ಗುರುವಾರ, ಜುಲೈ 18, 2013

ಅನಾಮಿಕಳ ಆತ್ಮೀಯ ಪತ್ರ...!

ಟಕ್‌... ಟಕ್‌... ಟಕ್...
 ಬಾಗಿಲು ಬಡಿದ ಸದ್ದು. ತೆರೆದು ನೋಡುತ್ತೇನೆ; ಅಂಚೆಯವ ‘ಸರ್‌ ಪೋಸ್ಟ್‌’ ಎನ್ನುತ್ತಾ ಕವರನ್ನು ಕೈಗಿಟ್ಟ. -ಮೇಲ್‌, ಫೇಸ್‌ಬುಕ್, ಮೊಬೈಲ್‌, ಎಸ್‌ಎಂಎಸ್‌ಗಳ ಕಾಲದಲ್ಲಿ ಯಾರಪ್ಪಾ ಕಾಗದ ಬರೆದವರು ಎನ್ನುತ್ತಾ ಕವರಿನ ಹಿಂಬದಿ ನೋಡಿದೆ; ವಿಳಾಸ ಇರಲಿಲ್ಲ. ಸಾಮಾನ್ಯವಾಗಿ ಇನ್ಸೂರೆನ್ಸ್‌ ಕಂಪೆನಿಗಳ, ಬ್ಯಾಂಕುಗಳ ಕಾಗದಗಳಷ್ಟೇ ನಮ್ಮ ಮನೆ ಗೇಟಿನಲ್ಲಿರುವ ಪೆಟ್ಟಿಗೆಗೆ ಬಿದ್ದಿರುತ್ತವೆ. ವಿಳಾಸ ಇಲ್ಲದ ಕವರು ನನ್ನ ಕುತೂಹಲ ಕೆರಳಿಸಿತು.

