ಭಾನುವಾರ, ಏಪ್ರಿಲ್ 11, 2010

ಮರೆಯದ ನೆನಪನು ನಮ್ಮಲ್ಲಿ ತಂದೆ ನೀನು..

ಕೆಲವು ವಾರಗಳ ಹಿಂದೆ ವಾಹಿನಿಯೊಂದರಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಅವರು
ನೀ ಬರೆದ ಕಾದಂಬರಿ’ ಚಿತ್ರದ ’ನೀ ಮೀಟಿದಾ ನೆನಪೆಲ್ಲವೂ. ಎದೆ ತುಂಬಿ ಹಾಡಾಗಿದೇ.... ಎಂದು ಹಾಡುತ್ತಿದ್ದರೆ, ಅವರ ಕಣ್ಣಂಚು .. ಜೊತೆಗೆ ನನ್ನ ಕಣ್ಣಂಚು ಒದ್ದೆಯಾಗಿತ್ತು. ಆ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಅಂತಹ ಭಾವನಾತ್ಮಕವಾದ ಹಲವಾರು ಹಾಡುಗಳನ್ನು ಹಾಡಿದ್ದರು. ಏಕೋ ಏನೋ ಆ ಹಾಡುಗಳನ್ನೆಲ್ಲಾ ಕೇಳುವಾಗ ಹೃದಯ ತುಂಬಾ ಭಾರವಾದ ಅನುಭವ.
~~~

ಸತ್ಯ ಎಂದಿಗೂ ಕಹಿ ಅನ್ನುವ ಮಾತನ್ನು ಹಲವಾರು ಬಾರಿ ಕೇಳಿದ್ದೆ. ಆದರೆ ಅರಗಿಸಿಕೊಳ್ಳಲಾರದ್ದು ಅಂತ ತಿಳಿದಿರಲಿಲ್ಲ. ಅಂದು ಮೊದಲ ಪಾಳಿ ಮುಗಿಸಿಕೊಂಡು ತಡವಾಗಿ ರೂಮಿಗೆ ಬಂದಿದ್ದ ನನಗೆ ನಿದ್ದೆಯ ಜೋಮು ಹಿಡಿಯಬೇಕಾದರೆ ಸುಮಾರು ಹೊತ್ತು ಹಿಡಿತ್ತು. ಅದಕ್ಕೆ ಕಾರಣವೂ ಇತ್ತು. ಅಂತು ಕೊನೆಗೂ ನಿದ್ದೆ ಬಂತೆನ್ನಿ. ಮರು ದಿನ ಬೆಳಗ್ಗೆ ೮.೩೦ರ ಸುಮಾರಿಗೆ ಮಿತ್ರ ಜೋಮನ್ ವರ್ಗೀಸ್ ಒಂದು ಎಸ್‌ಎಂಎಸ್ ಕಳಿಸಿದ್ದರು. ನಿದ್ದೆ ಕಣ್ಣಿನಲ್ಲಿ ಮೊಬೈಲ್ ಎತ್ತಿ ಅಸ್ಪಷ್ಟವಾಗಿ ಕಾಣುತ್ತಿದ್ದ ಮೆಸೇಜ್ ಓದಿದ ಕೂಡಲೇ ನಿದ್ದೆ ಗುಡ್ಡೆ ಹತ್ತಿತ್ತು. ಸೂರ್ಯ ವಿಷ್ಯ ಗೊತ್ತಾಗಿಲ್ವ ವಿಷ್ಣು ಇನ್ನಿಲ್ಲ ಎನ್ನುವುದು ಮೆಸೇಜ್‌ನಲ್ಲಿದ್ದ ಸಾರಾಂಶ. ತಕ್ಷಣ ಟಿವಿ ಆನ್ ಮಾಡಿದೆ. ಮೆಸೇಜ್‌ನಲ್ಲಿದ್ದ ಅಂಶಗಳು ದೃಶ್ಯ ರೂಪದಲ್ಲಿ ಗೋಚರವಾಗಿತ್ತು. ನಿದ್ದೆಯಿಂದ ಮಸುಕುಕಾಗಿದ್ದ ಕಣ್ ದೃಷ್ಟಿ ಕನ್ನಡ ಚಿತ್ರರಂಗದ ಆಪ್ತಮಿತ್ರ ವಿಷ್ಣುವರ್ಧನ್ ಅವರ ಪಾರ್ಥೀವ ಶರೀರ ಕಂಡಾಗ ಸರಿಯಾಗಿ ಗೋಚರವಾಗಲು ಆರಂಭವಾಯಿತು. ಹಿಂದಿನ ದಿನವಷ್ಟೇ ಸುಗಮ ಸಂಗೀತ ಕ್ಷೇತ್ರದ ಮೇರು ಗಾಯಕ ಸಿ.ಅಶ್ವತ್ಥ್ ಅವರು ನಿಧನರಾದ ಸುದ್ದಿ ಅರಗಿಸಿಕೊಳ್ಳುವಷ್ಟರಲ್ಲಿ ವಿಷ್ಣು ವಿಧಿವಶರಾಗಿದ್ದರು.

