ಗುರುವಾರ, ಜೂನ್ 28, 2012

ಅಮ್ಮ- ಅಪ್ಪನ ಸೇವೆಯ ನೆನೆಯುತ್ತಾ...


 ಗ ತಾನೇ ಹೊಸ ಬೈಕ್‌ ಕೊಂಡಿದ್ದೆ. ಬಹು ದಿನಗಳ ಕನಸು ಅದು. ಕೊನೆಗೂ ನನಸಾಗಿತ್ತು. ಬೈಕ್‌ನಲ್ಲಿ ೩೦೦ ಕಿ.ಮೀ ದೂರದಲ್ಲಿ ಇರುವ ನನ್ನ ಊರಿಗೆ ಹೋಗುವ ಮೋಹ ನನ್ನಲ್ಲಿ ಇರದಿದ್ದರೂ, ಊರಿನ ಸಮೀಪದಲ್ಲೇ ಬಯಲನ್ನೇ ಆಲಯವನ್ನಾಗಿ ಮಾಡಿಕೊಂಡಿರುವ ಸೌತಡ್ಕ ಮಹಾಗಣಪತಿಯ ಸನ್ನಿಧಿಯಲ್ಲಿ ಬೈಕಿಗೆ ಪೂಜೆ ಮಾಡಿಸಬೇಕು  ಎಂಬುದು ಮನಸ್ಸಲ್ಲಿ ತನ್ನಂತಾನೆ ಮೂಡಿದ ಆಲೋಚನೆ. ಯಾರಿಗ್ಗೊತ್ತು? ಆ ಗಣಪತಿಯೇ ಆ ಅಭಿಲಾಷೆ ಬಿತ್ತಿರಬಹುದು!  ಹಾಗಾಗಿ, ಬೆಂಗಳೂರಿನಲ್ಲಿ ಬೈಕ್‌ ಖರೀದಿಸಿಯೂ ಅದಕ್ಕೆ ದೇವಸ್ಥಾನದಲ್ಲಿ ಅರ್ಚಕರಿಂದ ಪೂಜೆ ಮಾಡಿಸಿರಲಿಲ್ಲ. ನಾನೇ ಅಗರಬತ್ತಿ ಹಚ್ಚಿ ಎರಡು ಬಾರಿ ಸುರುಳಿ ಸುತ್ತಿದ್ದೆ.
   ಹೊಸ ಬೈಕನ್ನು  ಆರಂಭದಲ್ಲಿ ಇಂತಿಷ್ಟೇ ವೇಗದಲ್ಲಿ ಓಡಿಸಬೇಕು ಎಂಬ ನಿಯಮ ಇರುವುದರಿಂದ ಮತ್ತು ಒಂದು ಸರ್ವೀಸ್‌ ಆದ ಮೇಲೆ  ಊರ ಕಡೆ ಹೊಡೆಯುವುದೆಂದು ತೀರ್ಮಾನಿಸಿದೆ. ಮೊದಲ ಸರ್ವೀಸ್‌ಗೆ ಎರಡು ತಿಂಗಳು ಕಾಯಬೇಕು. ಅಷ್ಟರವರೆಗೆ ಬೈಕಿಗೆ ದೇವರ ದರ್ಶನ ಇಲ್ಲ. ಆಫೀಸ್‌- ರೂಮ್‌- ಆಫೀಸ್‌ ಮಾತ್ರ ಸುತ್ತಾಟ... ಬೆಂಗಳೂರಿನ ಟ್ರಾಫಿಕ್‌ನಲ್ಲಿ ಮೊದಲ ವಾರ ಅಳುಕಿನಲ್ಲೇ ಬೈಕ್‌ ಓಡಿಸಿದೆ.
  ಹೈವೇ  ಬದಿಯಲ್ಲಿ ಊರಿಗೆ ಹೊರಟ ಪಯಣದ ಮಧ್ಯೆ...
  ಎರಡು ತಿಂಗಳಾಯ್ತು. ಸರ್ವೀಸ್‌ ಮಾಡುವ ಸಮಯವೂ ಬಂತು. ಎಲ್ಲಾ ಮುಗಿದ ಮೇಲೆ ಒಂದು ಶುಭದಿನ ಊರಿಗೆ, ಅಲ್ಲಲ್ಲ ಸೌತಡ್ಕ ಗಣಪನ ಸನ್ನಿಧಿಗೆ ಬೈಕ್‌ ತೆಗೆದುಕೊಂಡು ಹೊರಟೆ. ಆಫೀಸ್‌ನಲ್ಲಿ ಎಲ್ಲರೂ ‘ಹುಷಾರು ಗುರುವೇ’ ಎಂದು ಎಚ್ಚರಿಸಿಯೇ ಕಳುಹಿಸಿ ಕೊಟ್ಟಿದ್ದರು. ಮೇ ೧೭ ಬೆಳಿಗ್ಗೆ ಸಮಯ ೬.೧೫ ನನ್ನ ಬೈಕ್‌ ನೆಲಮಂಗಲದತ್ತ ಮುಖಮಾಡಿತ್ತು. ೪೦ ಕಿ.ಮೀ ಹೋಗುವಷ್ಟರಲ್ಲೇ ತಪ್ಪು ನಿರ್ಧಾರ ತೆಗೆದುಕೊಂಡೆನಾ ಎನಿಸಿತು. ಅಗಲವಾದ ಹೈವೇನಲ್ಲಿ ಎಲ್ಲಾ ವಾಹನಗಳೂ ನನ್ನ ಎದುರು, ಇನ್ನು ಕೆಲವು ಹಿಂದಿಕ್ಕಿ ಹಾದು ಹೋಗುತ್ತಿರುವಾಗ ನಾನು ಮತ್ತು ಬೈಕ್‌ ರಸ್ತೆಯ ಅಂಚಿನಲ್ಲಿ ಬಳಿದಿರುವ ಬಿಳಿ ಪಟ್ಟಿಯ ಬದಿಯಲ್ಲೇ ಸಾಗುತ್ತಿದ್ದೆವು. ಇನ್ನೂ ಹೊಸ ಬೈಕ್‌, ಈಗಷ್ಟೇ ರೈಡಿಂಗ್‌ ಕಲಿತಿದ್ದರಿಂದ ಹೆಚ್ಚೇ ಜಾಗರೂಕನಾಗಿದ್ದೆ. ನೆನಪಿಡಿ. ನಾನು ಮೊದಲ ಬಾರಿ ಹೈವೇನಲ್ಲಿ ಬೈಕ್ ಸವಾರಿ ಮಾಡುತ್ತಿರುವುದು.    ಅಂದ ಹಾಗೆ ಮರೆತಿದ್ದೆ. ನಾನು ಊರಿಗೆ ಬೈಕಲ್ಲಿ ಬರುವುದಕ್ಕೆ ಮನೆಯಲ್ಲಿ ಎಲ್ಲರಿಂದಲೂ ಬಂದ ವಿರೋಧವನ್ನು ಸೌತಡ್ಕ ಮಹಾಗಣಪತಿಯ ಹೆಸರು ಹೇಳಿ ಹತ್ತಿಕ್ಕಿದ್ದೆ!
  ನಿರ್ಧಾರ ತಪ್ಪಾಯಿತೇನೋ ಅಂದುಕೊಂಡು ೫ ಕಿ.ಮೀ ಕಳೆಯುವಷ್ಟರಲ್ಲಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಮನಸು ಶುರು ಹಚ್ಚಿತು. ಆಮೇಲೆ ಅಂತಹ ಯೋಚನೆ ಹೊಳೆಯಲಿಲ್ಲ. ಬೈಕಿಂದ ಬೀಳುವವರೆಗೂ! ಕುಣಿಗಲ್‌, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ...ಬೈಕ್‌ ಖುಷಿಯಿಂದ ಓಡುತ್ತಲೇ ಇತ್ತು. ನನ್ನ ಮನಸು ಕೂಡ ಸೌತಡ್ಕ ಗಣಪನ ಬಳಿಗೆ ಧಾವಿಸುತ್ತಿತ್ತು. ಅತ್ಯಂತ ರಮಣೀಯ ಶಿರಾಡಿ ಘಾಟಿಯ ದೃಶ್ಯ ಸೊಬಗನ್ನು ನನ್ನ ಬೈಕ್‌  ನೋಡುತ್ತಿರುವುದು ಮೊದಲ ಬಾರಿ. ಹಳ್ಳ ಬಿದ್ದ ಘಾಟಿಯ ರಸ್ತೆಯಲ್ಲಿ ನಾನು ಬೈಕನ್ನು ಕೈ ಹಿಡಿದು ನಡೆಸುತ್ತಿದ್ದರೆ, ಬೈಕು ಸ್ವಚ್ಛಂದವಾಗಿ ಘಾಟಿಯ ತಿರುವುಗಳಲ್ಲಿ ಪ್ರಯಾಣದ ಸುಖವನ್ನು ಸವಿಯುತ್ತಿತ್ತು. ಮಧ್ಯಾಹ್ನದ ಹೊತ್ತು ಘಾಟಿ ಇಳಿಯುತ್ತಿರುವಾಗ ಬೀಸುತ್ತಿದ್ದ ಹದ ಬಿಸಿ ಗಾಳಿ ಮನಸ್ಸನ್ನು ಇನ್ನಷ್ಟು ಉಲ್ಲಸಿತವನ್ನಾಗಿ ಮಾಡಿತ್ತು, ಸೌತಡ್ಕ ಗೆಣಪನ ಪಾದದ ಸಮೀಪಕ್ಕೆ ತಲುಪುತ್ತಿರುವ ಖುಷಿ ಮನಸ್ಸಿಗೆ. ಅಂದು ಮಧ್ಯಾಹ್ನ ೧.೨೫ಕ್ಕೆ ನಾನು ಮತ್ತು ಬೈಕು ಸೌತಡ್ಕ ಗಣಪನ ಎದುರು ನಿಂತಿದ್ದೆವು ಧನ್ಯತೆಯಲ್ಲಿ!