ಕೌತುಕದಿಂದಲೇ ಕವರು ಒಡೆದೆ. ಸುಂದರ ಕೈಬರಹನ್ನೊಳಗೊಂಡ ಪತ್ರ ಅದು. ದುಂಡು ದುಂಡು ಅಕ್ಷರಗಳು ಸ್ಫುಟವಾಗಿ ಕಣ್ಣಿಗೆ ರಾರಾಜಿಸುತ್ತಿದ್ದವು. ಆ ಕೈ ಬರಹಕ್ಕೆ ಮೆಚ್ಚುಗೆ ಸೂಚಿಸುತ್ತಾ ಪತ್ರ ಓದಲು ಶುರು ಹಚ್ಚಿದೆ.

~~~
ಹಾಯ್‌,
ಗೆಳೆಯಾ ಹೇಗಿದ್ದೀಯಾ?

ಗೊಂದಲಕ್ಕೆ ಸಿಕ್ಕಿ ಹಾಕಿಕೊಂಡಿಯಲ್ಲ, ಯಾರಪ್ಪಾ ಇದು ಅಂತ..? ನಿನಗೆ ನನ್ನನ್ನು ಗೊತ್ತಿದೆಯೋ ಇಲ್ಲವೋ, ನನಗೆ ಗೊತ್ತಿಲ್ಲ. ಆದರೆ ನಿನ್ನನ್ನು ನಾನು ಬಲ್ಲೆ. ನಾವಿಬ್ಬರೂ ಪರಸ್ಪರ ಮಾತನಾಡದಿದ್ದರೂ, ಪರಿಚಯ ಇಲ್ಲದಿದ್ದರೂ ನನಗೆ ನೀನು ಆತ್ಮೀಯ. ಐದು ವರ್ಷಗಳಿಂದ ನೀನು ನನಗೆ ಗೊತ್ತು. ಏಕವಚನದಲ್ಲಿ ಹೋಗೋ ಬಾರೋ ಅನ್ನುವಷ್ಟರ ಮಟ್ಟಿಗೆ ನೀನು ನನಗೆ ಹತ್ತಿರ. ಆದರೆ ನಿನಗೆ? ನನಗೆ ಗೊತ್ತಿಲ್ಲ. ನೀನು ನನ್ನನ್ನು ನೋಡಿರಬಹುದು. ಬಹುದು ಏನು ನೋಡೇ ನೋಡಿರ್ತಿಯಾ. ಯಾರು ಅಂತ ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲವೋ ಏನೋ.. ಇರಲಿ. ತಲೆ ತಿನ್ನುವುದಿಲ್ಲ. ನಾನೇ ಹೇಳುತ್ತೇನೆ.

                                                                       ಚಿತ್ರ ಕೃಪೆ: ಅಂತರ್ಜಾಲ
ನನಗೆ ಇನ್ನೂ ಚೆನ್ನಾಗಿ ನೆನಪಿದೆ; ನಿನ್ನನ್ನು ಮೊಟ್ಟ ಮೊದಲ ಸಲ ನೋಡಿದ ದಿನ. ಅದು ಕಾಲೇಜಿನ ಆರಂಭದ ದಿನ. ನೀನು ಉಪ್ಪಿನಂಗಡಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದೆ. ನಿನ್ನ ಜೊತೆ ನಾಲ್ಕಾರು ಹುಡುಗರು ಹರಟುತ್ತಾ ಇದ್ದರು. ಗಂಭೀರ ಮುಖ, ಚೆನ್ನಾಗಿ ಬಾಚಿದ ಕ್ರಾಪು, ಚಿಗುರು ಮೀಸೆ, ಕುರುಚಲು ದಾಡಿ ಮೇಲೆ ಕೈ ಆಡಿಸುತ್ತಾ ಪಟ್ಟಾಂಗ ಹೊಡೆಯುತ್ತಿದ್ದ ನಿನ್ನನ್ನು ನೋಡಿ ನಾನು ಇಂಪ್ರೆಸ್‌ ಆದೆ. ನಿನ್ನ ನಗು, ಶಾರ್ಪ್‌ ಕಣ್ಣುಗಳು ನನ್ನನ್ನು ಆಕರ್ಷಿಸಿತು. ಕಾಲೇಜಿನಲ್ಲಿ ಮೊದಲ ದಿನ ಏನಾಗುತ್ತೋ ಎಂಬ ಹೆದರಿಕೆಯಿಂದಲೇ ಕಾಲೇಜಿಗೆ ಹೊರಟಿದ್ದ ನನಗೆ ನಿನ್ನನ್ನು ನೋಡಿದಾಕ್ಷಣ ಎಲ್ಲಾ ಮರೆತು ಹೋಯಿತು. ಖುಷಿನೂ ಆಯಿತು. ಯಾಕೋ ಗೊತ್ತಿಲ್ಲ, ಮನಸ್ಸಲ್ಲಿ ನಿನ್ನ ಬಗ್ಗೆ ಆತ್ಮೀಯ ಭಾವ ಚಿಗುರಲು ಶುರು ಆಯಿತು. ತಪ್ಪು ತಿಳಿಬೇಡ; ಅದು ಆತ್ಮೀಯ ಸ್ನೇಹ ಭಾವವೇ ಹೊರತು ಬೇರೇನೂ ಅಲ್ಲ. ನೀನೆ ನನ್ನ ಬೆಸ್ಟ್‌ ಫ್ರೆಂಡ್‌ ಅಂತ ನಾನು ಆ ಕ್ಷಣವೇ ನಿರ್ಧರಿಸಿದ್ದೆ.

ಅಷ್ಟೊತ್ತಿಗೆ ಪುತ್ತೂರು ಬಸ್‌ ಬಂತು. ನೀನು ಓಡಿ ಹೋಗಿ ಹತ್ತಿದೆ. ನಾನೂ ಆ ಬಸ್ಸನ್ನೇ ಏರಿದೆ. ನನಗೆ ಇನ್ನೂ ಅಚ್ಚರಿ ಕಾದಿತ್ತು. ಪುತ್ತೂರಿನಲ್ಲಿ ನಾನು ಇಳಿದ ಜಾಗದಲ್ಲಿ ನೀನೂ ಇಳಿದಿದ್ದೆ. ಅಷ್ಟೇ ಏಕೆ ನಾನು ಹೊಸದಾಗಿ ಸೇರಿದ್ದ ಕಾಲೇಜಿಗೇ ನೀನೂ ಸೇರಿದ್ದೆ! ನಮ್ಮ ಕ್ಲಾಸ್‌ಗಳಿದ್ದುದು ಒಂದೇ ಬ್ಲಾಕ್‌ನಲ್ಲಿ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಒಂದೇ ಬೇಜಾರು; ನೀನು ಬಿಎಸ್‌ಸಿ, ನಾನು ಬಿಎ. ಸೈನ್ಸ್‌ ಆದ ಕಾರಣ ಪ್ರಾಕ್ಟಿಕಲ್‌, ಸ್ಪೆಷಲ್‌ ಕ್ಲಾಸ್‌ ಅಂತ ಸಂಜೆವರೆಗೂ ನಿನಗೆ ಕ್ಲಾಸುಗಳು ಇರುತ್ತಿದ್ದವು. ನನಗೋ ಮಧ್ಯಾಹ್ನವರೆಗೆ ಕ್ಲಾಸ್‌ ಇದ್ದರೆ ಅದೇ ದೊಡ್ಡದು. ಆದರೆ, ಇನ್ನು ಮೂರು ವರ್ಷ ನಾನು ನಿನ್ನ ಹತ್ತಿರದಲ್ಲೇ ಇರುತ್ತೇನೆ ಎನ್ನುವುದೇ ನನಗೆ ಖುಷಿಯ ವಿಚಾರವಾಗಿತ್ತು. ಮನಸ್ಸು ಎಷ್ಟು ಸಂತಸದಿಂದ ಕುಣಿದಾಡಿತ್ತು ಗೊತ್ತಾ ಅವತ್ತು? ಹಿಂಜರಿಕೆಯಿಂದಲೇ ಕಾಲೇಜಿಗೆ ಬಂದಿದ್ದ ನಾನು ಹೀಗೆಲ್ಲಾ ಆಗಬಹುದು ಅಂದುಕೊಂಡಿರಲಿಲ್ಲ. I was so happy.

