ಮಂಗಳವಾರ, ಮೇ 5, 2009

ಮರೆಯಲಾಗದ ಪ್ರಾಣೇಶರ ಹಾಸ್ಯಮಯೂರಿಯ ಸ್ಪರ್ಶ ಸುಖ

ಲುಮುಖ, ಕನ್ನಡಕ, ಖಾದಿ ಜುಬ್ಬ, ಮೇಲೊಂದು ಕೋಟು. ಮುಖದಲ್ಲೇ ಹಾಸ್ಯಕಳೆ, ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಆಡು ಭಾಷೆಯಲ್ಲಿ ಮಾತನಾಡಲು ಆರಂಭಿಸಿದರೆಂದರೆ ನಗುವಿನ ಹೊಳೆ ಹರಿಯುವುದು ನಿಸ್ಸಂಶಯ. ಹೆಸರು- ಬೇವಿನಹಾಳ್ ಪ್ರಾಣೇಶ್, ಊರು-ಗಂಗಾವತಿ, ವಿದ್ಯಾಭ್ಯಾಸ- ಬಿ.ಕಾಂ, ಉದ್ಯೋಗ-ಎಲ್ಲರನ್ನು ನಗಿಸುವುದು! (ವಾಸ್ತವದಲ್ಲಿ ಅವರೊಂದು ಸಣ್ಣ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಾರಂತೆ), ಜತೆಗೆ ಹವ್ಯಾಸಕ್ಕಾಗಿ ಕೊಳಲು, ತಬಲಾವನ್ನೂ ನುಡಿಸುತ್ತಾರೆ. ಬೇವಿನಹಾಳ್ ಪ್ರಾಣೇಶ್ ಅಂತ ಕರೆದರೆ ಹಲವು ಮಂದಿಗೆ ಅರ್ಥವಾಗಲಿಕ್ಕಿಲ್ಲವೇನೋ.. ಎಲ್ಲರೂ ಇವರನ್ನ ಕರೆಯುವುದು ಬಿ.ಪ್ರಾಣೇಶ್ ಅಂತ. ಆಧುನಿಕ ಬೀಚೀ, ಅಭಿನವ ಬೀಚೀ, ಗಂಗಾವತಿ ಬೀಚೀ ಅನ್ನುವ ಅಡ್ಡ ಹೆಸರುಗಳಿವೆ. ಹಾಸ್ಯೋತ್ಸವ, ಹಾಸ್ಯಸಂಜೆಗಳಲ್ಲಿ ಭಾಗವಹಿಸಿ, ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡುವುದು ಈಗ ಇವರ ವೃತ್ತಿಯಾಗಿ ಹೋಗಿದೆ. ರಾಜ್ಯಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿರುವ ಕನ್ನಡ ಸಂಘಗಳು ಆಯೋಜಿಸುವ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಇದುವರೆಗೂ ಸುಮಾರು ೮೦೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಅವರಿಗಿದೆ.

ಇತ್ತೀಚೆಗೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಅಣ್ಣಹಾಸ್ಯ ಮಯೂರಿಎಂಬ ಸಿ.ಡಿಯೊಂದನ್ನು ತಂದಿದ್ದ. ಸ್ಕಾರ್ಪಿಯೋ ವಾಹನದಲ್ಲಿ ಹೋಗಿದ್ದರಿಂದ ಬರುವಾಗ ಸಿಡಿಯನ್ನು ವಾಹನದಲ್ಲಿರುವ ಟಿ.ವಿ ಯಲ್ಲಿ ನೋಡಬಹುದೆಂಬ ಉದ್ದೇಶ ಅವನದು. (ಅವನೊಬ್ಬನೇ ವಾಹನ ಚಾಲನೆ ಮಾಡಬೇಕಾಗಿದ್ದರಿಂದ ಬೆಂಗಳೂರು ತಲುಪುವವರೆಗೆ ನಾವೆಲ್ಲಾ ಎಚ್ಚರದಿಂದ ಇರಲಿ ಎಂಬ ಆಲೋಚನೆಯೂ ಅವನಲ್ಲಿತ್ತು.) ಸಿಡಿ ಕವರ್ನಲ್ಲಿ ಪ್ರಾಣೇಶರ ಭಾವಚಿತ್ರ ಇದ್ದಿದ್ದರಿಂದ ಸ್ವಲ್ಪ ಮಟ್ಟಿನ ಕುತೂಹಲ ನನ್ನಲ್ಲಿತ್ತು. ಮೊದಲೇ ಅವರ ಹಲವಾರು ಕಾರ್ಯಕ್ರಮಗಳನ್ನು ನಾನು ಟಿ.ವಿಯಲ್ಲಿ ವೀಕ್ಷಿಸಿದ್ದೆ. ಪ್ರತಿ ಕಾರ್ಯಕ್ರಮದಲ್ಲಿ ಅವರು ಹೇಳಿದ ಜೋಕುಗಳನ್ನೇ ಮತ್ತೆ ಮತ್ತೆ ಹೇಳಿದರೂ, ಅಥವಾ ಘಟನೆಗಳನ್ನು ಉದಾಹರಿಸಿದರೂ ಅದು ನನಗೆ ಮತ್ತೆ ಮತ್ತೆ ನಗು ತರಿಸುತ್ತಿತ್ತೇ ವಿನಾಃ ಬೇಜಾರು ಹುಟ್ಟಿಸುತ್ತಿರಲಿಲ್ಲವಾದ್ದರಿಂದ ಸಿಡಿ ಒಳಗೆ ಏನಿರಬಹುದು ಎಂಬ ಕುತೂಹಲ ನನ್ನಲ್ಲಿತ್ತು. ಮನೆಯಿಂದ ಹೊರಟ ಕೂಡಲೇ ಮೊದಲು ನಾನು ಅಣ್ಣನಿಗೆ ನೀಡಿದ ಸಲಹೆ ಒಂದೇ ಸಿಡಿನ ಪ್ಲೇ ಮಾಡು’.ಸಿಡಿ ಪ್ಲೇ ಆಯಿತಾದರೂ ನಮ್ಮ ರಾಷ್ಟ್ರೀಯ ಹೆದ್ದಾರಿ ೪೮ರ ಗುಣಮಟ್ಟ ಅತ್ಯುತ್ತಮವಾಗಿದ್ದರಿಂದ (?!!!) ಸಿಡಿಯನ್ನು ಸರಿಯಾಗಿ ವೀಕ್ಷಿಸಲಾಗಲಿಲ್ಲ. ಹೆದ್ದಾರಿ ಪ್ರಾಧಿಕಾರ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನೂ ಎಲ್ಲರೂ ಹೊಗಳಿದ್ದೇ ಹೊಗಳಿದ್ದು!. ಸಿಡಿ ಕುರಿತಾದ ಚರ್ಚೆ, ಮಾತುಕತೆಯಿಂದ ಯಾರಿಗೂ ನಿದ್ದೆ ಬರದಿದ್ದರಿಂದ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದೂ ಆಯಿತು.

ಮರುದಿನ ಬೆಳಗ್ಗೆ ಎದ್ದಕೂಡಲೇ ನಾನು ಕುಳಿತಿದ್ದು ಟಿ.ವಿ. ಹತ್ತಿರ, ಪ್ರಾಣೇಶರ ಹಾಸ್ಯಮಯೂರಿಯ ಆಲಿಂಗನದ ಸುಖ ಸವಿಯಲು.....


ಮಾತೆಯರು ಎಲ್ಲಿರುತ್ತಾರೋ ಅಲ್ಲಿ ಬರೀ ಮಾತೇ... ಎನ್ನುವ ಮೂಲಕ ತಮ್ಮ ಮಾತನ್ನು ಪ್ರಾರಂಭಿಸುವ ಪ್ರಾಣೇಶ್ ನಮಗೆ ಇಷ್ಟ ಆಗುವುದು ಅವರ ವಿನಯತೆಯಿಂದ.. ತಮ್ಮನ್ನು ಆಧುನಿಕ ಬೀಚೀ, ಅಭಿನವ ಬೀಚೀ, ಅಥವಾ ಗಂಗಾವತಿ ಬೀಚೀ ಎಂದು ದಯವಿಟ್ಟು ಸಂಭೋದಿಸಬೇಡಿ ಎಂದು ನಯವಾಗಿ ಹೇಳುತ್ತಾರೆ. ನನ್ನನ್ನು ಬೀಚೀ ಅವರ ಸಾಹಿತ್ಯದ ಪ್ರಚಾರಕ ಅಂತ ಕರೆದರೆ ಸಾಕು ಎನ್ನುವುದು ಅವರು ಪ್ರೇಕ್ಷಕರಲ್ಲಿ ಮಾಡುವ ಮನವಿ.

ಸಿಡಿಯಲ್ಲಿ ಅವರು ಹೇಳಿರುವ ಕೆಲವು ವಿಚಾರಗಳು ನನಗೆ ಖುಷಿ ಕೊಟ್ಟಿವೆ....ಅದರಲ್ಲಿ ಕೆಲವು ಇಲ್ಲಿ ಬರೆದಿದ್ದೇನೆ.ಚುಟುಕು ಸಾಹಿತ್ಯವೂ ಕೂಡ ಸಮಾಜದ ಓರೆ ಕೋರೆ ತಿದ್ದುವಲ್ಲಿ ಪರಿಣಾಮಕಾರಿಯಾಗಬಲ್ಲುದು ಎಂಬುದನ್ನ ಕನ್ನಡದ ಹಲವಾರು ಚುಟುಕು ಸಾಹಿತಿಗಳು ರಚಿಸಿರುವ ಸಾಹಿತ್ಯವನ್ನು ಉದಾಹರಿಸುತ್ತಾರೆ ಪ್ರಾಣೇಶ್.
ತಾತಾ

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟೊದ್ದು ಗಾಂಧಿ ತಾತಾ

ಆದ್ದರಿಂದ ಸ್ವತಂತ್ರ ಭಾರತದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ

ಕೈ ನೀಡಿ ಕೇಳುತ್ತಾರೆ ತಾ...ತಾ.....ತಾ...!