  ಒಂದಿಷ್ಟು ರೂಪಾಯಿಗಳನ್ನು ದೇವರಿಗೆ ಕಾಣಿಕೆ ಹಾಕಿ, ಒಂದಷ್ಟು ನೋಟುಗಳನ್ನು ಅರ್ಚಕರಿಗೆ ನೀಡಿ (!) ಬೈಕಿಗೆ ಪೂಜೆ ಮಾಡಿಸಿದೆ. ಅರ್ಚಕರು ಬೈಕಿಗೆ ಮೂರು ಸುತ್ತು ಬಂದು ತೆಂಗಿನಕಾಯಿಗೆ ಜಲಪಾತ್ರೆಯ ನೀರನ್ನು ಪ್ರೋಕ್ಷಿಸಿ ನೆಲಕ್ಕೆ ಒಡೆದ ಕಾಯಿಯ ತುಂಡುಗಳು ಮಗುಚಿ ಬಿದ್ದಾಗಲೇ ಮನಸ್ಸಿಗೆ ಸಮಾಧಾನವಾಗಿದ್ದು. ಮತ್ತೆ ವಿಘ್ನ ನಿವಾರಕನಿಗೆ ಕೈ ಮುಗಿದು ಅಲ್ಲಿಂದ ಮನೆ ಕಡೆಗೆ ಹೊರಟೆ.
  ಮನೆಯಲ್ಲಿ ಹೊಸ ಬೈಕನ್ನು ನೋಡಿ ಖುಷಿ ಆಗಿರಲಿಲ್ಲ. ಸುರಕ್ಷಿತವಾಗಿ ತಲುಪಿದ್ದಕ್ಕೆ ತುಂಬಾ ಖುಷಿ ಪಟ್ಟಿದ್ದರು! ಊರಿನ ಏರು ತಗ್ಗಿನ ಮಣ್ಣಿನ ರಸ್ತೆಯಲ್ಲಿ ಆರಂಭದಲ್ಲಿ ನಡೆದಾಡಲು ಬೈಕು ಕಷ್ಟ ಪಟ್ಟರೂ ಆಮೇಲೆ ಸಲೀಸಾಗಿ ನನ್ನನ್ನು ಹೊತ್ತುಕೊಂಡು ಹೋಗಿತ್ತು.  ಎರಡೇ ದಿನಗಳ ಅವಧಿಗೆ ನಾನು ಊರಿಗೆ ಬಂದಿದ್ದೆ. ಮರುದಿನ ಮಾತ್ರ ಬಿಡುವು. ಮಾರನೇ ದಿನ  ಬೆಂಗಳೂರಿಗೆ ಹೊರಡಬೇಕಿತ್ತು. ಮರುದಿನ ಬೆಳಗ್ಗೆಯೇ ನಮ್ಮೂರನ್ನು ಬೈಕಿನಲ್ಲಿ ಸುತ್ತುವುದಕ್ಕೆ ಹೊರಟೆ, ನನ್ನ ಶಾಲೆ, ನಾನು ಓದಿದ ಪದವಿಪೂರ್ವ ಕಾಲೇಜು, ಪುತ್ತೂರಿನ ಡಿಗ್ರಿ ಕಾಲೇಜು... ಹೀಗೆ ನನ್ನ ವಿದ್ಯಾರ್ಥಿ ಜೀವನವನ್ನು ಕಳೆದ ಜಾಗಗಳ ದರ್ಶನವನ್ನು ಬೈಕಿಗೆ ಮಾಡಿಸಿದೆ. ಉಪ್ಪಿನಂಗಡಿಯಲ್ಲಿರುವ ಇತಿಹಾಸ ಪ್ರಸಿದ್ಧ ಸಹಸ್ರಲಿಂಗೇಶ್ವರನಿಗೆ ನಮಸ್ಕರಿಸಲೂ ಮರೆಯಲಿಲ್ಲ.