ಪದವಿ ಶಿಕ್ಷಣದ ಮೂರು ವರ್ಷಗಳು ನನ್ನ ಜೀವನದ ಅತ್ಯಂತ ಸುಂದರ ದಿನಗಳು ಎಂದು ಈಗಲು ಕೂಡ ನಾನು ಎಲ್ಲರ ಜೊತೆಗೂ ಹೇಳುತ್ತಿರುತ್ತೇನೆ. ಅದಕ್ಕೆ ಮುಖ್ಯ ಕಾರಣ ನೀನೆ. ಪ್ರತಿ ದಿನ ನಿನ್ನನ್ನು ಭೇಟಿಯಾಗುತ್ತಿದ್ದುದು ಉಪ್ಪಿನಂಗಡಿ ಬಸ್‌ ಸ್ಟ್ತಾಂಡ್‌ನಲ್ಲಿ. ನೀನು ಬರದೇ ಇದ್ದರೆ, ಬರೋವರೆಗೂ ಕಾದು ನಂತರ ನೀನು ಹತ್ತಿದ್ದ ಬಸ್ಸನ್ನೇ ನಾನೂ ಏರುತ್ತಿದ್ದೆ. ನೀನು ಬಸ್‌ನ ಹಿಂಬದಿಯಲ್ಲಿ ವಿಂಡೋ ಸೀಟಲ್ಲಿ ಕೂರುತ್ತಿದೆ. ನಾನು ನಿನ್ನನ್ನು ನೋಡುವುದಕ್ಕೋಸ್ಕರ ಕೊನೆಗೆ ಹತ್ತಿ ಸೀಟು ಇದ್ದರೂ ನಿಂತಿರುತ್ತಿದ್ದೆ! ಕುಂಭಕರ್ಣ ನೀನು. ಬಸ್‌ ಹೊರಟ ತಕ್ಷಣ ನೀನು ನಿದ್ದೆಗೆ ಜಾರುವುದನ್ನು ನೋಡಿ ನಾನು ನಕ್ಕ ದಿನಗಳು ಅದೆಷ್ಟು? ಯಾವಾಗಲೂ ನಿಧಾನವಾಗಿ ಹೋಗುವ ಬಸ್‌ ಎಷ್ಟು ಬೇಗ ಪುತ್ತೂರಿಗೆ ತಲುಪುತ್ತಪ್ಪಾ ಅಂತ ಪ್ರತಿ ದಿನವೂ ಅನ್ನಿಸಿದ್ದಿದೆ. ಹುಚ್ಚಿ ಅಂತ ಅಂದುಕೊಳ್ಳುತ್ತಾ ಇದ್ದೀಯಾ? ಪರವಾಗಿಲ್ಲ ಬಿಡು. ನನ್ನನ್ನು ಆವರಿಸಿದ್ದು ನಿಶ್ಕಲ್ಮಷ ಸ್ನೇಹದ ಹುಚ್ಚು.

ಪ್ರತಿ ದಿನ ನಿನ್ನನ್ನು ಕಂಡಾಗ ಒಳಗೊಳಗೇ ಏನೋ ಒಂದು ರೀತಿಯ ಖುಷಿ ಆಗುತ್ತಿತ್ತು. ಮನಸ್ಸು ಉಲ್ಲಸಿತ ವಾಗಿರುತ್ತಿತ್ತು. ಪ್ರತೀ ದಿನ ನಾನು ಫ್ರೆಷ್‌ ಆಗಿರುತ್ತಿದ್ದೆ. ಕ್ಲಾಸ್‌ನಲ್ಲಿ ಲೆಕ್ಚರ್‌ಗಳು, ಫ್ರೆಂಡ್ಸ್‌ಗಳೆಲ್ಲಾ ಕಿರಿ ಕಿರಿ ಮಾಡಿದರೂ ಬೇಜಾರೇ ಆಗುತ್ತಿರಲಿಲ್ಲ. ಒಂದು ದಿನ ನಿನ್ನನ್ನು ಕಾಣದೇ ಇದ್ದರೆ ನಾನು ಸ್ವಿಚ್‌ ಆಫ್‌. ನಾನು ಮೂಡು ಔಟ್‌ ಅಂತ ಫ್ರೆಂಡ್ಸ್‌ಗೆ ಗೊತ್ತಾಗ್ತಿತ್ತು. ಆದರೆ ಕಾರಣ? ಉಹುಂ ಇಲ್ಲ ಗೊತ್ತಾಗುತ್ತಿರಲಿಲ್ಲ. ಕಾಲೇಜಿನ ಕ್ಯಾಂಟಿನ್‌ನಲ್ಲಿ, ಕಾರಿಡಾರ್‌ನಲ್ಲಿ, ಲೈಬ್ರೆರಿಯಲ್ಲಿ …. ಕಂಡಾಗಲೆಲ್ಲಾ ನಿನ್ನನ್ನು ನಾನು ನೋಡುತ್ತಿದ್ದೆನಾದರೂ, ನೀನು ನನ್ನತ್ತ ದೃಷ್ಟಿ ಹಾಯಿಸುತ್ತಿರಲಿಲ್ಲ ( ನಾನು ಅಷ್ಟೇನು ಸುಂದರವಾಗಿ ಇಲ್ಲದೇ ಇರುವುದು ಕಾರಣ ಆಗಿರಬಹುದು), ನಿನ್ನ ಹತ್ತಿರ ಮಾತಾಡುವುದಕ್ಕೆ ನಾನು ತುಡಿಯುತ್ತಿದ್ದೆ. ಆದರೆ ಮನಸ್ಸು ಯಾಕೋ ಬೇಡ ಅನ್ನುತ್ತಿತ್ತು. ನಿನ್ನ ಸೀರಿಯಸ್‌ನೆಸ್ ನೋಡಿ ಮನಸು ಹೆದರಿತ್ತೋ ಏನೋ? ನನಗೆ ಗೊತ್ತಿಲ್ಲ. ಆದರೆ ಪ್ರಯತ್ನ ಪಟ್ಟಾಗಲೆಲ್ಲಾ, ಮನಸ್ಸು ಹಿಂದೇಟು ಹಾಕುತ್ತಿತ್ತು.