ಆದರ್ಶ

ಗಾಂಧೀಜಿ ಪ್ರತಿಮೆಯನ್ನು ನಗರಗಳಲ್ಲಿರುವ ವೃತ್ತ, ಜಂಕ್ಷನ್ಗಳಲ್ಲಿನಿಲ್ಲಿಸಲಾಗಿದೆ

ಯಾಕೆಂದರೆ ಅವರ ಆದರ್ಶ ಪಾಲನೆಯನ್ನೂ ನಿಲ್ಲಿಸಲಾಗಿದೆ!


ಸೇಬು-ಸೀತಾಫಲ


ನನ್ನವಳ ಕೆನ್ನೆ ಸೇಬು..


ಮೊಡವೆಗಳಾದ್ದರಿಂದ ಸೀತಾಫಲ!


ಇನ್ನೂ ಹೆಚ್ಚು ಮೊಡವೆಗಳಿದ್ದರೆ?


.....ಹಲಸಿನ ಹಣ್ಣು!!! (ಕೊನೆಯ ವಾಕ್ಯ ರಚಿಸಿದ್ದು ನಾನು)


ಶಬ್ದ ದಾರಿದ್ರ್ಯದ ಕುರಿತು ಮಾತನಾಡುವಾಗ ಪ್ರಾಣೇಶ್ಕಾರ ಮತ್ತುಕಾರದ ಕುರಿತು ಮಾತನಾಡುತ್ತಾರೆ.ಇದಕ್ಕೆ ಅವರು ನೀಡುವ ಉದಾಹರಣೆ ಟಿವಿ ನಿರೂಪಕಿಯೊಬ್ಬಳದು..ಯುಗಾದಿ ಹಬ್ಬದಂದು ವಿಶೇಷ ಕಾರ್ಯಕ್ರಮದ ನಿರೂಪಕಿ ಹೇಳುವುದು ಹೀಗೆ...
ಅಲೋ......ಹಿಂದು ಹುಗಾದಿ ಅಬ್ಬ. ಅಬ್ಬ ಬಂತೆಂದರೆ, ಎಣ್ಣುಮಕ್ಕಳಿಗೆ ಇಗ್ಗೋ ಇಗ್ಗೋ...


ಭಾರತೀಯ ಎಣ್ಣುಮಕ್ಕಳು ಹಾದರ, ಹಾತಿಥ್ಯಕ್ಕೆ ಎಸರುವಾಸಿ!


(ಎಲ್ಲಿಕಾರ ಬೇಕೋ ಅಲ್ಲಿ ಅದನ್ನು ಬಳಸಿಲ್ಲ. ಎಲ್ಲಿಕಾರ ಬೇಡವೋ ಅಲ್ಲಿ ಬಳಸಿದ್ದಾಳೆ.)
ಟಿ.ವಿಯಿಂದಾಗಿ ಮಕ್ಕಳಲ್ಲಿ ಕ್ರಿಯಾತ್ಮಕತೆ ಕಡಿಮೆಯಾಗುತ್ತಿದೆ ಎಂಬುದು ಪ್ರಾಣೇಶರ ಅಳಲು. ಅದಕ್ಕೊಂದು ಅವರು ಉದಾಹರಣೆ ಕೊಡುತ್ತಾರೆ.


ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ನೀಡಿದ ಪ್ರಶ್ನೆ. ಭೀಮನು ದುರ್ಯೋದನನನ್ನು ಹೇಗೆ ಕೊಂದನು? ಎರಡು ಪುಟಕ್ಕೆ ಮೀರದಂತೆ ಉತ್ತರಿಸಿ ಎಂಬ ಪ್ರಶ್ನೆಗೆ..ವಿದ್ಯಾರ್ಥಿಯ ಉತ್ತರ ಹೀಗಿದೆ.


ಭೀಮನು ದುರ್ಯೋಧನನನ್ನು ಗುದ್ದಿ, ಗುದ್ದಿ, ಗುದ್ದಿ.. ಹೀಗೆ ಎರಡು ಪುಟ ಬರೆದು ನಂತರ ಕೊನೆಗೆ ಗುದ್ದಿ ಗುದ್ದಿ ಕೊಂದನು.!