   ಮೇ ೧೯  ಬೆಳಿಗ್ಗೆ  ೬ಗಂಟೆಗೆ ಮನೆಯಿಂದ ಉದ್ಯಾನ ನಗರಿಗೆ ಹೊರಟೆ. ನನ್ನಲ್ಲಿ ಬರುವಾಗಿದ್ದ ಉತ್ಸಾಹ ಹೋಗುವಾಗ ಇದ್ದಿರಲಿಲ್ಲವೇನೋ ಎಂದು ಈಗ ಅನ್ನಿಸುತ್ತಿದೆ. ಆದರೆ ತೀರಾ ಆಲಸ್ಯ ಸೋಕಿರಲಿಲ್ಲ. ಹುಷಾರಾಗಿ ಹೋಗು, ನಿಧಾನವಾಗಿಯೇ ರೈಡ್‌ ಮಾಡು..ತಲುಪಿದ ಕೂಡಲೇ ಫೋನು ಮಾಡು.. ಕಾಳಜಿ ತೋರುತ್ತಲೇ ಅಪ್ಪ, ಅಮ್ಮ ಸೇರಿದಂತೆ ಮನೆಯವರೆಲ್ಲರೂ ಬೀಳ್ಕೊಟ್ಟರು. ಆಗ ತಾನೆ ಸೂರ್ಯ ಮೂಡಿದ್ದ. ಕೆಂಬಣ್ಣದ ಆಕಾಶ, ಹದವಾಗಿ ಬೀಸುತ್ತಿದ್ದ ತಂಗಾಳಿ ರೈಡಿಂಗ್‌ಗೆ ಹೇಳಿ ಮಾಡಿಸಿದಂತಿತ್ತು. ಮತ್ತೊಮ್ಮೆ ಸೌತಡ್ಕ ಗಣಪನಿಗೆ ಮನಸ್ಸಲ್ಲಿ ನಮಸ್ಕರಿಸಿ ಬೈಕ್‌ ಚಾಲೂ ಮಾಡಿದೆ.
ಗಂಟೆ ಏಳು ಆಗುವಷ್ಟರಲ್ಲಿ ಶಿರಾಡಿ ಘಾಟಿ ಬುಡದಲ್ಲಿದ್ದೆ. ಅಲ್ಲಿಂದ ೩೬ ಕಿ.ಮೀ ಏರು-ತಿರುವು ರಸ್ತೆ; ನಿಧಾನವಾಗಿಯೇ ಹೋಗಬೇಕಿತ್ತು. ಘಾಟಿ ಮಧ್ಯೆ, ಅಲ್ಲಲ್ಲಿ ನಿತ್ತು ಬೆಳಗಿನ ವಾತಾವರಣದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಮುನ್ನಡೆದೆ. ೮.೩೫ಕ್ಕೆ ಸಕಲೇಶಪುರ ದಾಟಿ ಬೈಕು ಸಾಗಿತ್ತು. ಅಲ್ಲಿಂದ ೧೫ ಕಿ.ಮೀ ದೂರ. ಪಾಳ್ಯ ಎಂಬ ಪ್ರದೇಶ. ಅಲ್ಲಿ ರಸ್ತೆ ಎಷ್ಟು ನೇರವಾಗಿ/ಚೆನ್ನಾಗಿದೆ ಎಂದರೆ, ನೀವು ಬೀಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರು ಅಥವಾ ಸ್ವತಃ ಬೀಳಲು ಯತ್ನಿಸಿದರೂ ಬೀಳಲು ಸಾಧ್ಯವಿಲ್ಲ! ಅಂಥದ್ದರಲ್ಲಿ ನಾನು ಮತ್ತು ಬೈಕು ಬಿದ್ದೆವು.