ಆ ಮೂರು ವರ್ಷಗಳಲ್ಲಿ ನಿನ್ನನ್ನು ನೋಡದೇ ಇದ್ದ ದಿನಗಳು ತುಂಬಾ ಕಡಿಮೆ. ಸಮಯಕ್ಕೆ ಎಲ್ಲಿದೆ ತಡೆ? ದಿನಗಳು ಹೇಗೆ ಉರುಳಿದವೋ ಏನೋ. ನಮ್ಮ ಪರೀಕ್ಷೆಗಳು ಬಂತು, ಕೊನೆಗೇ ಕೋರ್ಸ್‌ ಕೂಡ ಮುಗಿಯುತ್ತಾ ಬಂತು. ಆದರೆ ಅಷ್ಟು ಹೊತ್ತಿಗಾಲೇ ಈ ವಿಷಯ ನನ್ನ ಫ್ರೆಂಡ್‌ಗಳಿಗೆ ಗೊತ್ತಾಯಿತು. ನೀನು ಅವನನ್ನು ಪ್ರೀತಿಸುತ್ತಾ ಇದ್ದೀಯಾ ಎಂದು ನಗುವುದಕ್ಕೆ, ಕಾಲೆಳೆಯುವುದಕ್ಕೆ ಆರಂಭಿಸಿದರು. ಆದರೆ, ನಿಜವಾಗಿಯೂ ನನಗೆ ಅಂತಹ ಭಾವನೆ ಇರಲಿಲ್ಲ. ನನ್ನ ವಿಚಿತ್ರ ಸ್ನೇಹ ಭಾವಗಳ ತೊಳಲಾಟಗಳಿಂದಾಗಿ ಅವರಿಗೆ ಹಾಗೆ ಅನಿಸಿದ್ದರಲ್ಲಿ ತಪ್ಪೇನಿಲ್ಲ ಬಿಡು.

ಆ ವೇಳೆಗಾಗಲೇ ನಮ್ಮ ಪದವಿ ಜೀವನ ಮುಗಿದಿತ್ತು. ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಬೇಜಾರು ಇದ್ದರೂ, ಜೀವನದ ಹಲವು ಸತ್ಯಗಳನ್ನು ಒಪ್ಪಿಕೊಳ್ಳಲೇ ಬೇಕಲ್ಲ? ನಾನು ನನ್ನ ಮುಂದಿನ ಜೀವನದ (ಉನ್ನತ ಶಿಕ್ಷಣ, ವೈವಾಹಿಕ ಜೀವನ) ಬಗ್ಗೆ ಯೋಚಿಸಲು ಆರಂಭಿಸಿದೆ. ಮನೆಯಲ್ಲಿ ಅಪ್ಪ ಅಮ್ಮ ಕೂಡ ಅದನ್ನೇ ಮಾಡುತ್ತಿದ್ದರು. ನೀನು ಆಮೇಲೆ ಯೂನಿವರ್ಸಿಟಿ ಸೇರಿದೆ ಅಂತ ಗೊತ್ತಾಯಿತು. ದೂರದಲ್ಲಿ ಇದ್ದುಕೊಂಡು ಒಳ್ಳೆಯ ಸ್ನೇಹಿತೆ/ಸ್ನೇಹಿತ ಏನು ಮಾಡಬಹುದೋ ಅದನ್ನೇ ನಾನು ಮಾಡಿದೆ. ನಿನ್ನ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದೆ.

ಆನಂತರ ನನ್ನ ಸಂಸಾರಿಕ ಜೀವನದ ಗಡಿಬಿಡಿಯಲ್ಲಿ ನಿನ್ನ ಬಗ್ಗೆ ಆಲೋಚನೆ ಮಾಡಲು ಸಾಕಷ್ಟು ಸಮಯವೇ ಸಿಗಲಿಲ್ಲ ನೋಡು. ನನ್ನ ಕಾಲೇಜು ಜೀವನಗಳನ್ನು ಮೆಲುಕು ಹಾಕಿದಾಗಲೆಲ್ಲ ನೀನು, ಉಪ್ಪಿನಂಗಡಿ ಬಸ್‌ ಸ್ಟ್ಯಾಂಡ್, ಬಸ್‌, ಪುತ್ತೂರು, ಕಾಲೇಜು ಕಾರಿಡಾರ್‌, ಕ್ಯಾಂಟೀನ್‌... ಹೀಗೆ ಹಲವು ವಿಷಯಗಳು ಸ್ಮೃತಿ ಪಟಲದಲ್ಲಿ ಹಾದುಹೋಗಿ ಮನಸ್ಸಿಗೆ ಹಿತ ಅನ್ನಿಸುತ್ತಿತ್ತು.

ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಗೊತ್ತಾ? ಮೊನ್ನೆ ನಿನ್ನನ್ನು ಆಕಸ್ಮಾತ್‌ ಆಗಿ ಎಂ.ಜಿ ರೋ‌ಡ್‌ನಲ್ಲಿ ಕಂಡೆ. ದೂರದಿಂದಲೇ ನಿನ್ನನ್ನು ಗುರುತಿಸಿದೆ. ಸ್ವಲ್ಪ ದಪ್ಪ (!) ಆಗಿದ್ದೀಯಾ ಎನ್ನುವುದನ್ನು ಬಿಟ್ಟರೆ ನಿನ್ನಲ್ಲಿ ಬದಲಾವಣೆ ಏನೂ ಆಗಿಲ್ಲ. ಅದೇ ಗಂಭೀರತೆ, ಅದೇ ನಗು, ತೀಕ್ಷ್ಣ ನೋಟ ಎಲ್ಲವೂ ಅದೇ. ನಿನ್ನ ಜೊತೆ ನಾಲ್ಕಾರು ಮಂದಿ ಮಾತನಾಡುತ್ತಿದ್ದರು. ಪ್ರತಿಷ್ಠಿತ ಸಂಸ್ಥೆಯ ಬ್ಯುಲ್ಡಿಂಗ್‌ನಿಂದ ನೀನು ಹೊರ ಬರುತ್ತಿದೆ. ನೀನು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀಯಾ ಎಂಬುದನ್ನು ಕೊರಳಲ್ಲಿ ಇದ್ದ ಐಡಿ ಕಾರ್ಡ್‌ ಹೇಳುತ್ತಿತ್ತು. ದಡ್ಡಿ ನಾನು. ಎದುರಲ್ಲಿ ಇದ್ದರೂ ನಿನ್ನನ್ನು ಮಾತಾಡಿಸಲು ಯತ್ನಿಸಲಿಲ್ಲ. ಈ ಬಾರಿ ಯಾಕೋ ನನಗೆ ಮಾತಾನಾಡುವುದು ಬೇಡ ಅನ್ನಿಸಿತು. ಆ ಕ್ಷಣ ನನಗೆ ಎಷ್ಟು ಸಂತಸವಾಯಿತು ಗೊತ್ತಾ? ಉಪ್ಪಿನಂಗಡಿಯಲ್ಲಿ ಮೊದಲ ಬಾರಿ ಕಂಡಾಗ ಆದ ಸಂತಸಕ್ಕಿಂತಲೂ ಹೆಚ್ಚು ಖುಷಿ ಆಯಿತು. ನನ್ನ ಹಾರೈಕೆ ವ್ಯರ್ಥವಾಗದೇ ಇದ್ದುದಕ್ಕೆ ದೇವರಿಗೆ ಮನಸ್ಸಲ್ಲೇ ನಮಸ್ಕರಿಸಿದೆ. Once again I was very happy.
ಎಷ್ಟು ಬರೆದಿದ್ದಾಳಪ್ಪಾ ಇವಳು ಅಂತ ಯೋಚಿಸಿಸುತ್ತಾ ಇದ್ದೀಯಾ? ಆರ್ಟ್ಸ್‌ ಸ್ಟ್ಯೂಡೆಂಟ್‌ ನೋಡು. ಎಲ್ಲನೂ ಪ್ರಬಂಧದ ರೀತಿಯಲ್ಲಿ ಬರೆದೇ ಗೊತ್ತು. ಕ್ಷಮಿಸು. ನಿನ್ನ ತಾಳ್ಮೆಯನ್ನು ಪರೀಕ್ಷಿಸುವುದಿಲ್ಲ. ಒಂದೇ ಗೇರೆ. ಗೆಳತಿಯಾಗಿ ನಿನ್ನ ಉತ್ತಮ ಭವಿಷ್ಯಕ್ಕಾಗಿ ಪ್ರತಿ ದಿನವೂ ಹಾರೈಸುತ್ತೇನೆ. ಎಂದೆಂದಿಗೂ ನಗು ನಗುತಾ ಇರು.

ಇಂತಿ ನಿನ್ನ...

