ಶುಕ್ರವಾರ, ನವೆಂಬರ್ 4, 2011

ಸ್ನೇಹಿತನಿಗೊಂದು ಪತ್ರ

ಪ್ರಿಯ ಸ್ನೇಹಿತ,

ನಿನ್ನ ಹುಟ್ಟುಹಬ್ಬ, ಜೊತೆಗೆ ಸ್ನೇಹಿತರ ದಿನಾಚರಣೆಯೂ ಕಳೆಯಿತು. ಕ್ಷಮಿಸು.. ನಿನಗೆ ಶುಭಾಶಯ ತಿಳಿಸಲು ಸಾಧ್ಯವಾಗಲಿಲ್ಲ.

ಬೇಜಾರುಪಟ್ಟುಕೊಂಡೆಯಾ ಹೇಗೆ? ಖಂಡಿತಾ ನಿನಗೆ ಬೇಸರವಾಗಿರಲಿಕ್ಕಿಲ್ಲ. ಅದಕ್ಕೆ ನಿನಗೆ ಸಮಯವೆಲ್ಲಿದೆ? ಉದ್ಯೋಗ, ಸಂಬಳ, ಅಂತಸ್ತು, ಮನೆ, ಕಾರು.. ಹೀಗೆ ನಿನ್ನ ತಲೆಯಲ್ಲಿ ಹಲವು ಯೋಚನೆಗಳೇ ತುಂಬಿರುವಾಗ ಹುಟ್ಟಿದ ದಿನ, ಗೆಳೆಯರ ದಿನ, ಸ್ನೇಹಿತರು ಹೋಗಲಿ ಕೊನೆಗೆ ಆತ್ಮೀಯ ಗೆಳತಿಯಾದ ನನ್ನ ಬಗ್ಗೆ ಯೋಚಿಸಲು ಆ ತಲೆಯಲ್ಲಿ ಜಾಗವೆಲ್ಲಿದೆ?

ಯಾಕೆ ನೀನು ಹೀಗಾದೆ ಎಂದು ಅರ್ಥವಾಗುತ್ತಿಲ್ಲ. ಕಾಲೇಜಿನಲ್ಲಿ ನನ್ನ ಜೀವದ ಗೆಳೆಯನಾಗಿದ್ದವನು ಇವನೇನಾ ಎಂಬ ಪ್ರಶ್ನೆ ಮನಸ್ಸಲ್ಲಿ ಮೂಡುವಷ್ಟರ ಮಟ್ಟಿಗೆ ನೀನು ಬದಲಾಗಿದ್ದಿ. ಇದರ ಹಿಂದಿನ ಕಾರಣ ನಿಗೂಢ. ಹಾಗಾದರೆ ನೀನು ಕಾಲೇಜಿನಲ್ಲಿ ಆಡಿದ್ದೆಲ್ಲಾ ನಾಟಕವೇ? ನನಗಂತು ತಿಳಿಯುತ್ತಿಲ್ಲ.

ಇಷ್ಟು ಕಡಿಮೆ ಅವಧಿಯಲ್ಲಿ ಮನುಷ್ಯನ ವರ್ತನೆಯಲ್ಲಿ ಇಷ್ಟೊಂದು ಬದಲಾವಣೆಯೇ? ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ನಂಬಲೇ ಬೇಕಾಗಿದೆ. ನನಗೆ ಇನ್ನೂ ನೆನಪಿದೆ. ನಾವಿಬ್ಬರೂ ಕಾಲೇಜಿನಲ್ಲಿ ಭೇಟಿಯಾದ ದಿನ. ಕಾಲೇಜಿಗೆ ನಾನು ಹೊಸಬಳು, ನೀನು ಕೂಡ. ನೀನು ಹಳಬ ಅಂತ ತಿಳಿದು ತರಗತಿಯ ಬಗ್ಗೆ ನಿನ್ನಲ್ಲಿ ವಿಚಾರಿಸಿದೆ. ಅದು ನಮ್ಮ ನಡುವೆ ನಡೆದ ಮೊದಲ ಭೇಟಿ ಮತ್ತು ಸಂಭಾಷಣೆ.