ಬಾಗಿದ ಬೈಕಿನ ಎಡ ಕೈ (ಹ್ಯಾಂಡಲ್‌ ಬಾರ್‌)
   ಏನಾಯ್ತೊ ಏನೋ ಸರಿಯಾಗಿಯೇ ಚಲಿಸುತ್ತಿದ್ದ ಬೈಕು ಟಾರು ರಸ್ತೆ ಬಿಟ್ಟು ಪಕ್ಕಕ್ಕೆ ಚಲಿಸಿತು. ಪಕ್ಕದಲ್ಲೇ ಇದ್ದ ಅಂಗಡಿ ಬಳಿಯಲ್ಲಿ ಲಾರಿಯೊಂದು ನಿಂತಿತ್ತು. ಅದಕ್ಕೆ ಡಿಕ್ಕಿ ಹೊಡೆಯುತ್ತದೆ  ಅಂದು ಕೊಂಡು ಜೋರಾಗಿ ಬ್ರೇಕ್‌ ಒತ್ತಿದೆ. ಪರಿಣಾಮ ನನ್ನೊಂದಿಗೆ ಬೈಕ್‌ ಧರೆಗೆ. ನನ್ನ ಎಡ ಭುಜದ ಕೀಲು ಜಾರಿತು. ಬೈಕಿನ ಎಡ ಕೈಯೂ (ಹ್ಯಾಂಡಲ್‌ ಬಾರ್‌) ಬಾಗಿತು. ಐದು ನಿಮಿಷ ಮಿದುಳು ಕಾರ್ಯ ಸ್ಥಗಿತಗೊಳಿಸಿತು. ಏನಾಯ್ತು ಎಂದು ತೋಚಲೇ ಇಲ್ಲ. ಹೇಗಪ್ಪಾ ಬೆಂಗ್ಳೂರಿಗೆ ಹೋಗುವುದು ಅನ್ನುವುದೇ ಚಿಂತೆ, ಅದರ ನಡುವೆ ತಡೆಯಲಸಾಧ್ಯವಾದ ಕೈ ನೋವು ನೆತ್ತಿಗೆ ಏರುತ್ತಿತ್ತು. ಬೈಕಲ್ಲಿ ಬರಲೇ ಬಾರದಿತ್ತು  ಎಂದು ಅಂದುಕೊಂಡೆ. ನಿನ್ನ ದರ್ಶನಕ್ಕೆ ಅಂತ ಬಂದು ಹೀಗಾಗಬಹುದೇ ಎಂದು ಸೌತಡ್ಕ ಗಣಪನನ್ನೇ ಮನಸ್ಸಲ್ಲಿ ಕೇಳಿದೆ...
  ಇನ್ನು ಮಾಡುವುದೇನು?  ಮನೆಗೊಂದು ಫೋನು. ಅವರ ಬಳಿ ಹೇಳುವುದಾದರೂ ಏನು? ದೊಡ್ಡ ಮಟ್ಟಿನ ಏಟಾಗದಿದ್ದರೂ, ಆ ನೋವಿನ ನಡುವೆ ಮನೆಯವರನ್ನು ಕನ್‌ವಿನ್ಸ್‌ ಮಾಡುವುದು ಹೇಗೆ ಅಂದುಕೊಂಡೇ ಮಾಡಿದೆ ಫೋನು. ನಾನೇ ಖುದ್ದಾಗಿ ಮಾತಾಡಿದ್ದರಿಂದ ಅಪ್ಪ ಅಮ್ಮ ಗಾಬರಿ ಬೀಳಲಿಲ್ಲ ಅಷ್ಟೇನು.  ಬಿದ್ದರೂ ತೀವ್ರ ಗಂಭೀರವಾದ ಏಟು ಆಗಿರಲಿಲ್ಲವಲ್ಲಾ.. ಅದೇ ಸಮಾದಾನ.  ಗಣಪತಿಯೇ ಕಾದಿರಬೇಕು  ಎಂದುಕೊಂಡೆ. ಪಕ್ಕದಲ್ಲಿ ನಿಂತಿದ್ದ ಲಾರಿ ಊರಿನದವರಾಗಿತ್ತು. ( ಆ ಲಾರಿ ಇಲ್ಲದಿದ್ದರೆ ನಾನು ಬೀಳುತ್ತಿರಲಿಲ್ಲವೇನೋ?) ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದವರು ಅದೇ ಲಾರಿಯ ಸಿಬ್ಬಂದಿ. ಸಕಲೇಶಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ. ನನ್ನ ಅದೃಷ್ಟ; ಅಲ್ಲಿ ಎಲುಬು ತಜ್ಞರಿದ್ದರು. ಎಕ್ಸ್‌ರೇ ತೆಗೆದು ಪರೀಕ್ಷಿಸಿ ಜಾರಿದ ಭುಜವನ್ನು ಕೂರಿಸಿ, ಚೀಲವೊಂದರಲ್ಲಿ ಕೈಯನ್ನು ನೇತು ಹಾಕಿ ಬೀಳ್ಕೊಟ್ಟರು. ಆ ದಿನ ಸಂಜೆಯ ಹೊತ್ತಿಗೆ ಬೆಂಗಳೂರು ತಲುಪಬೇಕಿದ್ದ ನಾನು ಮತ್ತು ಬೈಕ್‌ ಪುನಃ ಮನೆಗೆ ತಲುಪಿದ್ದೆವು ಕೈ ಮುರಿದುಕೊಂಡು!
