ಬುಧವಾರ, ಡಿಸೆಂಬರ್ 12, 2012

ಮಧುಗಿರಿ ಬೆಟ್ಟದ ಚಾರಣದ ಸಿಹಿ...

ದೀಪಾವಳಿಯ ದಿನ. ಇಡೀ ಉದ್ಯಾನನಗರಿಯೇ ಪಟಾಕಿ ಸದ್ದಿನಲ್ಲಿ ಮುಳುಗಿ ಹೋಗಿತ್ತು. ಅರ್ಧಕರ್ಧ ಜನ ಊರಿನತ್ತ ಪ್ರಯಾಣ ಬೆಳೆಸಿದ್ದರು. ನಮಗೆಲ್ಲಿತ್ತು ಆ ಯೋಗ? ಇದ್ದಿದ್ದು ಒಂದೇ ದಿನ ರಜೆ. ಅದನ್ನು ಕಳೆಯುವುದಾದರೂ ಹೇಗೆ? ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿ ಬೆಟ್ಟವನ್ನು ಏರುವುದು ಗೆಳೆಯ ಈಶ್ವರ ಚಂದ್ರನ ಬಹುದಿನದ ಕನಸು. ಹಲವು ಬಾರಿ ಅಲ್ಲಿಗೆ ಹೋಗಬೇಕೆಂದುಕೊಂಡರೂ ಆಗಿರಲಿಲ್ಲ. ಹಾಗಾಗಿ ಈ ಬಾರಿ ಮಧುಗಿರಿಗೆ ಹೋಗೋಣ ಎಂಬ ನಿರ್ಧಾರ ಕೈಗೊಳ್ಳುವ ಹೊತ್ತಿಗೆ, ಮಿತ್ರ ಪ್ರದೀಪ ಸರಳಿಮೂಲೆಯೂ ಜೊತೆಯಾಗಿದ್ದ. ಬೆಂಗಳೂರಿನಿಂದ ೧೦೭ ಕಿ.ಮೀ ದೂರದಲ್ಲಿರುವ ಮಧುಗಿರಿಗೆ ನಾವು ಹೊರಟಿದ್ದು ಬೈಕಲ್ಲಿ.   ಬೆಳಿಗ್ಗೆ ೬.೩೦ಕ್ಕೆ ನಮ್ಮ ರಥಗಳು (ರಾಯಲ್‌ ಎನ್‌ಫೀಲ್ಡ್‌ ಇಲೆಕ್ಟ್ರಾ ಮತ್ತು ಸುಜೂಕಿ ಜಿಎಸ್ ೧೫೦ಆರ್‌ ) ತುಮಕೂರಿನತ್ತ ಮುಖ ಮಾಡಿದ್ದವು. ೩ ಗಂಟೆಗಳ ಪ್ರಯಾಣ. (ಅರ್ಧ ಗಂಟೆ ಬೆಳಗಿನ ಉಪಹಾರಕ್ಕಾಗಿ ಮೀಸಲು) ಬೆಳಿಗ್ಗೆ ೯.೩೦ಕ್ಕೆ ನಾವು ಮಧುಗಿರಿ ಬೆಟ್ಟದ ತಳದಲ್ಲಿ.
~
ಇದನ್ನು ಹತ್ತಲು ಸಾಧ್ಯವೇ?
ಎಳೆ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ಬೃಹತ್‌ ಬಂಡೆಯನ್ನು ಕಂಡು ಪ್ರದೀಪ ಕೇಳಿದ ಮೊದಲ ಪ್ರಶ್ನೆ ಇದು. ಪಕ್ಕದಲ್ಲೇ ಬುಲೆಟ್‌ ಸ್ಟ್ಯಾಂಡ್ ಹಾಕುತ್ತಿದ್ದ ಈಶ್ವರ ಚಂದ್ರ ನಕ್ಕ. ಅಲ್ಲಾ ಮಾರಾಯ ನೀನು ಇದನ್ನು ಕೇಳಲು ಇಲ್ಲಿಗೆ ಬರಬೇಕಿತ್ತಾ ಅಂತ ಅವನು ಕೇಳಿದಾಗ ನಗುವ ಸರದಿ ನನ್ನದು. ಆ ಪ್ರಶ್ನೆಯನ್ನು ನಗುತ್ತಲೇ ಪ್ರದೀಪ ಕೇಳಿದ್ದರೂ, ಅದರಲ್ಲಿ ನಿಜಾಂಶವೂ ಇತ್ತು.
ಏಷ್ಯಾದ ಎರಡನೇ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬೆಟ್ಟ ಪ್ರತಿಯೊಬ್ಬ ನೋಡುಗನ ಮನಸ್ಸಿನಲ್ಲಿ ಮೂಡಿಸುವ ಮೊದಲನೇ ಪ್ರಶ್ನೆಯೇ ಇದು. ಈ ಬೆಟ್ಟ ಒಡ್ಡುವ ಸವಾಲು ಚಾರಣಿಗರನ್ನು ಇತ್ತ ಆಕರ್ಷಿಸುವಂತೆ ಮಾಡುತ್ತವೆ. ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತವರಿಗೆ ಈ ‘ಗಿರಿ’ಯ ನೆನಪು ‘ಮಧು’ವಿನಂತೆ ಸಿಹಿಯೇ!