~~~

ಇನ್ನೇನು ಹೆಸರು ಓದಬೇಕು ಎನ್ನುವಷ್ಟರಲ್ಲಿ, ಮತ್ತೆ ಟಕ್‌.. ಟಕ್‌.. ಅಂತ ಬಾಗಿಲು ಬಡಿದ ಸದ್ದು... ಯಾರಪ್ಪಾ ಅಂತ ಎದ್ದು ಕಣ್ಣು ಬಿಡುತ್ತೇನೆ. ನಾನಿನ್ನು ಹಾಸಿಗೆಯಲ್ಲಿ! ಬೆಳಿಗ್ಗೆ ಆರು ಗಂಟೆ. ‘ಸಾರ್‌ ಪೇಪರ್‌’ ಅಂತ ಹುಡುಗ ಕಿಟಕಿ ಮೂಲಕ ಪೇಪರ್‌ ತೂರಿ ಬಿಟ್ಟ. ಅಂದು ಭಾನುವಾರ. ಏಳುವಾಗ ಸ್ವಲ್ವ ತಡ ಆಗಿತ್ತು. ಅಂತೂ ಕನಸಿನಲ್ಲಿ ಆತ್ಮೀಯತೆಯ ಸ್ಪರ್ಶ ಹೊಂದಿರುವ ಪತ್ರವೊಂದನ್ನು ಓದಿದ ಖುಷಿಯಲ್ಲಿ ಪೇಪರ್‌ ಮೇಲೆ ಕಣ್ಣಾಡಿಸಿದೆ, ಸುದ್ದಿ ಓದಿದ ಬಳಿಕ ಪುರವಣಿ ಓದುವ ರೂಢಿ ನನ್ನದು. ಭಾನುವಾರ ಆದ್ದರಿಂದ ಸಾಪ್ತಾಹಿಕ ಪುರವಣಿ. ಅದರಲ್ಲಿ ವಾರ ಭವಿಷ್ಯ ಇರುತ್ತದೆ. ಎಂದಿನಂತೆ ಅಂದು ನನ್ನ ರಾಶಿಯ ಮೇಲೆ ಕಣ್ಣಾಡಿಸಿದೆ.
ಅದರಲ್ಲಿ ಹೀಗೆ ಬರೆದಿತ್ತು: ಆತ್ಮೀಯರೊಬ್ಬರ ಪತ್ರ ಈ ವಾರ ನಿಮ್ಮ ಕೈ ಸೇರಲಿದೆ!

ಕೊನೆ ಮಾತು: ಮುಂಜಾನೆಯಲ್ಲಿ ಕಂಡ ಕನಸು ನಿಜವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಉಹ್ಞುಂ, ನನಗೆ ಗೊತ್ತಿಲ್ಲ.

3 ಕಾಮೆಂಟ್‌ಗಳು:

jomon varghese ಹೇಳಿದರು...

chennagide. kathe nijavagali emba harike

ಓದೇಶ ಹೇಳಿದರು...

ರಿಲಿ ಇಂಟರೆಸ್ಟಿಂಗ್ ಲೆಟರ್ ಸರ್...

Gavi ಹೇಳಿದರು...

AS JOMAN TOLD I TOO PRAY YOUR DREAM COME TRUE...