`ನಾನು ಕೂಡ ಈಗಷ್ಟೆ ಕಾಲೇಜಿಗೆ ಸೇರಿದ್ದೇನೆ. ನನಗೂ ಗೊತ್ತಿಲ್ಲ. ನಡೀರಿ.. ಜೊತೆಗೆ ತರಗತಿ ಹುಡುಕೋಣ` ಅಂತ ನೀನು ಹೇಳಿದ್ದೆ. ನಮ್ಮಿಬ್ಬರ ನಡುವೆ ಸ್ನೇಹ ಚಿಗುರಿದ್ದು ಆಗಲೇ. ಇಡೀ ವಿದ್ಯಾರ್ಥಿಗಳ ಸಮೂಹ ನಮ್ಮ ಸ್ನೇಹವನ್ನು ಗುರುತಿಸಿತ್ತು.

ಕೆಲವು ವಿದ್ಯಾರ್ಥಿಗಳು ನಮ್ಮ ಸ್ನೇಹವನ್ನು ಅಪಾರ್ಥ ಮಾಡಿಕೊಂಡು, ಅಪಪ್ರಚಾರ ಮಾಡಿದರೂ ನಾವೇನು ತಲೆಕೆಡಿಸಿಕೊಂಡಿರಲಿಲ್ಲ. ಸತ್ಯ ಹೇಳಬೇಕೆಂದರೆ ನಮ್ಮ ನಡುವೆ ನಿಷ್ಕಲ್ಮಶ ಸ್ನೇಹ ಹೊರತಾಗಿ ಬೇರೇನೂ ಇರಲಿಲ್ಲ. ಅದನ್ನು ನಾವು ಹಲವು ಬಾರಿ ಮಾತನಾಡಿಕೊಂಡಿದ್ದೇವೆ ಕೂಡ.

ಅಲ್ಲಿಂದ ಮೂರು ವರ್ಷಗಳ ಕಾಲ ಜೊತೆಯಾಗಿ ಆತ್ಮೀಯವಾಗಿ ಕಾಲ ಕಳೆದಿದ್ದೆವು. ಆಗ ಈಗಿನಂತೆ ಮೊಬೈಲ್, ಎಸ್‌ಎಂಎಸ್,ಫೇಸ್‌ಬುಕ್, ಆರ್ಕುಟ್ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ಆದರೂ ನಮ್ಮ ಗೆಳೆತನ ಮುಂದುವರಿದೇ ಇತ್ತು. ಆದರೆ, ಕಾಲೇಜು ಮುಗಿಯುವ ದಿನಗಳಲ್ಲಿ ನಿನಗೇನಾಯಿತೋ ತಿಳಿಯದು. ನನ್ನಿಂದ ದೂರವಾಗುತ್ತಾ ಹೋದೆ. ಯಾವತ್ತೂ ಮನಸ್ಸು ಬಿಚ್ಚಿ ನಗುತ್ತಿದ್ದವನು ಕೃತಕವಾಗಿ ನಗಲು ಆರಂಭಿಸಿದೆ. ನಿನ್ನ ಹತ್ತಿರ ಬರುವಾಗಲೆಲ್ಲಾ ಅಂತರ ಕಾಪಾಡುತ್ತಾ ಬಂದೆ.

