಸು’ ಎನ್ನುತ್ತಲೇ ನನಗೆ ಮಾತಾಡಲು ಅವಕಾಶ ಕೊಡದೇ ಅಲ್ಲಿಂದ ಎದ್ದು ಹೋದಳು. ಏನಾಗುತ್ತಿದೆ ಎಂದು ನಾನು ಯೋಚಿಸುತ್ತಿರುವಾಗಲೇ ಅವಳು ಅಷ್ಟು ದೂರ ಸಾಗಿದ್ದಳು. ನನ್ನ ಜೀವನದಲ್ಲಿ ನಡೆದ ಮತ್ತೊಂದು ಆಘಾತ ಇದು. ತಕ್ಷಣ ಅವಳಿಗೆ ಫೋನಾಯಿಸಿದೆ. ಸ್ವಿಚ್‌ಡ್ ಆಫ್ ಆಗಿತ್ತು. ಮನೆಗೆ ಬಂದು ಫೇಸ್‌ಬುಕ್‌ನಲ್ಲಿ ತಡಕಾಡಿದೆ. ಫ್ರೆಂಡ್ ಲಿಸ್ಟ್‌ನಿಂದ ಹೊರಟು ಹೋಗಿದ್ದಳು. ಅವಳ ಹೆಸರು ಬರೆದು ತಡಕಾಡಿದೆ. ಫ್ರೊಫೈಲನ್ನೆ ಡಿಲೀಟ್ ಮಾಡಿದ್ದಳು. ಪ್ರತಿ ಬಾರಿ ಫೋನ್ ಮಾಡುವಾಗಲೂ ಇನ್‌ವಾಲಿಡ್ ನಂಬರ್ ಅಂತ ಬರುತ್ತಿತ್ತು. ಪ್ರಾಯಶಃ ಮೊಬೈಲ್ ನಂಬರನ್ನೇ ಬದಲಾಯಿಸಿದ್ದಾಳೆ.
‘When I wanted to be alone she came and disturbed me…!!! When I finally decided that she is my life, she left me alone….’ ಮತ್ತೆ ಮನಸ್ಸಿಗೆ ಕತ್ತಲು ಆವರಿಸಿತ್ತು. ನನ್ನ ಜೀವನದಲ್ಲಿ ಹಿರಿಯರ ಮಾತು... 'ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇದೆ' ಎನ್ನುವುದು ಮತ್ತೆ ನಿಜವಾಯಿತು.
ನಾನು ಏನು ಮಾಡಿದ್ದೆ ಅವಳಿಗೆ? ಕಾರಣ ಆದ್ರೂ ಹೇಳಬಹುದಿತ್ತಲ್ಲ. ಪ್ರೀತಿ ಹೋದರೆ ಹೋಗಲಿ. ಸ್ನೇಹವನ್ನಾದರೂ ಉಳಿಸಿಕೊಳ್ಳುವುದಕ್ಕೆ ಯತ್ನಿಸಬಹುದಿತ್ತಲ್ಲ..
ಈಗ ನೋಡು, ಮತ್ತೆ ಫೇಸ್‌ಬುಕ್‌ನಲ್ಲಿ ಮ್ಯಾರಿಟಲ್ ಸ್ಟೇಟಸನ್ನು ’ಸಿಂಗಲ್’ ಅಂತ ಬದಲಾಯಿಸಬೇಕು...
ಈಗ ನೋಡು, ಮತ್ತೆ ಫೇಸ್‌ಬುಕ್‌ನಲ್ಲಿ ಮ್ಯಾರಿಟಲ್ ಸ್ಟೇಟಸನ್ನು ’ಸಿಂಗಲ್’ ಅಂತ ಬದಲಾಯಿಸಬೇಕು...
~
ಎಂಜಿ ರೋಡಲ್ಲಿ ಮೊನ್ನೆ ಆಕಸ್ಮಾತ್ ಸಿಕ್ಕ ಆತ್ಮೀಯ ಮಿತ್ರ ಹೀಗೆ ಹೇಳುವಾಗ ನನ್ನ ಕಣ್ಣಂಚಲ್ಲಿ ಜಿನುಗಿದ ಹನಿಯನ್ನು ಅವನಿಗೆ ಗೊತ್ತಾಗದಂತೆ ಒರಸಿಕೊಂಡೆ.
-ಸೂರ್ಯ ವಜ್ರಾಂಗಿ
1 ಕಾಮೆಂಟ್:
Eno idu. Heart Melting, touching real story. Pu..f Silent agi hudugara eddege oddu hoguthare.
ಕಾಮೆಂಟ್ ಪೋಸ್ಟ್ ಮಾಡಿ