ವಯಸ್ಕ ಹೆಂಗಸರ ಮೇಲೆ ಪ್ರಾಣೇಶರಿಗೆ ಗೌರವ ಜಾಸ್ತಿಯಂತೆ.. ಅದಕ್ಕೆ ಕಾರಣ ಅವರ ಜೀವನಾನುಭವ.
ಹುಡುಗಿಯರು ಹಸಿದ್ರಾಕ್ಷಿ


ಗೃಹಿಣಿಯರು ಒಣದ್ರಾಕ್ಷಿ


ಹಾಗಾದರೆ ಮುದುಕಿಯರು?


........................... ರುದ್ರಾಕ್ಷಿ!!!


ಎಂದು ಹೇಳಿ ಪ್ರಾಣೇಶ್ ತಮ್ಮ ಹಾಸ್ಯ ಲಹರಿಗೆ ಮಂಗಳ ಹಾಡುತ್ತಾರೆ. ಇಲ್ಲಿ ಕೆಲವನ್ನು ಮಾತ್ರ ನಾನು ಬರೆದಿದ್ದೇನೆ. ಇನ್ನೂ ಹಲವಾರು ವಿಚಾರಗಳನ್ನು ಪ್ರಾಣೇಶ್ ಹೇಳಿದ್ದಾರೆ. ಒಂದು ಗಂಟೆ ಅವಧಿಯ ಹಾಸ್ಯಮಯೂರಿ ಪ್ರತಿಯೊಬ್ಬರ ಮನದಲ್ಲಿ ನಗುವಿನ ನೃತ್ಯ ಮಾಡಿಸುವುದರಲ್ಲಿ ಅನುಮಾನವಿಲ್ಲ. ಅದರಲ್ಲಿ ಬರುವ ಹಲವು ದೃಷ್ಟಾಂತಗಳನ್ನು ಪ್ರಾಣೇಶ್ ಅವರು ಹಿಂದೆ ಹಲವಾರು ಬಾರಿ ಹೇಳಿದ್ದಾರೆ. ಇಲ್ಲಿ ಮತ್ತೆ ಪನರಾವರ್ತಿಸಿದ್ದಾರೆ. ಅದರೂ ಅವು ಬೇಜಾರು ತರಿಸುವುದಿಲ್ಲ. ಕಾರಣ ಅವರು ಆಡುವ ಭಾಷೆ. ಉತ್ತರ ಕರ್ನಾಟಕದ ಭಾಷೆಗೆ ಶಕ್ತಿ ಇದೆ.


ಎಲ್ಲಿಯಾದರೂ ಸಿಡಿ ನಿಮಗೆ ಕಂಡರೆ ಹಾಗೆ ಸುಮ್ಮನೆ ಕಣ್ಣಾಡಿಸಿ, ಹಾಸ್ಯಮಯೂರಿಗೆ ನೀವು ಶರಣಾಗದಿದ್ದರೆ ಅಥವಾ ಅದರ ಸ್ಪರ್ಶ ನಿಮಗೆ ಹಿತಕರವಾಗದಿದ್ದರೆ ಹೇಳಿ.


ವಜ್ರಾಂಗಿ ಸೂರ್ಯ


(ಚಿತ್ರ ಕೃಪೆ: ಅಂತರ್ಜಾಲ-ಗೂಗಲ್ ನೆಟ್ವರ್ಕ್)

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

not a bad article...

ಒಪ್ಪಣ್ಣ, ಹೇಳಿದರು...

ಹ್ಮ್, ನಾನೂ ಅವರ ಕಾರ್ಯಕ್ರಮಗಳನ್ನು ನೋಡಿದ್ದೇನೆ / ಕೇಳಿದ್ದೇನೆ. ಪ್ರತಿಭಾವಂತ ನಗೆಗಾರ. ಟಿಪ್ಪಣಿ ಸೂಕ್ಷ್ಮವಾಗಿ ಚೆನ್ನಾಗಿತ್ತು. ನಗೆಗಾರನ ಸ್ವಂತಿಕೆಯನ್ನು ಉಳಿಸಿಕೊಂಡ, ಲೇಖಕರ ನುಡಿಗಳನ್ನು ಬಳಸಿಕೊಂಡ ಬರವಣಿಗೆ ಚೆನ್ನಾಗಿದೆ.

"KRISHNAARPANA" ಹೇಳಿದರು...

lekhana chennagide.........adre allalliruva akshara doshagala kadege gamana irali.........

Unknown ಹೇಳಿದರು...

ನಮ್ಮ ಹರಿ ನಾರಾಯಣ ಮಾಡಾವು ಮಾಸ್ತರು ಹೇಳಿದ ಹಾಸ್ಯ "ಭೀಮ - ದುರ್ಯೋಧನ" ನೆನಪಾಯಿತು.