ನಾವು ಬಯಸಿ ಇಲ್ಲಿಗೆ ಬಂದಿದ್ದಲ್ಲ. ನಸೀಬು ನಮ್ಮನ್ನು ಕರೆ ತಂದಿತು. ಒಬ್ಬ ವ್ಯಕ್ತಿ ಫುಟ್ಪಾತ್ನಲ್ಲಿ ನಿಂತು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾನೆ ಅಂದರೆ ನೀವು ಯೋಚನೆ ಮಾಡಿ. ಅದು ಆ ವ್ಯಕ್ತಿಯ ಜೀವನದ ಕೊನೆಯ ಘಟ್ಟ. ಅದರಿಂದ ಕೆಳಗಡೆ ಇಳಿಯಲು ಸಾಧ್ಯವಿಲ್ಲ`
-ಅಲ್ತಾಫ್ ಮಾತಿನಲ್ಲಿ ನೋವು. ಕಣ್ಣಂಚಿನಲ್ಲಿ ವಿಷಾದದ ಭಾವ. ತಾವು ಮಾಡುತ್ತಿರುವ ಕೆಲಸದ ಬಗ್ಗೆ ಪ್ರೀತಿಗಿಂತ ಅನಿವಾರ್ಯತೆಯೇ ಹೆಚ್ಚಾಗಿದೆಯೇನೋ ಎನಿಸುತ್ತಿತ್ತು. ನಿಧಾನವಾಗಿ ಪ್ರಶ್ನೆಗಳಿಗೆ ತೆರೆದುಕೊಂಡರು ಅಲ್ತಾಫ್.
ಅಲ್ತಾಫ್ ಅವರ ಕಾರ್ಯಕ್ಷೇತ್ರ ಫುಟ್ಪಾತ್. ಬೆಂಗಳೂರಿನ ಖ್ಯಾತ ಬ್ರಿಗೇಡ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಒಂದು ಕಡೆ ಕುಳಿತು ಟೈಗಳು, ಪರ್ಸುಗಳನ್ನು ಮಾರುವುದು ಅವರ ಕಾಯಕ. ಕಳೆದ 8-10 ವರ್ಷಗಳಿಂದ ಅವರು ಈ ಕೆಲಸವನ್ನು ಮಾಡುತ್ತಿದ್ದಾರೆ.
ಬೆಂಗಳೂರಿನ ನೀಲಸಂದ್ರದ ನಿವಾಸಿಯಾದ ಅವರಿಗಿನ್ನೂ 28ರ ಹರೆಯ. ಎಂಟನೇ ತರಗತಿವರೆಗೆ ಓದಿದ್ದಾರೆ. ಮನೆಯಲ್ಲಿ ಕಡು ಬಡತನ. ಶಿಕ್ಷಣ ಮುಂದುವರೆಸಲು ಸಾಧ್ಯವಾಗಲಿಲ್ಲ. ಕಿರಿಯವಯಸ್ಸಿನಲ್ಲೇ ಮನೆಯ ನಿರ್ವಹಣೆ ಜವಾಬ್ದಾರಿ. ದುಡಿಯುವುದು ಅನಿವಾರ್ಯವಾದಾಗ ಫುಟ್ಪಾತ್ ಆಯ್ಕೆ.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಮೊದಲ ಬಾರಿ ಅಂದರೆ ಕಳೆದ ಏಪ್ರಿಲ್ನಲ್ಲಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಇರ್ಷಾದ್ಗೆ ಭರ್ಜರಿಯಾಗಿಯೇ ವ್ಯಾಪಾರ ಆಗಿತ್ತು. ಅಣ್ಣಾ ನವದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ನಡೆಸುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಸಾವಿರಾರು ಜನರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಿ ಅಣ್ಣಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಆ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲೂ ರಾಷ್ಟ್ರ ಧ್ವಜ, ಐ ಯಾಮ್ ಅಣ್ಣಾ, ಐ ಸಪೋರ್ಟ್ ಅಣ್ಣಾ ಎಂಬ ಘೋಷಣೆಗಳನ್ನೊಳಗೊಂಡ ಕರ ಪತ್ರಗಳು, ಭಿತ್ತಿ ಪತ್ರಗಳು ರಾರಾಜಿಸಿದ್ದವು. ಅಣ್ಣಾ ಅವರು ಉಪವಾಸ ನಡೆಸಿದ ಒಟ್ಟು 13 ದಿನಗಳೂ ಇರ್ಷಾದ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೀಡು ಬಿಟ್ಟಿದ್ದರು. ಆ ಸಂದರ್ಭದಲ್ಲಿ ಒಂದಿಷ್ಟು ದುಡ್ಡನ್ನೂ ಸಂಪಾದಿಸಿದ್ದಾಗಿ ಇರ್ಷಾದ್ ಹೇಳುತ್ತಾರೆ. ಆದರೆ, ಎರಡನೇ ಬಾರಿ ಡಿಸೆಂಬರ್ನಲ್ಲಿ ಮುಂಬೈನಲ್ಲಿ ಅಣ್ಣಾ ನಡೆಸಿದ ಉಪವಾಸ ಸತ್ಯಾಗ್ರಹ ಯಶಸ್ವಿಯಾಗದ್ದಕ್ಕೆ ಇರ್ಷಾದ್ಗೆ ಬೇಸರವಿದೆ. ಈ ಸಂದರ್ಭದಲ್ಲೂ ಸ್ವಾತಂತ್ರ್ಯ ಉದ್ಯಾನದಲ್ಲಿ ಜನರು ಸೇರಿದ್ದರಾದರೂ ಮೊದಲ ಸಲ ಇದ್ದಷ್ಟು ಸಂಖ್ಯೆಯಲ್ಲಿ ಇರಲಿಲ್ಲ. ಹಾಗಾಗಿ ಇರ್ಷಾದ್ಗೆ ಆದ ವ್ಯಾಪಾರವೂ ಅಷ್ಟಕಷ್ಟೇ. |
`ನಾವು ಓದಿಲ್ಲ. ಮತ್ತೆಲ್ಲಿ ಒಳ್ಳೆಯ ಕೆಲಸ ಸಿಗುತ್ತದೆ ಸಾರ್? ಹೊಟ್ಟೆಪಾಡು. ಯಾವುದಾದರೂ ಸಣ್ಣ ಪುಟ್ಟ ಕೆಲಸ ಮಾಡಬೇಕು. ಅಲ್ಲೂ ಹೆಚ್ಚು ಸಂಬಳ ಏನೂ ಕೊಡುವುದಿಲ್ಲ. 3,000 ದಿಂದ 4,000 ಸಿಕ್ಕಿದರೆ ಹೆಚ್ಚು. ಅಷ್ಟು ಸಂಬಳಕ್ಕೆ ಕೆಲಸ ಮಾಡುವುದಕ್ಕಿಂತ ಫುಟ್ಪಾತ್ ವ್ಯಾಪಾರ ಮಾಡುವುದೇ ಲೇಸು.
ಬದುಕು ಕೇರ್ ಆಫ್ ಫುಟ್ಪಾತ್ ಆದರೂ ದಿನಕ್ಕೆ 250ರಿಂದ 300 ರೂಪಾಯಿ ದುಡಿಯುತ್ತೇನೆ. ಬರುವ ದುಡ್ಡಲ್ಲಿ ಸಂಸಾರ ಸಾಗುತ್ತದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹೀಗೆ ಹೇಳುವ ಅಲ್ತಾಫ್ ಜನದಟ್ಟಣೆಯ ನಡುವೆ ತಮ್ಮ ವ್ಯಾಪಾರದಲ್ಲಿ ಕರಗಿ ಹೋಗುತ್ತಾರೆ...
ಅಲ್ತಾಫ್ ಒಬ್ಬರೇ ಅಲ್ಲ. ಜೀವನಕ್ಕಾಗಿ ಫುಟ್ಪಾತ್ ವ್ಯಾಪಾರವನ್ನೇ ನೆಚ್ಚಿಕೊಂಡ ನೂರಾರು ಯುವಕರು ಬೆಂಗಳೂರಿನಲ್ಲಿದ್ದಾರೆ. ಒಬ್ಬೊಬ್ಬರದು ಒಂದೊಂದು ಕಥೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ನಿಂತ ಕೂಡಲೇ ತಂಪು ಕನ್ನಡಕ, ಟೋಪಿಗಳು, ಆಕರ್ಷಕವಾಗಿ ಕಾಣುವ ಕೈ ಗೈಡಿಯಾರಗಳನ್ನು ಹಿಡಿದುಕೊಂಡು ಬರುವವರನ್ನೂ ನೀವು ಗಮನಿಸಿರಬಹುದು.