ವಿಷ್ಣುವರ್ಧನ್ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಬುದ್ಧಿ ತಿಳಿದಾಗಿನಿಂದ ಅವರನ್ನು ಹೃದಯದಲ್ಲಿ ಇಟ್ಟು ಆರಾಧಿಸಿದ್ದೇನೆ. ಚಿತ್ರಮಂದಿರಗಳಲ್ಲಿ ಅವರ ಚಿತ್ರಗಳನ್ನು ನೋಡದಿದ್ದರೂ, ವಾಹಿನಿಗಳಲ್ಲಿ ಅವರ ಚಿತ್ರಗಳನ್ನು ಒಂದೂ ಬಿಡದೆ ನೋಡಿ ಸವಿದಿದ್ದೇನೆ.

ಕನ್ನಡ ಚಿತ್ರರಂಗದ ಪರ್ವಕಾಲ ೭೦ ಹಾಗೂ ೮೦ರ ದಶಕದಲ್ಲಿ ಚಿತ್ರರಂಗದಲ್ಲಿನ ರಾಜಕೀಯದ ಹೊರತಾಗಿಯೂ ರಾಜನಂತೆ ಮೆರೆದವರು ವಿಷ್ಣು. ಭಾವ ತುಂಬಿದ ಅವರ ಅಭಿನಯ ಎಲ್ಲರನ್ನೂ ಮೋಡಿ ಮಾಡಿತ್ತು. ನನ್ನನ್ನೂ ಕೂಡ.
ಅವರೆಡೆಗೆ ಹೆಚ್ಚಾಗಿ ನನ್ನನ್ನು ಆಕರ್ಷಿಸಿದ್ದು ಅವರ ಕಣ್ಣುಗಳು. ಆ ಕಣ್ಣಿನ ತೇಜಸ್ಸು ಇದೆಯಲ್ಲಾ ಅದು ಸಾಮಾನ್ಯವಾದುದಲ್ಲ.. ತಟ್ಟನೆ ಎಲ್ಲರನ್ನೂ ಸೆಳೆದು ಬಿಡುತ್ತಿತ್ತು. ಭಾವಾನಾತ್ಮ ಚಿತ್ರಗಳಲ್ಲಿ ಆ ಕಣ್ಣುಗಳೇ ಹೀರೋ... ಸಾಹಸ ಸಿಂಹನಿಗಿಂತಲೂ ನನಗೆ ಹೆಚ್ಚು ಆಪ್ತವಾಗಿದ್ದು ಅಭಿನವ ಭಾರ್ಗವ ವಿಷ್ಣುವರ್ಧನ್. ಕರ್ಣ, ಮಲಯಮಾರುತ, ಒಂದಾಗಿ ಬಾಳು, ಬಂಧನ, ನೀ ಬರೆದ ಕಾದಂಬರಿ, ಲಾಲಿ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಭಾವನಾತ್ಮಕ ಚಿತ್ರಗಳಲ್ಲಿನ ಯಾವುದೇ ಸನ್ನಿವೇಶ ಆಗಿರಲಿ, ಅವರ ಕಣ್ಣುಗಳು ಆ ದೃಶ್ಯಕ್ಕೆ ನೈಜತೆಯ ಸ್ಪರ್ಶ ನೀಡುತ್ತಿದ್ದವು. ಇತ್ತ ಪ್ರೇಕ್ಷಕನ ಕಣ್ಣಲ್ಲಿ ನೀರು ಹರಿಸುತ್ತಿದ್ದವು.