ಒಂದು ದಿನ, ನಿನ್ನನ್ನು ತಡೆದು ಯಾಕೆ ಈ ರೀತಿ ವರ್ತಿಸುತ್ತಿದ್ದೀಯಾ ಅಂತ ಕೇಳಿದಾಗ ಏನೇನೋ ಕಾರಣಗಳನ್ನು ಹೇಳಿ ತಪ್ಪಿಸಿಕೊಂಡೆ. ನಿನ್ನ ವರ್ತನೆಗೆ ಕಾರಣಗಳೇನಿರಬಹುದು ಎಂದು ನಾನೇ ಚಿಂತಿಸತೊಡಗಿದೆ. ಇನ್ನು ಮುಂದೆ ನಾವು ದೂರವಾಗುತ್ತಿವಲ್ಲಾ ಎಂಬ ಬೇಜಾರು ಕಾರಣವಿರಬಹುದು ಎಂದುಕೊಂಡೆ.
ಅದಾಗಿದ್ದರೆ ನೀನೇ ಹೇಳುತ್ತಿದ್ದೆಯಲ್ಲಾ ಎಂದೂ ಯೋಚಿಸಿದೆ.

ಕಾಲೇಜಿನಲ್ಲಿ ಕೊನೆಯ ದಿನ ಆ ದಿನ ನೀನು ಪರವಾಗಿಲ್ಲ ಅನ್ನುವಷ್ಟು ಮಾತನಾಡಿದೆ. ನಿನ್ನ ಮಹತ್ವಾಕಾಂಕ್ಷೆಗಳನ್ನೆಲ್ಲಾ ಬಿಚ್ಚಿಟ್ಟೆ. ಆದರೆ, ನನ್ನ ಜೊತೆ ಆತ್ಮೀಯವಾಗಿ ಮಾತನಾಡಲು, ನಿನ್ನ ವರ್ತನೆಯ ಕಾರಣಗಳನ್ನು ಹೇಳಲು ಮರೆತೆ. ಅಂದಿನಿಂದ ಇಂದಿನವರೆಗೂ ನಮ್ಮಿಬ್ಬರ ನಡುವೆ ಭೇಟಿ ನಡೆದೇ ಇಲ್ಲ ನೋಡು.

ನಮ್ಮ ಸಹಪಾಠಿಗಳೆಲ್ಲಾ ಸಿಕ್ಕಾಗ ನಿನ್ನ ಬಗ್ಗೆಯೇ ವಿಚಾರಿಸುತ್ತಾರೆ. ನೀನು ಎಲ್ಲಿದ್ದೀಯಾ ಎಂಬುದೇ ನನಗೆ ತಿಳಿದಿಲ್ಲ. ಇನ್ನು ಅವರಿಗೆ ಏನೂ ಅಂತ ಹೇಳುವುದು. ಗೊತ್ತಿಲ್ಲ ಎನ್ನುವುದೇ ಉತ್ತರ. ಈಗ ನೋಡು, ಪ್ರತಿದಿನ ಫೇಸ್‌ಬುಕ್, ಟ್ವಿಟರ್, ಆರ್ಕುಟ್‌ನಲ್ಲೆಲ್ಲಾ ನಿನ್ನ ಹೆಸರು ಬರೆದು ಹುಡುಕಾಡುತ್ತಿದ್ದೇನೆ. ನಿನ್ನ ಹೆಸರಿನ ಹಲವು ಜನರು ಇದ್ದರಾದರೂ ನೀನಿಲ್ಲ.

ನೀನೇನೋ ನನ್ನನ್ನು ಮರೆತಿರಬಹುದು. ಆದರೆ ನನ್ನಿಂದ ಅದು ಸಾಧ್ಯವಿಲ್ಲ. ಸ್ನೇಹವನ್ನು, ಅದರ ಮಧುರ ನೆನಪನ್ನು ಮರೆಯಲು ನನ್ನಿಂದಾಗದು.

ಹೋಗಲಿ ಬಿಡು, ನೀನು ಎಲ್ಲೇ, ಹೇಗೆಯೇ ಇರು, ಸಂತೋಷ ಎಂದಿಗೂ ನಿನ್ನ ಜೊತೆಯಿರಲಿ ಎಂಬುದೇ ಈ ಸ್ನೇಹಿತೆಯ ಹಾರೈಕೆ...
-ವಸೂ

ಕೃಪೆ: ಪ್ರಜಾವಾಣಿ

ಕಾಮೆಂಟ್‌ಗಳಿಲ್ಲ: