ಭಾನುವಾರ, ಜೂನ್ 21, 2009

ಬಿಎಂಟಿಸಿ ಕುರಿತು ಒಂದಿಷ್ಟು....

ವಾರ್ಷಿಕೋತ್ಸವದ ಸಂಭ್ರಮ....
ರಾಜ್ಯದ ರಾಜಧಾನಿ.... ಅದೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ನಾನು ವಲಸೆ (!?) ಬಂದು ಒಂದು ವರ್ಷವಾಯ್ತು. ಮನೆಯವರು, ಸಂಬಂಧಿಕರು, ಗೆಳೆಯರೆಲ್ಲಾ ಸಿಕ್ಕಾಗ ಕೇಳುವುದೊಂದೆ. ಎಷ್ಟು ಸಂಪಾಸಿದೆ? ಬ್ಯಾಂಕ್‌ನಲ್ಲಿ ಬ್ಯಾಲೆಂನ್ಸ್ ಎಷ್ಟಿದೆ? ಎಂಬ ಪ್ರಶ್ನೆಗಳನ್ನೇ. ಹ್ಞಾ ಮರೆತಿದ್ದೆ..... ಬೆಂಗಳೂರು ನಿಂಗೆ ಹಿಡಿಸುತ್ತಾ? ಎಂಬ ಇನ್ನೊಂದು ಪ್ರಶ್ನೆಯನ್ನೂ ಕೇಳುತ್ತಾರೆ. ಅವರಿಗೆ ಏನು ಗೊತ್ತು... ಯಾವ ಪ್ರದೇಶಕ್ಕೂ ಹೊಂದಿಕೊಳ್ಳದವರು ಬೆಂಗಳೂರಿಗೆ ಹೊಂದಿಕೊಳ್ಳುತಾರೆ ಅಂಥ. ಒಂದು ವೇಳೆ ನಾವು ಹೊಂದಿಕೊಳ್ಳದಿದ್ದರೂ, ಬೆಂಗಳೂರೇ ನಮ್ಮನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ. ಇಲ್ದಿದ್ರೆ ದೇಶದ ಮೂಲೆ ಮೂಲೆಯಿಂದ ಜನರು ಬಂದು ಇಲ್ಲಿ ನೆಲೆಕಂಡಿದ್ದು ಹೇಗೆ?. ಮಹಾ ಸಾಗರದಂತಿರುವ ಬೆಂಗಳೂರು ಬಂದ ಜನರನ್ನೆಲ್ಲಾ ತನ್ನ ಒಡಲಾಳದಲ್ಲಿ ತುಂಬಿಕೊಂಡಿದೆ. ಇನ್ನೂ ತುಂಬಿಕೊಳ್ಳುತ್ತಿದೆ.
ಬೆಳಗ್ಗೆ ಒಮ್ಮೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಸ್ಕೈ ವಾಕರ್‌ನಲ್ಲಿ ನಿಂತು ಸುತ್ತಲೂ ಒಮ್ಮೆ ದೃಷ್ಠಿ ಹಾಯಿಸಿ ನೋಡಿ....ಜನಸಾಗರದ ಹೊರತು ನಿಮಗೆ ಮತ್ತಿನ್ನೇನೂ ಕಾಣದು.ಒಂದು ವರ್ಷದಲ್ಲಿ ನಾನು ಪಡೆದ ಅನುಭವವಿದೆಯಲ್ಲಾ....ಜೀವನಾನುಭವ. ಅದಕ್ಕಿಂತ ದೊಡ್ಡ ಅನುಭವವಿಲ್ಲ ಎಂದು ಹಿರಿಯರು ಹೇಳುತ್ತಾರೆ. ಬೆಂಗಳೂರಿನಲ್ಲಿ ಪ್ರತಿ ದಿನ ನಾನು ಪಡೆದದ್ದು ಅದನ್ನೇ! ಉದ್ಯೋಗದ ನಿರೀಕ್ಷೆಯಲ್ಲಿ ಊರಿಂದ ಹೊರಟು ಬೆಂಗಳೂರಿಗೆ ತಲುಪಿದಾಗ ನನ್ನನ್ನು ಸ್ವಾಗತಿಸಿದ್ದು ಇಲ್ಲಿನ ಟ್ರಾಫಿಕ್ . ಮುಂಜಾವು ೪.೩೦ರ ಸಮಯ. ಸಿಲಿಕಾನ್ ಸಿಟಿಯ ಹೆಬ್ಬಾಗಿಲು ನೆಲಮಂಗಲಕ್ಕೆ ತಲುಪಿದ್ದೆ. ಆಗಷ್ಟೇ ನಿದ್ದೆಯಿಂದ ಎದ್ದು ಕಣ್ಣು ಉಜ್ಜುತ್ತಿದ್ದೆ. ಹಿಂದಿನಿಂದ ಮುಂದಿನಿಂದ ಕಿವಿ ತಮಟೆ ಹರಿಯುವಂತೆ ವಾಹನಗಳ ಹಾರ್ನ್‌ಗಳು ಆರ್ಭಟಿಸುತ್ತಿದ್ದವು. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಇಲ್ಲಿನ ಟ್ರಾಫಿಕ್ ಬಗ್ಗೆ ತಿಳಿದಿದ್ದೆನಾದರೂ ಮೊದಲ ಸಲವೇ ಅದರ ಅನುಭವ ಆದೀತು ಅಂತ ಕನಸಿನಲ್ಲೂ ಆಲೋಚಿಸಿರಲಿಲ್ಲ. ಪ್ರಾತಃಕಾಲದಲ್ಲಿ ದೇವರ ಸ್ಮರಣೆ ಮಾಡಬೇಕಾದ ಹೊತ್ತಲ್ಲಿ ನಾನು ಸುಮಾರು ೨ ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ ಒತ್ತಾಡುತ್ತಿದ್ದೆ.... ಆ ಮೊದಲ ದಿನದಿಂದ ಇಂದಿನವರೆಗೆ ಪ್ರತಿಯೊಂದು ದಿನವೂ ಒಂದಲ್ಲ ಒಂದು ಅನುಭವ ಪಡೆದಿದ್ದೇನೆ. ಎಲ್ಲವನ್ನೂ ಬರೆದರೆ ಸರಣಿ ಲೇಖನ ಆಗಬಹುದೇನೋ...
ಆದರೂ, ಬೆಂಗಳೂರು ಜನರ ಜೀವನಾಡಿ ಆಗಿರುವ ಬಿಎಂಟಿಸಿ ಬಗ್ಗೆ ಹೇಳಲೇಬೇಕು. ಬೆಂಗಳೂರು ಕುರಿತು ಮಾತನಾಡುವಾಗ ಬಿಎಂಟಿಸಿ ಕುರಿತು ಹೇಳದಿದ್ದರೆ ಅಥವಾ ಬರೆಯದಿದ್ದರೆ ಆ ಬರಹ ಅಪೂರ್ಣ ಎಂಬುದು ನನ್ನ ಭಾವನೆ. ನಿಮಗೂ ಹಾಗನ್ನಿಸಿರಬಹುದು.
ಬಿಎಂಟಿಸಿ ಎಂದರೆ ಏನು ಎಂದು ಬೆಂಗಳೂರಿನ ಸಾಮಾನ್ಯ ಜನತೆಗೆ ಅರ್ಥವಾಗುವುದಿಲ್ಲ. ಅದೇ ಬಿಟಿಎಸ್ ಅಂತ ಹೇಳಿ.. ತಟ್ಟನೆ ಗ್ರಹಿಸುತ್ತಾರೆ. ಅವರಿಗೆ ಬಿಎಂಟಿಸಿ ಇನ್ನೂ ಬಿಟಿಎಸ್. ಬೆಂಗಳೂರಿಗರ ಜೀವನಾಡಿ ಇದು. ಈ ಬಸ್‌ಗಳ ಹೊರತಾಗಿ ಬೆಂಗಳೂರ ಜನಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಈ ಬಸ್‌ಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ.ಬೆಂಗಳೂರಿನ ಜನಜೀವನ ತಿಳಿಯಬೇಕಾದರೆ (ಹಾಗೂ ಪುಕ್ಕಟೆ ಮನರಂಜನೆ ಸಿಗಬೇಕಾದರೆ!) ನೀವು ಒಂದು ದಿನವಿಡೀ ಬಿಎಂಟಿಸಿ ಬಸ್ಸಲ್ಲಿ ಸುತ್ತಿದರೆ ಸಾಕು. ಬೇರೇನೂ ಮಾಡಬೇಕಿಲ್ಲ. ಕಳೆದ ಒಂದು ವರ್ಷದಿಂದ ಪ್ರತಿ ದಿನವೂ ಈ ಬಸ್‌ನಲ್ಲಿ ನಾನು ಪ್ರಯಾಣಿಸುತ್ತಿರುವುದರಿಂದ ಈ ಮಾತನ್ನು ನಾನು ಖಚಿತವಾಗಿ ಹೇಳಬಲ್ಲೆ.
ಒಂದು ಬಿಎಂಟಿಸಿ ಬಸ್ ಮಿನಿ ಬೆಂಗಳೂರಿಗೆ ಸಮ. ಅಲ್ಲಿ ಯಾರು ಇರುವುದಿಲ್ಲ ಹೇಳಿ. ಶೇ ೩೦.ತಮಿಳರು, ಶೇ ೨೦ ತೆಲುಗರು ಇನ್ನು ಹದಿನೈದು ಶೇ. ಮಲ್ಲುಗಳು (ಮಳಿಯಾಳಿಗಳು), ೫ ಪರ್ಸೆಂಟ್ ಹಿಂದಿ ಭಾಷಿಗರು ಇನ್ನುಳಿದವರು ಕನ್ನಡಿಗರು. (ವಿ.ಸೂ: ಈ ಅಂಕಿ ಅಂಶಗಳು ನನ್ನವು- ಹೆಚಚು ಕಮ್ಮಿ ಸರಿ ಇರಬಹುದು ಎಂಬುದು ನನ್ನ ಅನಿಸಿಕೆ) ಕಳ್ಳರು, ಪ್ರಾಮಾಣಿಕರು, ಜಗಳಗಂಟರು, ಹರಟಿಗರು, ಹೆಂಗರುಳಿನ ಯಜಮಾನರು (ಮಹಿಳೆಯರ ಬಗ್ಗೆ ಮೋಹ ಉಳ್ಳವರನ್ನು ನಾನು ಕರೆಯುವುದು ಹೀಗೆ!), ಕುಡುಕರು, ಪ್ರೇಮಿಗಳು-ಕಾಮಿಗಳು ಹೀಗೆ ಎಲ್ಲರೂ ಬಿಎಂಟಿಸಿ ಪ್ರಯಾಣಿಕರೇ.
ಬಸ್ಸಿಗೊಬ್ಬ/ಳು ಕಂಡಕ್ಟರ್. ಕೋಪ ದೇವತೆ ಅವರ ಮೂಗಿನ ತುದಿಯಲ್ಲಿ ನಲಿಯುತ್ತಿರುತ್ತಾಳೆ. ಎಷ್ಟು ಹೊತ್ತಿಗೂ ಅರಚುತ್ತಾ, ಬುಸುಗುಡುತ್ತಾ ಇರುತ್ತಾರೆ ಪ್ರಯಾಣಿಕರ ಬಳಿ ಚಿಲ್ಲರೆ ಇಲ್ಲದಿದ್ದರೆ ಅವರ ಅರಚಾಟ ಆರಂಭಗೊಳ್ಳುತ್ತದೆ ಇನ್ನು ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೋ....ಒಬ್ಬೊಬ್ಬರು ಒಂದೊಂದು ರೀತಿ. ಕೆಲವರು ಜಗಳ ತೆಗೆಯುವುದಕ್ಕಾಗಿಯೇ ಬಸ್ಸಿಗೆ ಹತ್ತಿರುತ್ತಾರೆ. ಚಾಲಕ ಬಸ್ಸನ್ನು ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ನಿಲ್ಲಿಸಿದರೆ ಸಾಕು. ಅದು ಜಗಳಕ್ಕೆ ನಾಂದಿ.
ಈ ಮೊಬೈಲ್‌ಗಳಲ್ಲಿ ಎಫ್‌ಎಂ, ಎಂಪಿತ್ರೀಗಳನ್ನು ಯಾಕಾದರೂ ತಂತ್ರಜ್ಞರು ಅಳವಡಿಸಿದರು ಎಂದು ಬಸ್ಸಲ್ಲಿ ಪ್ರಯಾಣಿಸುವಾಗ ನೀವು ತಲೆ ಚಚ್ಚಿಕೊಂಡಿರಬಹುದು. ಹಾಡನ್ನು ಕೇಳಲು ಹೆಡ್‌ಸೆಟ್ ಪ್ರತ್ಯೇಕವಾಗಿ ಇರುತ್ತದೆ. ಆದರೂ ಅದೇನು ಮಜಾ ಸಿಗುತ್ತೋ ಏನೋ.... ಹೆಡ್ ಸೆಟ್ ಇದ್ದರೂ ಬಸ್‌ಲ್ಲಿ ಲೌಡ್ ಸ್ಪೀಕರ್‌ನಲ್ಲಿಟ್ಟು ಹಾಡು ಕೇಳುತ್ತಾರೆ. ಹೀಗೆ ಯಾರಾದರು ಒಬ್ಬರು ಮಾಡಿದರೆ ಪರವಾಗಿಲ್ಲ. ಇಂಥ ಐದಾರು ಮಂದಿ ಬಸ್ಸಲ್ಲಿರುತ್ತಾರೆ. ಇದು ಸಾಲದೆಂಬತೆ ಚಾಲಕನೂ ಕೂಡ ರೇಡಿಯೋ ಚಾಲೂ ಮಾಡಿ, ಶಬ್ದ ಮಾಲಿನ್ಯದ ಪ್ರಮಾಣವನ್ನು ಇನ್ನೂ ಹೆಚ್ಚಿಸುತ್ತಾನೆ. ಆ ಬಸ್ಸಲ್ಲಿ ಪ್ರಯಾಣಿಸುವ ಸಂಗೀತ ಪ್ರೇಮಿ ಕೂಡ ಕಿವಿ ಮುಚ್ಚುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿರುತ್ತದೆ.
ಜಗಳವನ್ನು ನೋಡಬೇಕಾದರೆ ನೀವು ಬಿಎಂಟಿಸಿಯಲ್ಲಿ ಪ್ರಯಾಣಿಸಬೇಕು. ಎದುರಿಗೆ ಸಿಗುವ (ಅಡ್ಡಾದಿಡ್ಡಿ ವಾಹನ ಓಡಿಸುವ) ವಾಹನಗಳ ಚಾಲಕರಿಗೆ ಬೈಗುಳದ ಮಂಗಳಾರತಿ ಎತ್ತುತ್ತಲೇ ಬಸ್ಸನ್ನು ಚಾಲನೆ ಮಾಡುತ್ತಿರುತ್ತಾನೆ. ಚಾಲಕನ ಆರತಿಗೆ ಮೊದಲು ಮುಖ ಒಡ್ಡುವವರು ಆಟೋ ಡ್ರೈವರ್‌ಗಳು. (ಅವರೇನೂ ಕಮ್ಮಿ ಇಲ್ಲ ಬಿಡಿ). ಇದೆಲ್ಲವುದರ ನಡುವೆ ಟ್ರಾಫಿಕ್ ಜಾಮ್. ಮತ್ತೆ ಹಾರ್ನ್‌ಗಳ ಸದ್ದು. ಕೊನೆಗೆ ನೀವು ಇಳಿಯಬೇಕಾದ ಸ್ಥಳ ಬಂದಾಗ, ಅಂತೂ ಹೇಗಾದರೂ ತಲುಪಿದೆನಲ್ಲಾ ಎಂಬ ಉದ್ಘಾರ ನಿಮ್ಮ ಮನಸಿನ ಮೂಲೆಯಲ್ಲಿ ಉಂಟಾಗಿ, ಬಸ್ಸಿನಲ್ಲಿ ನಡೆದ ಘಟನೆಗಳನ್ನು ನೆನೆದುಮುಗುಳ್ನಗೆ ಸಹಿತ/ರಹಿತ ಮುಖದೊಂದಿಗೆ ಬಸ್ಸಿನ ಮೆಟ್ಟಿಲು ಇಳಿವಾಗ ಎದುರಿಗೊಬ್ಬರು ಅವಸರದಿಂದ ತಳ್ಳಿಕೊಂಡು ಅರಚುತ್ತಾ ಬಸ್ಸಿಗೆ ಹತ್ತುತ್ತಿರುತ್ತಾರೆ!.
ಮನೆಯವರು ಸ್ನೇಹಿತರು, ಹಿತೈಷಿಗಳು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಮೊದಲು ಹೇಳಿದ್ದೆ. ಅವರ ಎಲ್ಲಾ ಪ್ರಶ್ನೆಗಳಿಗೆ ಹೇಗೂ ಉತ್ತರ ಕೊಟ್ಟಿದ್ದೆ. ಆದರೆ ಅವರು ಮತ್ತೊಂದು ಪ್ರಶ್ನೆನಾ ಮುಂದಿಡುತ್ತಾರೆ.
ಯಾವುದಾದರೂ ಹುಡುಗೀನಾ ನೋಡಿಟ್ಟಿದ್ದೀಯಾ ಬೆಂಗಳೂರಿನಲ್ಲಿ?
ಉತ್ತರ:???????!!!!!!!
ನಿಮ್ಮವ ವಜ್ರಾಂಗಿ ಸೂರ್ಯ

4 ಕಾಮೆಂಟ್‌ಗಳು:

jomon varghese ಹೇಳಿದರು...

ಚೆಂದ ಬರೆದಿದ್ದೀರಿ ಸೂರ್ಯ. ಬೆಂಗಳೂರಿನ ಅನುಭವಗಳ ಬಗ್ಗೆ ಪ್ರೀತಿ ಹುಟ್ಟಿಸುವ ಹಾಗೆ. ಅಂದಹಾಗೆ ನನ್ನದೂ ಅದೇ ಪ್ರಶ್ನೆ ಎಷ್ಟು ಸಂಪಾಸಿದೆ? ಬ್ಯಾಂಕ್‌ನಲ್ಲಿ ಬ್ಯಾಲೆಂನ್ಸ್ ಎಷ್ಟಿದೆ? :)

dayananda ಹೇಳಿದರು...

chennigide soory

Unknown ಹೇಳಿದರು...

ಹುಂ ಸೂರ್ಯ ಬೆಂಗಳೂರಿನ ವರ್ಣನೆ ಕೇಳಿ ಖುಷಿ ಆಯಿತು. ವಾರಕ್ಕೊಂದು ಲೇಖನದ ನಿರೀಕ್ಷೆಯಲ್ಲಿ..................

Unknown ಹೇಳಿದರು...

ಹುಂ ಸೂರ್ಯ ಬೆಂಗಳೂರಿನ ವರ್ಣನೆ ಕೇಳಿ ಖುಷಿ ಆಯಿತು. ವಾರಕ್ಕೊಂದು ಲೇಖನದ ನಿರೀಕ್ಷೆಯಲ್ಲಿ................................