ಈ ದುರ್ಗದ ಇನ್ನೊಂದು ಆಕರ್ಷಣೆ ೧೭ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಟೆ. ಶತ್ರು ಪಾಳಯದ ಮೇಲೆ ನಿಗಾ ಇಡುವುದಕ್ಕಾಗಿ ಬೆಟ್ಟದ ಅಲ್ಲಲ್ಲಿ ನಿರ್ಮಿಸಲಾಗಿರುವ  ಬುರುಜುಗಳು ಇಡೀ ಊರಿನ ಸುಂದರ ನೋಟವನ್ನೇ ಕಣ್ಣಿಗೆ ಕಟ್ಟಿ ಕೊಡುತ್ತವೆ. ಚಾರಣ ಆರಂಭಗೊಳ್ಳುವುದು ಕೋಟೆಯ ದ್ವಾರ ಪ್ರವೇಶಿಸುವ ಮೂಲಕ. ಸ್ವಲ್ಪ ದೂರದಲ್ಲಿ ದೊಡ್ಡ ಕೆರೆಯೊಂದು ಚಾರಣಿಗರನ್ನು
ಸ್ವಾಗತಿಸುತ್ತದೆ. ಕೆರೆಯ ಪಕ್ಕದಲ್ಲೇ ಇರುವ ನೀರಿನ ಸಂಗ್ರಹ ತೊಟ್ಟಿಯು, ಮಳೆಕೊಯ್ಲು ಹಾಗೂ ಜೀವ ಜಲದ ಸಂರಕ್ಷಣೆಯ ಕುರಿತಾಗಿ ಅಂದಿನ ಜನರಿಗಿದ್ದ ಕಾಳಜಿಗೆ ಹಿಡಿದ ಕನ್ನಡಿ.

ಚಾರಣದ ಮೊದಲ ೨೦ ನಿಮಿಷದ ಹಾದಿ ತುಂಬಾ ಸಲೀಸು. ಆದರೆ ನಂತರದಲ್ಲಿ ಪ್ರತಿಯೊಂದು ಹೆಜ್ಜೆಯೂ ಕಠಿಣವೇ. ಕಡಿದಾದ ಏರು ಹಾದಿಯಲ್ಲಿ ಆಧಾರಕ್ಕಾಗಿ ಕಬ್ಬಿಣದ ಸರಳುಗಳಿವೆ. ಏರು ಹಾದಿಯಲ್ಲಿ ಕ್ರಮಿಸಿದಂತೆ ಕಾಲು ಸೋಲಲು ಆರಂಭಿಸುತ್ತದೆ. ಹೃದಯ ಬಡಿತ ಹೆಚ್ಚುತ್ತದೆ. ಏದುಸಿರು ತನ್ನಿಂತಾನೇ ಹೊರಬರುತ್ತದೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಕಾಲೇ ಹೇಳುತ್ತದೆ. ಚೀಲದಲ್ಲಿದ್ದ ನೀರು, ಕುರುಕಲು ತಿಂಡಿಗಳು ಆಯಾಚಿತವಾಗಿ ಹೊರ ಇಣುಕುತ್ತವೆ. ಏರಿ ಬಂದ ಹಾದಿಯನ್ನು ತಿರುಗಿ ನೋಡಿದರೆ ಎಷ್ಟೊಂದು ಆಳ!. ತಲೆ ಸುತ್ತಿದ ಅನುಭವ.
ಬೀಸುವ ತಂಪಾದ ಗಾಳಿ, ಮೈಯನ್ನು ಸ್ಪರ್ಶಿಸುವ ಸೂರ್ಯನ ಬಿಸಿಲು, ಊರಿನ ಸುಂದರ ನೋಟ.. ಓಹ್‌... ಈ ದೃಶ್ಯಕಾವ್ಯವನ್ನು ಸವಿದಾಗ ಮೇಲೇರುವಾಗ ಅನುಭವಿಸಿದ ಸಂಕಟಗಳೆಲ್ಲಾ ಮಾಯ!