ಈಗ ೪೦-೫೦ ವಯೋಮಾನದ ಹೆಂಗಸರಲ್ಲಿ ಕೇಳಿ ನೋಡಿ.. ವಿಷ್ಣುವರ್ಧನ್ ಅವರ ನೆಚ್ಚಿನ ನಟ.. ಯಾಕೆಂದರೆ ಅವರ ಯುವ ವಯಸ್ಸಿನ ಕಾಲದಲ್ಲಿ ವಿಷ್ಣು ಅವರ ಮನಸ್ಸನ್ನು ಸೂರೆ ಮಾಡಿದ್ದರು. ಆ ಕಾರಣಕ್ಕಾಗಿಯೇ ಅವರು ಭಾರಿ ಸಂಖ್ಯೆಯಲ್ಲಿ ಮಹಿಲಾ ಅಭಿಮಾನಿಗಳನ್ನು ಹೊಂದಿದ್ದರು.

ಚಿತ್ರರಂಗದ ರಾಜಕೀಯಕ್ಕೆ ಸಿಕ್ಕಿ ನರಳಿದ್ದರೂ, ಮುಂದೊಂದು ಅದೇ ಚಿತ್ರೋದ್ಯಮದ ನಾಯಕತ್ವವನ್ನು ಹೊತ್ತುಕೊಳ್ಳುವಷ್ಟು ಬೆಳೆದಿದ್ದು ವಿಷ್ಣು ಅವರ ಸಾಧನೆ. ನಾಯಕತ್ವದ ಜವಬ್ದಾರಿ ಹೊತ್ತುಕೊಳ್ಳಿ ಎಂದಾಗ ವಿಷ್ಣು ನಯವಾಗಿ ತಿರಸ್ಕರಿಸಿದ್ದರು. ಅದಕ್ಕೆ ಕಾರಣವೂ ಇಲ್ಲದಿಲ್ಲ. (ಅವರ ಆತ್ಮೀಯ ಮಿತ್ರ ಅಂಬರೀಷ್ ಇದ್ದರೆನ್ನಿ ಅದರ ಹೊರತಾಗಿ ಇನ್ನೂ ಹಲವು..! ).

ಅವರೊಬ್ಬ ಪರಿಪೂರ್ಣ ನಟ. ಖಂಡಿತ ಈ ಮಾತು ಅತಿಶಯೋಕ್ತಿ ಅಲ್ಲ. ತಮ್ಮ ಇತಿ ಮಿತಿಗಳನ್ನು ಅವರು ಚೆನ್ನಾಗಿ ತಿಳಿದಿದ್ದರು. ಅವರು ಚೆನ್ನಾಗಿ ಹಾಡದಿದ್ದರೂ, ಅವರು ಹಾಡಿರುವ ಹಾಡುಗಳು ಜನಪ್ರಿಯವಾಗಿದ್ದವು. (ಪ್ರತೀ ಬಾರಿ ನಾನು ಅಭಿಮಾನಿಗಳಿಗಾಗಿ ಹಾಡುತ್ತಿರುವುದಾಗಿ ವಿಷ್ಣು ಹೇಳುತ್ತಿದ್ದರು). ಚಿತ್ರಗಳಲ್ಲಿ ನೃತ್ಯ ಮಾಡಲು ಬರದಿರುವುದು ಅವರ ಬಹು ದೊಡ್ಡ ಮಿತಿಯಾಗಿತ್ತು. ನೀವು ನೋಡಿ, ಅವರ ಚಿತ್ರಗಳಲ್ಲಿ ನೃತ್ಯ ಸನ್ನಿವೆಶಗಳು ಇದ್ದುದು ಬಹಳ ಕಡಿಮೆ. ಆಗಿನ ಕಾಲದಲ್ಲಿ ಚಲನಚಿತ್ರಗಳಲ್ಲಿ ನೃತ್ಯಕ್ಕೆ ಹೆಚ್ಚು ಪ್ರಧಾನ್ಯತೆ ಇರಲಿಲ್ಲ. ಕನ್ನಡ ಸೇರಿದಂತೆ ಯಾವುದೇ ಚಿತ್ರರಂಗದ ಹಿರಿಯ ನಟರ ಚಿತ್ರಗಳನ್ನು ವೀಕ್ಷಿಸಿ. ಅಲ್ಲಿ ನೃತ್ಯಗಳೇ ಇಲ್ಲ. ಇದ್ದರೂ ಕಡಿಮೆ ಪ್ರಮಾಣದಲ್ಲಿ. ಆ ಕಾಲದಲ್ಲಿ ಮಹತ್ವ ಇದ್ದುದು ಅಭಿನಯಕ್ಕೆ ಮಾತ್ರ. ಅದರ ಹೊರತಾಗಿ ಅವರು ಪ್ರಾಯಶಃ ಚಲನಚಿತ್ರದಲ್ಲಿ ನಟನೆಗೆ ಬೇಕಾದ ಎಲ್ಲಾ ಅಂಶಗಳನ್ನು ಕರಗತಮಾಡಿಕೊಂಡಿದ್ದರು.