~
ಮುಂದಿನ ೨೧ ದಿನಗಳ ಕಾಲ ನಾನು ಅನುಭವಿಸಿದ್ದು ಯಾತನೆ. ಮೂರು ವಾರಗಳ ಕಾಲ ನಾನು ಅಕ್ಷರಶಃ ಅಂಗವಿಕಲನಾಗಿದ್ದೆ. ಅಂಗವೈಕಲ್ಯತೆ, ಅಂಗವಿಕಲರ ಕಷ್ಟಗಳೇನು ಎಂಬುದು ಅರಿವಿಗೇ ಬಂದಿದ್ದು ಆಗಲೇ. ಪ್ರತಿಯೊಂದು ಕೆಲಸಕ್ಕೂ ಮತ್ತೊಬ್ಬರನ್ನು ಅವಲಂಬಿಸಬೇಕಾಗಿತ್ತು. ಅಮ್ಮ-ಅಪ್ಪ ಹೊರತಾಗಿ ಬೇರೆ ಯಾರನ್ನು ಅವಲಂಬಿಸಲು ಸಾಧ್ಯ. ೨೧ ದಿನಗಳ ಕಾಲ ನನ್ನ ಚಾಕರಿ ಮಾಡಿದವರು ಅವರೇ. ಎಡ ಕೈಗೆ ಏಟಾಗಿದ್ದರಿಂದ ಸ್ನಾನಾದಿಯಾಗಿ ಯಾವುದೇ ಶೌಚ ಕಾರ್ಯವನ್ನು ನಾನೇ ಮಾಡುವಂತಿರಲಿಲ್ಲ. ಅದಕ್ಕೂ ಅವರನ್ನೇ ನೆಚ್ಚಿಕೊಳ್ಳಬೇಕಾಯಿತು. ಅವರ ಪಾಲಿಗೆ ಮತ್ತೆ ನಾನು ಪುಟ್ಟ ಮಗುವಾಗಿದ್ದೆ. ನನ್ನ ಮೇಲೆ ಸಿಟ್ಟು ಬರುತ್ತಿದ್ದರೂ ಇಬ್ಬರೂ ತೋರಿಸುತ್ತಿರಲಿಲ್ಲ, ನೋವು ಆಗುವಾಗುವಾಗ, ರಾತ್ರಿ ನಿದ್ದೆ ಬಾರದೇ ಇದ್ದಾಗ ನಾನು ಅವರ ಮೇಲೆ ತೋರುತ್ತಿದ್ದ ಸಿಟ್ಟನ್ನು ಲೆಕ್ಕಿಸದೇ ನನ್ನನ್ನೇ ಸಮಾಧಾನಿಸಿ ಮಾಡಿದ ಸೇವೆಯನ್ನು ನೆನೆಯುವಾಗ ತಪ್ಪು ಮಾಡಿದೆ ಎಂದೆನಿಸುತ್ತದೆ. ಹೆತ್ತವರು ಎಂದರೆ ಹಾಗಲ್ಲವೇ? ಮಕ್ಕಳು ಕೋಪ ಮಾಡಿದರೂ, ಬೈದರೂ ಕ್ಷಮಿಸುವುದು ಅವರ ದೊಡ್ಡ ಗುಣ.
  ನಾನು ಆರಂಭದಲ್ಲಿ ಆಲೋಪಥಿ ಚಿಕಿತ್ಸೆ ಪಡೆದಿದ್ದರೂ ಆಮೇಲೆ ಮೊರೆ ಹೋಗಿದ್ದು ನಾಟಿ ಚಿಕಿತ್ಸೆಗೆ. ಅದರ ಪ್ರಕಾರ, ನಾಟಿ ಕೋಳಿ ಮೊಟ್ಟೆಯ ಬಿಳಿ ದ್ರವದಲ್ಲಿ  ‘ಮರ್ಮಾಣಿ’  ಮಾತ್ರೆ ಎಂದು ಕರೆಯಲಾಗುವುವ ಆಯುರ್ವೇದದ ಮಾತ್ರೆಯನ್ನು ಅರೆದು ರಾತ್ರಿ ಭುಜಕ್ಕೆ ಹಚ್ಚಬೇಕಿತ್ತು. ಬೆಳಿಗ್ಗೆ ಹಚ್ಚಲಾಗಿದ್ದ ಔಷಧವನ್ನು ತೊಳೆದು ಜಾಗಕ್ಕೆ ಬಿಸಿ  ಶಾಖ ನೀಡಬೇಕಿತ್ತು. ಹೀಗೆ ೨೧ ದಿನಗಳ ಕಾಲ ಮಾಡಬೇಕಿತ್ತು. ಮಾತ್ರೆ ಅಂದೆನಲ್ಲಾ... ಅದು ಕಲ್ಲಿನಷ್ಟೇ ಗಟ್ಟಿ; ಅದನ್ನು ಅರೆಯಬೇಕಿದ್ದರೆ ಸುಮಾರು ಸಮಯ ಹಿಡಿಯುತ್ತಿತ್ತು. ಸಂಜೆ ಹೊತ್ತು ಅದನ್ನು ಅರೆದು ಭುಜಕ್ಕೆ ಹಚ್ಚುವುದು ನನ್ನಮ್ಮನಿಗೆ ಅಷ್ಟು ದಿನಗಳ ಕಾಲ ದೊಡ್ಡ ಕೆಲಸವಾಗಿತ್ತು. ಮರುದಿನ ಬೆಳಿಗ್ಗೆ ಅದನ್ನು ತೊಳೆದು ಬಿಸಿ ನೀರಿನ ಶಾಖ ಕೊಡುವುದು ಅಪ್ಪನ ಪಾಲಿಗೆ ಮೀಸಲಾಗಿದ್ದ ಕೆಲಸವಾಗಿತ್ತು. ನಿರಂತರ ೨೧ ದಿನಗಳ ಆರೈಕೆಯಲ್ಲಿ ನನ್ನ ಕೈ ಸುಧಾರಿಸಿತ್ತು. ಆದರೆ ಅವರಿಬ್ಬರು ಬಡವಾಗಿದ್ದರು. ಮೂರು ವಾರದ ನಂತರ ಚೀಲದಲ್ಲಿ ನೇತು ಹಾಕಿದ್ದ ಕೈಯನ್ನು ಹೊರ ತೆಗೆದಾಗ ಅವರು ಪಟ್ಟ ಆನಂದ ಅಷ್ಟಿಷ್ಟಲ್ಲ. ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟುತ್ತದೆ. ಮುಂದೆಯೂ ಕೂಡ.
~
  ಐವತ್ತು- ಅರುವತ್ತರ ಆಸುಪಾಸಿನಲ್ಲಿರುವ ಅವರ ಆರೈಕೆ ನಾನು ಮಾಡಬೇಕಿತ್ತು. ಆದರೆ ದುರದೃಷ್ಟ ನನ್ನ ಆರೈಕೆಯನ್ನೇ ಅವರು ಮಾಡುವಂತಾಯಿತು. ನಾನು ಬೈಕ್‌ ತೆಗಿಯಲೇ ಬಾರದಿತ್ತು, ಇಲ್ಲಿಗೆ ತರಲೇ ಬಾರದಿತ್ತು ಎಂದು ಆ ೨೧ ದಿನಗಳ ಅವಧಿಯಲ್ಲಿ ಹೇಳಿದಾಗಲೆಲ್ಲಾ.. ಏನೋ ಸಣ್ಣದರಲ್ಲಿ ಆಗಿ ಹೋಯ್ತು, ಒಂದು ವೇಳೆ ಸೊಂಟ ಮುರಿದಿದ್ದರೆ, ತಲೆಗೆ ಏಟಾಗಿದ್ದರೆ ಜೀವಮಾನ ಪೂರ್ತಿ ನರಕ ಯಾತನೆ ಅನುಭವಿಸಬೇಕಾಗಿತ್ತು ಎನ್ನುತ್ತಾ ಸಮಾಧಾನ ಮಾಡಿದ ಅಪ್ಪ-ಅಮ್ಮ ಯಾಕೋ ಮೊನ್ನೆ ಕಾಡ ತೊಡಗಿದರು.
 ಆಫೀಸ್‌ಗೆ ಒಂದು ವಾರ ರಜೆ ಹಾಕಿ ಊರಿಗೆ ಹೋದೆ. ನಾನು ಬೈಕಿಂದ ಬಿದ್ದು ವರ್ಷ ಆಗಿತ್ತು. ಅಮ್ಮನಿಗೆ ನೆನಪಿಸಿದೆ. ಸುಮ್ಮನೆ ನಕ್ಕರು. ಕಳೆದ ವರ್ಷ ನೀನು ಈ ಹೊತ್ತಲ್ಲಿ  ಮದ್ದು ಅರೆಯುತ್ತಿದ್ದೆ ಎಂದು ಒಂದು ಸಂಜೆ ಅಮ್ಮನಿಗೆ ಹೇಳಿದೆ. ಹಳೆಯದನ್ನೆಲ್ಲಾ ಮತ್ತೆ ಮತ್ತೆ ಯಾಕೆ ನೆನಪಿಸುತ್ತೀಯಾ ಎಂದು ಪ್ರೀತಿಯಲ್ಲೇ ಬೈದರು. ಆಗ ನಗುವ ಸರದಿ ನನ್ನದಾಗಿತ್ತು!
ಮರುದಿನ ನನ್ನ ಹೈಸ್ಕೂಲ್‌ಗೆ ಹೋಗಬೇಕಾಗಿತ್ತು. ಅಣ್ಣನ ಬೈಕನ್ನು ಹಿಡಿದು ಹೊರಟೆ. ಊಟ ಮಾಡುತ್ತಿದ್ದ ಅಮ್ಮ, `ಸೂರ್ಯ... ಜಾಗ್ರತೆ ಮಣ್ಣಿನ ರಸ್ತೆ`  ಎಂದರು. ಪಕ್ಕದಲ್ಲೇ ಇದ್ದ ಅತ್ತಿಗೆ, `ಬೆಂಗಳೂರು ಟ್ರಾಫಿಕ್‌ನಲ್ಲಿ ಬೈಕು ಓಡಿಸುವವನಿಗೆ ಇಲ್ಲಿ ಓಡಿಸಲು ಆಗುವುದಿಲ್ಲವೇ` ಎಂದು ಹೇಳಿದರು. ಅಮ್ಮನಿಗೆ ಕಳೆದ ವರ್ಷದ ಘಟನೆಗಳು ನೆನಪಾಗಿರಬೇಕು, ಅತ್ತಿಗೆ ಅಷ್ಟು ಹೇಳಿದ್ದೆ ನನ್ನ ಕಡೆ ನಕ್ಕು ಸುಮ್ಮನಾದರು. ನಾನು ಅಮ್ಮನನ್ನೇ ದಿಟ್ಟಿಸುತ್ತಾ ನಗು ಬೀರಿದೆ. `ಆಯಿತು ಹುಷಾರಾಗಿ ಹೋಗಿ ಬಾ’ ಎಂಬ ಹೆತ್ತ ಕರುಳಿನ ಆಶಯವನ್ನು ಅಮ್ಮನ ಕಣ್ಣಲ್ಲಿ ಆ ಕ್ಷಣ ಕಂಡೆ!
 ~
ಮೊನ್ನೆ `ಪಾ` ಚಿತ್ರ ನೋಡುತ್ತಿದ್ದೆ. ಚಿತ್ರ ನೋಡಿದ ಬಳಿಕ ನನ್ನ ಅಮ್ಮ-ಅಪ್ಪನ ಬಗ್ಗೆ ಯಾಕೋ ಬರೆಯಲೇ ಬೇಕೆನಿಸಿತು.

ಕೊನೆಗೆ: ನಾನು ವರ್ಷಕ್ಕೊಮ್ಮೆ ‘ಅಮ್ಮಂದಿರ/ಅಪ್ಪಂದಿರ’ ದಿನ ಆಚರಿಸುವುದಿಲ್ಲ. ನನ್ನ ಪಾಲಿಗೆ ಪ್ರತಿ ದಿನವೂ ಅಮ್ಮಂದಿರ/ ಅಪ್ಪಂದಿರ ದಿನವೇ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

jeevana patagalu :-) sayotanaka enadru kalisthane iruthade...

Ganesh Bhat ಹೇಳಿದರು...

uttamavaada lekhana.baikina bagge anubhavisida lekhana nannannoo kalpana lokakke oyyithu.