ದಣಿವಾರಿಸಿಕೊಂಡು ಎದುರು ಕಾಣುತ್ತಿರುವ ಬುರುಜೇ ಬೆಟ್ಟದ ತುದಿ ಎಂದು ಅಂದುಕೊಳ್ಳುತ್ತ ಉತ್ಸಾಹದಿಂದ ಅಲ್ಲಿಗೆ ತಲುಪಿದಾಗ, ಈಗ ಏರಿದಷ್ಟೇ ದೂರ ಮುಂದಕ್ಕೂ ಇದೆ ಎಂಬ ಸತ್ಯ ಅರಿತು ಹೆಜ್ಜೆಗಳು ನಿಧಾನವಾಗುತ್ತವೆ. ಇಲ್ಲಿನ ಹಾದಿಗಳು ಮತ್ತೂ ಕಠಿಣ. ಅಲ್ಲಿ ಕಂಬಿಗಳ ನೆರವಿಲ್ಲ. ಕೆಲವು ಕಡೆ ತೆವಳಿಕೊಂಡು ಹೋಗುವ ದಾರಿ. ಉರಿ ಬಿಸಿಲು ಆರೋಹಣವನ್ನು ಇನ್ನಷ್ಟು ಕಷ್ಟಗೊಳಿಸುತ್ತದೆ. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು. ಹೆಜ್ಜೆ ಇಡುವಾಗ ಎಡವಿದರೆ ಮುಗಿಯಿತು. ಬೆಟ್ಟ ಹತ್ತುವ ಉತ್ಪಾಹಿಯ ಜೀವನದಲ್ಲಿ ಇದೇ ಕೊನೆ ಚಾರಣ ಆಗುವ ಸಂಭವವೇ ಜಾಸ್ತಿ!

ಸುದೀರ್ಘ ಎರಡು ಗಂಟೆಗಳ ಚಾರಣದ ನಂತರ ತುತ್ತ ತುದಿಯಲ್ಲಿ ಕಲ್ಲಿನ ಕಟ್ಟಡವೊಂದು ಕಾಣುತ್ತದೆ. ಹಿಂದೆ ಅದು ಗೋಪಾಲಕೃಷ್ಣ ದೇವಾಲಯ ಆಗಿತ್ತಂತೆ. ಈಗ ಅಲ್ಲಿ ದೇವಾಲಯದ ಯಾವುದೇ ಕುರುಹುಗಳಿಲ್ಲ. ಪಾಳು ಬಿದ್ದಿದೆ. ಅದರ ಹಿಂಭಾಗದಲ್ಲಿ ಕುದುರೆ ಲಾಯವನ್ನು ಹೋಲುವ ಇನ್ನೊಂದು ಕಟ್ಟಡವಿದೆ. ಸೂಕ್ತ ನಿರ್ವಹಣೆಯ ಕೊರತೆಯಿಂದ ಅದೂ ಲಯವಾಗಿದೆ!