ಯಾಕೋ ಏನೋ ಅವರು ರಾಜಕೀಯದತ್ತ ಸುಳಿಯಲಿಲ್ಲ, ತಮ್ಮ ಸುತ್ತ ಅದು ಸುಳಿಯಲು ಯತ್ನಿಸಿದರೂ, ಸುತ್ತಲೂ ಬಲವಾದ ಬೇಲಿ ಹಾಕಿ ಅದರ ಸುಳಿವುವಿಕೆಯನ್ನು ತಡೆದರು. ಹಲವು ಪಕ್ಷಗಳು ರಾಜಕೀಯ ಅಖಾಡಕ್ಕೆ ಆಹ್ವಾನಿಸಿದರು. ಅವರಿಗೆ ವಿಷ್ಣು ನೀಡಿದ್ದು ನಗು ಮುಖದ ನಿರಾಕರಣೆ. ಈ ಕಾರಣಕ್ಕಾಗಿಯೇ ಅವರು ಎಲ್ಲರಿಗೂ ಇನ್ನಷ್ಟು ಇಷ್ಟವಾದದ್ದು. ಗೆಳೆಯ ಅಂಬಿಗಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದರೂ ಅಲ್ಲಿ ಸ್ನೇಹ ಬಿಟ್ಟು ರಾಜಕೀಯದ ವಾಸನೆ ಇರಲಿಲ್ಲ. ಗೆಳೆಯನ ಹೆಸರು ಹೇಳಿದರೇ ಹೊರತು, ಪಕ್ಷದ ಹೆಸರು ಹೇಳಲಿಲ್ಲ.

ಅವರ ಬಗ್ಗೆ ಬರೆಯ ಹೊರಟರೆ ಎಷ್ಟೂ ಬರೆಯಬಹುದು..... ಇನ್ನು ಬರೆಯಬೇಕು ಅನ್ನಿಸುತ್ತಿದೆ. ಮನಸ್ಸು ಭಾವುಕವಾದಾಗ ಮಾತು ಬರುವುದಿಲ್ಲ ಎಂದು ಹೇಳುತ್ತಾರೆ. ನನಗ್ಯಾಕೋ ಬರೆಯಲು ಕೈ ಮುಂದೆ ಹೋಗುತ್ತಿಲ್ಲ...