ಸಮುದ್ರ ಮಟ್ಟದಿಂದ ೩೯೮೫ ಅಡಿಗಳಷ್ಟು (೧೧೯೩) ಎತ್ತರದಿಂದ ಸುತ್ತಲೂ ಕಣ್ಣುಹಾಯಿಸಿದಾಗ ಕಾಣುವುದು ಸಾಲು ಸಾಲು ಬೆಟ್ಟಗಳು. ಮಧಿಗಿರಿ ಪಟ್ಟಣದ ಪೂರ್ಣ ನೋಟ, ಹಚ್ಚ ಹಸಿರನ್ನು ಹೊದ್ದ ಭೂರಮೆ. ವೇಗವಾಗಿ ಬೀಸುವ ತಂಪಾದ ಗಾಳಿ, ರುದ್ರರಮಣೀಯ ದೃಶ್ಯಗಳು ಚಾರಣಿಗನ ಆಯಾಸವನ್ನು ಪರಿಹರಿಸುತ್ತವೆ. ಮನಸ್ಸನ್ನು ರಂಜಿಸುತ್ತವೆ. ಮೊಗದಲ್ಲಿ ನಗುವನ್ನೂ ಹೊಮ್ಮಿಸುತ್ತವೆ.

ಬೆಟ್ಟ ಇಳಿಯುವ ಹಾದಿ ಹತ್ತುವಷ್ಟು ಸಮಯವನ್ನು ತೆಗೆದುಕೊಳ್ಳದಿದ್ದರೂ, ಇಳಿಯುವಾಗ ಎಚ್ಚರಿಕೆ ಅಗತ್ಯ. ೪೫ರಿಂದ ೬೦ ನಿಮಿಷಗಳಲ್ಲಿ ಮಧುಗಿರಿ ದುರ್ಗದ ತಳವನ್ನು ತಲುಪಬಹುದು.
~
ಮಧ್ಯಾಹ್ನ ೧ ಗಂಟೆ ಸುಮಾರು. ಬೆಟ್ಟದ ತಳ ತಲುಪಿದ ಬಳಿಕ ಇನ್ನೇನು ಬೈಕ್‌ ಚಾಲೂ ಮಾಡಬೇಕು. ಇದೇ ಬೆಟ್ಟವನ್ನು ನಾವು ಹತ್ತಿದ್ದೋ? ಎಂಬ ಪ್ರಶ್ನೆಯನ್ನು ಪ್ರದೀಪ ತೂರಿ ಬಿಟ್ಟ. ಅವನ ಕಾಲೆಳೆಯಲು ಏನೋ ಹೇಳಬೇಕೆಂದು ನಾನು ಬಾಯಿ ತೆಗೆಯುವಷ್ಟರಲ್ಲಿ, ಆತನೇ ಮುಂದುವರಿದು, ‘ಏನೇ ಆಗಲಿ, ಜೀವನದಲ್ಲಿ ಒಮ್ಮೆಯಾದರೂ ಈ ಬೆಟ್ಟವನ್ನು ಏರಲೇ ಬೇಕು. ಮಧುಗಿರಿ ಬೆಟ್ಟದ ಚಾರಣ ನಿಜಕ್ಕೂ ಅದ್ಭುತ ಅನುಭವ’ ಎಂದು ಷರಾ ಬರೆದ. ಈಶ್ವರ ಚಂದ್ರ ಹಾಗೂ ನನ್ನ ಅಭಿಪ್ರಾಯವೂ ಅದೇ ಆಗಿತ್ತು.
~
ಪ್ರಾಯಶಃ ನಮ್ಮದು ಮಾತ್ರವಲ್ಲ, ಮಧುಗಿರಿ ಬೆಟ್ಟದ ಚಾರಣದ ಸವಿಯುಂಡವರ ಅನುಭವವೂ ಇದೇ ಆಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
 ~ ~ ~

ಮಧುಗಿರಿ ಬೆಟ್ಟ ಇಲ್ಲಿದೆ...

ತುಮಕೂರಿನಿಂದ ೪೩ ಕಿ.ಮೀ ದೂರ. ರಾಜಧಾನಿ ಬೆಂಗಳೂರಿನಿಂದ ೧೦೭ ಕಿ.ಮೀ ದೂರ. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬರುವ ಡಾಬಾಸ್‌ಪೇಟೆಯಿಂದ ಬಲಕ್ಕೆ ತಿರುಗಿ ಕೊರಟಗೆರೆ ಮಾರ್ಗವಾಗಿ ಮಧುಗಿರಿ. (ಕೊರಟಗೆರೆ-ಪಾವಗಡದ ಮಧ್ಯೆ ಮಧುಗಿರಿ ಪಟ್ಟಣ ಇದೆ. ಕೊರಟಗೆರೆಯಿಂದ ೧೮ ಕಿ.ಮಿ ದೂರದಲ್ಲಿ ಮಧುಗಿರಿ ಇದೆ).
 ~

ಕೋಟೆಯ ಇತಿಹಾಸ...

ರಾಜ್ಯದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಬೆಟ್ಟದ ಇತಿಹಾಸ ಪ್ರಕಾರ, ಕೋಟೆಯನ್ನು ನಿರ್ಮಿಸಿದ ಕೀರ್ತಿ ಸ್ಥಳೀಯ ಪಾಳೇಗಾರರಾಗಿದ್ದ ರಾಜಾ ಹೀರೇ ಗೌಡ ಅವರಿಗೆ ಸಲ್ಲುತ್ತದೆ. ೧೬೭೦ರ ಸುಮಾರಿನಲ್ಲಿ ಮಣ್ಣನಿಂದ ಈ ಕೋಟೆಯನ್ನು ನಿರ್ಮಿಸಲಾಗಿದೆ. ನಂತರದಲ್ಲಿ ಹೈದರ್ ಅಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರು ಅರಸರ ಆಳ್ವಿಕೆಯಲ್ಲಿ ಕೋಟೆಯನ್ನು ಪುನರುಜ್ಜೀವನಗೊಳಿಸಲಾಯಿತು. ತಳದಲ್ಲಿ ನಾಲ್ಕು ಗುಹೆಗಳಿವೆ. ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರಗಳೂ ಇಲ್ಲಿವೆ.
 ~

ನಿರ್ವಹಣೆ ಕೊರತೆ...

ಇಡೀ ಬೆಟ್ಟ ಹಾಗೂ ಕೋಟೆಯು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಕೋಟೆ ಪ್ರವೇಶಿಸುವರೆಗಿನ ದಾರಿ ಉತ್ತಮವಾಗಿದ್ದರೂ, ನಂತರದ ಹಾದಿ ಅಷ್ಟು ಚೆನ್ನಾಗಿಲ್ಲ. ಬಂಡೆಗಳಲ್ಲಿ ಸರಿಯಾಗಿ ಮೆಟ್ಟಿಲುಗಳನ್ನು
ಕೊರೆಯಲಾಗಿಲ್ಲ. ಕೋಟೆಯ ಗೋಡೆಗಳಲ್ಲಿ, ಬಂಡೆಗಳಲ್ಲಿ ಪಡ್ಡೆ ಹುಡುಗರು ಬರೆದಿರುವ, ಕೆತ್ತಿರುವ ಪ್ರೇಮ ನಿವೇದನಾ ಬರಹಗಳು ಕೋಟೆ ಮತ್ತು ಬೆಟ್ಟದ ಸೌಂದರ್ಯವನ್ನು ಹಾಳುಗೆಡಹಿವೆ. ಅಪರೂಪದ ಬೆಟ್ಟಕ್ಕೆ ನಿರ್ವಹಣೆ ಕೊರತೆ ಒಂದು ಕಪ್ಪು ಚುಕ್ಕೆ
 ~

ಚಾರಣಿಗರಿಗೆ ಒಂದಷ್ಟು ಸಲಹೆ...

ಮಳೆಗಾಲದಲ್ಲಿ ಚಾರಣಕ್ಕೆ ಹೋಗದಿರುವುದು ಒಳಿತು. ಬಂಡೆ ಜಾರುವ ಸಂಭವವೇ ಹೆಚ್ಚಿರುವುದರಿಂದ ಚಾರಣ ಅಪಾಯಕಾರಿ. ಕಡು ಬೇಸಿಗೆಯಲ್ಲೂ ಬೇಡ, ಚಳಿಗಾಲದ ಆರಂಭದ ಸಮಯ ಹೆಚ್ಚು ಸೂಕ್ತ. ಆದಷ್ಟೂ ಬೆಳಿಗ್ಗೆ ಬೇಗ ಚಾರಣ ಆರಂಭಿಸುವುದು ಉತ್ತಮ. ಸಮಯ ಕಳೆದಂತೆ ಬಿಸಿಲಿನ ಧಗೆ ಹೆಚ್ಚಾಗುವುದರಿಂದ, ಅದಕ್ಕಿಂತ ಮೊದಲೇ ಬೆಟ್ಟದ ತುದಿಗೆ ತಲುಪುವುದು ಹಿತ. ಬಿಸಿಲಿನಿಂದ ಚರ್ಮ, ದೇಹವನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ವಸ್ತುಗಳು ಚೀಲದಲ್ಲಿರಲಿ. ಸಾಕಷ್ಟು ನೀರು, ಹಣ್ಣು ಹಂಪಲು, ಲಘು ಉಪಹಾರವನ್ನು ಹೊತ್ತೊಯ್ಯಿರಿ. ಎತ್ತರವಾದ ಜಾಗದಿಂದ ಆಳ ಪ್ರದೇಶವನ್ನು ನೋಡುವಾಗ ತಲೆಸುತ್ತು ಬರುವವರು/ ಆಕ್ರೋಫೋಬಿಯಾದಿಂದ ಬಳಲುತ್ತಿರುವವರು ಈ ಸಾಹಸದಿಂದ ದೂರ ಇರುವುದು ಒಳ್ಳೆಯದು. ಚಾರಣದ ವೇಳೆ ಧರಿಸುವ ಶೂ ಬಗ್ಗೆ ವಿಶೇಷ ಗಮನ ಅಗತ್ಯ. ಹೆಚ್ಚು ಹಿಡಿತ (ಗ್ರಿಪ್) ಇರುವ ಶೂ ಧರಿಸುವುದು ಸುರಕ್ಷಿತ.
 ~
ನೆನಪು ತರುವ ಒಂದಷ್ಟು ಚಿತ್ರಗಳು....
ತಳದಿಂದ ಮಧುಗಿರಿ ಬೆಟ್ಟದ ನೋಟ

ಬೆಟ್ಟದಿಂದ....


ಹೀಗಿದೆ ನೋಡಿ ಮಧುಗಿರಿ ಬೆಟ್ಟ

ಹಲವು ಬುರುಜುಗಳಲ್ಲಿ ಇದೊಂದು...

ಇಳಿ ಹಾದಿ...

ಹಸುರು ಹೊದ್ದ ಭೂರಮೆ

ಕಠಿಣ ಏರು ಹಾದಿ...

ಕಡಿದಾದ ದಾರಿ

ಬುರುಜು

ಏರುವ ಹಾದಿ... ಇಲ್ಲಿ ಸೋಲುತ್ತದೆ ಕಾಲು

ಮಧುಗಿರಿ ಪಟ್ಟಣದ ಸುಂದರ ನೋಟ

ಬೆಟ್ಟದ ಮೇಲಿಂದ

ಗೋಪಾಲಕೃಷ್ಣ ದೇವಾಲಯದ ಹಿಂಭಾಗ

ಬೆಟ್ಟಗಳ ಸಾಲು ಸಾಲು


ಸಾಲು ಬೆಟ್ಟಗಳು

ಒಂದು ಕಾಲದ ಗೋಪಾಲಕೃಷ್ಣ ದೇವಾಲಯ

ಮಧುಗಿರಿ ಪಟ್ಟಣ

ಮೇಲಿನ ನೋಟ = ಮೇಲ್ನೋಟ....

ಅಪರೂಪದ ಬೆಟ್ಟಕ್ಕೆ ಕಪ್ಪುಚುಕ್ಕೆ...

ಬಂಡೆಗಳನ್ನೂ ಬಿಡದ ಪಡ್ಡೆ ಹೈಕಳು


ಭಲೇ ಜೋಡಿ: ಪ್ರದೀಪ ಸರಳಿಮೂಲೆ, ಈಶ್ವರ ಚಂದ್ರ

ಪ್ರವೇಶ ಧ್ವಾರ

ಮೊದಲ ಹೆಜ್ಜೆ...

        
 ~