’ಕೆಲವು ವರ್ಷಗಳ ಹಿಂದೆ ವಿಷ್ಣು ನನಗೆ ಫೋನ್ ಮಾಡಿದ್ದರು. ಯಾಕೆ ಬಾಲು, ಇಲ್ಲಿ ಕಾಣಿಸ್ತಾ ಇಲ್ಲ, ಭಾರಿ ಬ್ಯುಸಿ ಅಂತೆ ನೀವು? ಅಂತ ಕೇಳಿದರು. ಹೀಗೆ ಹೀಗೆ(.....) ಅಂದೆ. ಏನೂ ಮಾತಾಡಬೇಡಿ. ನನ್ನ ಎಲ್ಲಾ ಚಿತ್ರಗಳಲ್ಲಿ ನೀವು ಹಾಡಬೇಕು. ನಿರ್ಮಾಪಕರೊಂದಿಗೆ ಒಪ್ಪಂದ (ಅಗ್ರಿಮೆಂಟ್) ಮಾಡುವಾಗಲೇ ನನ್ನ ಪಾತ್ರಕ್ಕೆ ಎಸ್.ಪಿ ಬಾಲಸುಬ್ರಮಣ್ಯಂ ಅವರಿಂದ ಹಾಡಿಸಬೇಕು ಎಂಬ ಷರತ್ತನ್ನು ಹಾಕುತ್ತೇನೆ. ನೀವು ಹಾಡಿದರೆ ಬಳಿಕ ನನಗಿರುವ ಕೆಲಸ ಶೇ ೨೫ರಷ್ಟು ಮಾತ್ರ ಅಂತ ವಿಷ್ಣು ಹೇಳಿದ್ದರು. ಪ್ರಾಯಶಃ ವಿಷ್ಣು ಅವರ ಹಾಡುಗಳಲ್ಲಿ ಶೇ ೯೯ ರಷ್ಟು ಹಾಡುಗಳನ್ನು ನಾನೇ ಹಾಡಿದ್ದೇನೆ. ಅಗ್ರಿಮೆಂಟ್‌ನಲ್ಲಿ ನನ್ನ ಪಾತ್ರಕ್ಕೆ ನನ್ನಿಂದಲೇ ಹಾಡಿಸಬೇಕು ಎಂದು ಷರತ್ತು ಹಾಕಿದ ಏಕೈಕ ಕಲಾವಿದ ವಿಷ್ಣವರ್ಧನ್. ಜೀವನದಲ್ಲಿ ನನಗೇ ಎರಡನೇ ಸಲ ಬಹು ದೊಡ್ಡ ಆಘಾತ ಆಗಿದ್ದು, ವಿಷ್ಣುವರ್ಧನ್ ಅವರು ಅಸ್ತಂಗತರಾಗಿದ್ದು ಎರಡನೇ ಆಘಾತ. ಈ ಹಿಂದೆ ನನ್ನ ಅಣ್ಣ ಮೃತಪಟ್ಟಾಗ ಮೊದಲ ಬಾರಿ ನನಗೆ ಭಾರಿ ಆಘಾತವಾಗಿತ್ತು. ವಿಷ್ಣು ಅವರು ನನ್ನ ಸಹೋದರನಂತೆ. ಹೀ ಈಸ್ ಎ ವಂಡರ್‌ಫುಲ್ ಹ್ಯೂಮನ್ ಬೀಯಿಂಗ್ ’ ಅಂತ ಹೇಳಿ ಎಸ್‌ಪಿಬಿ ಅದೇ ಕಾರ್ಯಕ್ರಮದಲ್ಲಿ ಕಂಬನಿ ಮಿಡಿದ್ದರು.

ಎಸ್‌ಪಿ ಅವರ ಮಾತನ್ನು ಕೇಳಿ ಮತ್ತೊಮ್ಮೆ ನನ್ನ ಕಣ್ಣು ತೋಯ್ದಿತು. ವಿಷ್ಣು ಅವರ ಸಾವು ಎಸ್‌ಪಿ ಅವರಿಗೆ ಮಾತ್ರವಲ್ಲ. ನನ್ನಂಥ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಅವರು ಇಲ್ಲ ಅನ್ನೋದು ಎಷ್ಟು ಸತ್ಯನೋ ಅವರ ನೆನಪು ಶಾಶ್ವತ ಅನ್ನೋದು ಅಷ್ಟೇ ಸತ್ಯ.

ನಮ್ಮನ್ನಗಲಿದ ಶ್ರೇಷ್ಠ ಕಲಾವಿದನಿಗೆ ವಿಳಂಬವಾಗಿ ನನ್ನದೊಂದು ಪುಟ್ಟ ಅಕ್ಷರನಮನ...

2 ಕಾಮೆಂಟ್‌ಗಳು:

Karnataka Best ಹೇಳಿದರು...

arey tumba chennagi barididdiyalva

Karnataka Best ಹೇಳಿದರು...

enno blogge gud bye helidya