ಬೆಂಗಳೂರಿನ ಬ್ಯಾಟರಾಯನಪುರದ ನಿವಾಸಿಯಾಗಿರುವ ಇರ್ಷಾದ್ ಕಥೆಗೆ ಹೊರಳೋಣ. `ನನ್ನ ಮುಂದೆ ಬೇರೆ ಆಯ್ಕೆಗಳೇ ಇರಲಿಲ್ಲ. ಉತ್ತಮ ನೌಕರಿ ಹಿಡಿಯೋಣ ಅಂದರೆ ಶಿಕ್ಷಣ ಪಡೆದಿಲ್ಲ. ಎಲ್ಲಿ ಸಿಗತ್ತೆ ಸರ್ ಕೆಲಸ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ. 15 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ. ಇದು ಬಿಟ್ಟು ಬೇರೆ ಯಾವ ಕೆಲಸವೂ ಗೊತ್ತಿಲ್ಲ.
ಮೊದಲು ಸಂಡೇ ಬಜಾರ್ನಲ್ಲಿ ವ್ಯಾಪಾರ ಮಾಡುತ್ತಿದ್ದೆ. ಅಲ್ಲಿನ ಅಂಗಡಿಗಳವರು ಇಲ್ಲಿ ಕೆಲಸ ಮಾಡಬೇಡ ಅಂದರು. ಹಾಗಾಗಿ ಈಗ ಎಂಜಿ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ನಾನು ಯಾವಾಗಲೂ ಇಲ್ಲಿ ಇರುವುದಿಲ್ಲ. ಬೇರೆ ಬೇರೆ ಕಡೆ ವ್ಯಾಪಾರ ಮಾಡುತ್ತೇನೆ. ಯಾವತ್ತೂ ಕೈಗಡಿಯಾರವನ್ನೇ ಮಾರುವುದಿಲ್ಲ. ಬೇರೆ ಬೇರೆ ಐಟಮ್ಗಳನ್ನು ಮಾರುತ್ತೇನೆ. ಉದಾಹರಣೆಗೆ ಐಪಿಎಲ್ ಸೀಸನ್ನಲ್ಲಿ ಅಥವಾ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಧ್ವಜ, ಟೀ-ಶರ್ಟ್ ಮುಂತಾದ ವಸ್ತುಗಳನ್ನು ಮಾರುತ್ತೇನೆ. ಉರುಸ್ ಸಂದರ್ಭದಲ್ಲಿ ಮಸೀದಿಯ ಆವರಣ ನನ್ನ ಕಾರ್ಯಕ್ಷೇತ್ರ. ಸೀಸನ್ ಬದಲಾದ ಹಾಗೆ ನಾನು ಮಾರುವ ವಸ್ತುಗಳೂ ಬದಲಾಗುತ್ತವೆ` ಎನ್ನುತ್ತಾರೆ ಇರ್ಷಾದ್.
ಒಂದೊಂದು ದಿನ ಒಂದು ರೀತಿ ವ್ಯಾಪಾರ ಆಗುತ್ತದೆ. ಕೆಲವು ದಿನ 500 ರೂಪಾಯಿ ವ್ಯಾಪಾರ ಆಗಿದ್ದೂ ಇದೆ. ಕೆಲವು ದಿನ ಕೇವಲ 100 ರೂಪಾಯಿ ಆಗಿದ್ದೂ ಇದೆ. ಹೆಚ್ಚು ವ್ಯಾಪಾರ ಆದರೆ ಸಂತೋಷ ಆಗುತ್ತದೆ. ಕಡಿಮೆ ವ್ಯಾಪಾರ ಆದರೆ ಸಹಜವಾಗಿ ದುಃಖ. ಯಾರಾ ಹತ್ತಿರವೂ ಹೇಳಿಕೊಳ್ಳುವ ಹಾಗಿಲ್ಲ ಎಂದು ಇರ್ಷಾದ್ ನೋವು ತೋಡಿಕೊಳ್ಳುತ್ತಾರೆ.
ಅಂದ ಹಾಗೆ, 26ರ ಹರೆಯದ ಇರ್ಷಾದ್ಗೆ ಮದುವೆಯಾಗಿದೆ. ಇಬ್ಬರು ಮಕ್ಕಳೂ ಇದ್ದಾರೆ. ಪೋಷಕರು ಜೊತೆಯಲ್ಲಿರುವ ತುಂಬು ಸಂಸಾರವನ್ನು ತಮ್ಮ ಸಂಪಾದನೆಯಿಂದಲೇ ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ ಎಂಬುದಿಲ್ಲ. ನಿರ್ದಿಷ್ಟ ವಸ್ತುಗಳನ್ನೂ ಇವರು ಮಾರುವುದಿಲ್ಲ. ದಿನಕ್ಕೆ ಒಂದೊಂದು ಸ್ಥಳದಲ್ಲಿ ಇವರ ಕಾಯಕ. ಒಂದಷ್ಟು ಜನ ಕೈಗಡಿಯಾರಗಳನ್ನು ಕೈಯಲ್ಲಿ ಹೊತ್ತು ತಿರುಗಿದರೆ, ಇನ್ನೊಂದಷ್ಟು ಜನರು ಆಕರ್ಷಕ ತಂಪು ಕನ್ನಡಕಗಳನ್ನು ಕೈಯಲ್ಲಿ, ಮೈಯಲ್ಲಿ ಹೊತ್ತುಕೊಂಡು ಪಾದಚಾರಿಗಳ ಹಿಂದೆ ಮುಂದೆ ನಡೆದುಕೊಂಡು ಹೋಗುತ್ತಾ ವ್ಯಾಪಾರ ಮಾಡುತ್ತಿರುತ್ತಾರೆ. ಇನ್ನು ಕೆಲವರು ಟೈ, ಬೆಲ್ಟ್, ಕಾಲು ಚೀಲ (ಸಾಕ್ಸ್), ಟೋಪಿಗಳು, ಹುಡುಗಿಯರು ಧರಿಸುವ ಅಲಂಕಾರಿಕ ವಸ್ತುಗಳನ್ನು ಮಾರುತ್ತಿರುತ್ತಾರೆ.
ಪುಟ್ಪಾತ್ನಲ್ಲಿ ವ್ಯಾಪಾರ ಮಾಡುವ ವೃತ್ತಿಯನ್ನು ಆಯ್ದುಕೊಂಡವರಲ್ಲಿ ಹೆಚ್ಚಿನವರು ಯುವಕರು ಎಂಬುದು ಗಮನಿಸಬೇಕಾದ ಅಂಶ. ಇವರಲ್ಲಿ ಹೆಚ್ಚಿನವರು ಪ್ರಾಥಮಿಕ ಶಿಕ್ಷಣವನ್ನು ಪಡೆದಿಲ್ಲ. ಇವರ ಮನೆಯ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲ. ಮನೆಯಲ್ಲಿ ಸಮಸ್ಯೆಗಳೂ ಹಲವು. ಅನಿವಾರ್ಯವಾಗಿ ಈ ಕಸುಬಿಗೆ ಕೈ ಹಾಕಿದ್ದಾರೆಯೇ ವಿನಃ ಇಷ್ಟ ಪಟ್ಟು ಅಪ್ಪಿಕೊಂಡದ್ದಲ್ಲ ಎನ್ನುವುದು ಸ್ಪಷ್ಟ.
ಈ ವ್ಯಾಪಾರಿಗಳು ಎದುರಿಸುತ್ತಿರುವ ಸವಾಲುಗಳು ಸಾಕಷ್ಟು. ಪೊಲೀಸರ ಕಿರಿ ಕಿರಿ ಅಂತು ಇದ್ದೇ ಇರುತ್ತದೆ. ಅವರಿಗೆ ಊಟಕ್ಕೋ, ಕಾಫಿಗೋ ಆಗುವಷ್ಟು ಇನಾಮು ಕೊಡಲೇ ಬೇಕು. ಇಲ್ಲದಿದ್ದರೆ ಅವರನ್ನು ಆ ಪ್ರದೇಶದಿಂದ ಎತ್ತಂಗಡಿ ಮಾಡುತ್ತಾರೆ. ಅಲ್ಲದೇ ಅಕ್ಕ ಪಕ್ಕದ ಅಂಗಡಿಯವರು ಇವರನ್ನು ತಮ್ಮ ಅಂಗಡಿ ಎದುರು ವ್ಯಾಪಾರ ನಡೆಸಲು ಅವಕಾಶ ಕೊಡುವುದಿಲ್ಲ. ಇವರಿಂದಾಗಿ ಗ್ರಾಹಕರು ತಮ್ಮಿಂದ ದೂರ ಹೋಗುತ್ತಾರೆ ಎಂಬುದು ಅವರ ಆರೋಪ.
ಇವರು ಮಾರುವ ವಸ್ತುಗಳು ಅಸಲಿಯಂತೆ ಕಂಡರೂ ಅವು ನಕಲಿಗಳೇ. ಕೆಲವರಲ್ಲಿ ಸಾಕಷ್ಟು ದುಡ್ಡು ಇರುತ್ತದೆ. ಆದರೆ ಅಸಲಿಗೆ ಯಾಕೆ ಅಷ್ಟು ದುಡ್ಡು ಕೊಡಬೇಕು. ನಕಲಿಯನ್ನೇ ಕೊಳ್ಳೋಣ ಎನ್ನುವ ಮನಸ್ಥಿತಿಯವರು ಇರುತ್ತಾರೆ. ಇಂತಹ ಸ್ಥಿತಿಯಲ್ಲಿ ಈ ವ್ಯಾಪಾರಿಗಳ ಮೇಲೆ ಅಸಲಿ ವಸ್ತುಗಳ ಮಾರಾಟಗಾರರ ಕೆಂಗಣ್ಣೂ ಇರುತ್ತದೆ.
ಈ ಎಲ್ಲಾ ಸವಾಲುಗಳ ಮಧ್ಯೆ ಇವರು ವ್ಯಾಪಾರ ಮಾಡಬೇಕು. ಗ್ರಾಹಕರನ್ನು ಒಲಿಸಿಕೊಳ್ಳಬೇಕು. ಗ್ರಾಹಕರೇ ರಾಜರು ಎನ್ನುವ ಕಾಲ ಇದು. ಅಂತಹುದರಲ್ಲಿ ಇವರು ಅವರ ಗಮನ ಸೆಳೆದು, ಅವರಿಗೆ ತಮ್ಮಲ್ಲಿರುವ ವಸ್ತುವಿನ ಮೇಲೆ ಆಕರ್ಷಣೆಯಾಗುವಂತೆ ಮಾಡಿ, ಆ ಬಳಿಕ ಆ ವಸ್ತುವನ್ನು ಕೊಂಡುಕೊಳ್ಳುವಂತೆ ಮಾಡುವುದು ಇದೆಯಲ್ಲಾ ಅದು ಸುಲಭದ ಕೆಲಸವಲ್ಲ. ಆದರೆ ಆ ಕೆಲಸದಲ್ಲಿ ನಿಷ್ಣಾತರಿವರು. ಆ ಕಲೆಯೂ ಅವರಿಗೆ ಒಲಿದಿದೆ. ಹೆಚ್ಚು ಓದದಿದ್ದರೂ ಮಾತೃಭಾಷೆ ಮತ್ತು ನಾಡಿನ ಭಾಷೆ ಅಲ್ಲದೇ ಇತರ ಭಾಷೆಗಳಲ್ಲೂ ಇವರು ಪರಿಣತಿ ಸಾಧಿಸಿದ್ದಾರೆ.
ಗ್ರಾಹಕರ ಮಾತೃ ಭಾಷೆಯಲ್ಲಿಯೇ ಮಾತನಾಡಿ ವ್ಯಾಪಾರದ ಅಖಾಡಕ್ಕೆ ಅವರನ್ನು ಎಳೆಯುತ್ತಾರೆ. ಗ್ರಾಹಕರು ವಸ್ತುಗಳ ದರ ಕೇಳಿ ತಿಳಿದುಕೊಂಡ ಕೂಡಲೇ ಖರೀದಿಸುತ್ತಾರೆ ಎಂಬ ಗ್ಯಾರಂಟಿ ಏನೂ ಇಲ್ಲ.
ಈ ವ್ಯಾಪಾರಿಗಳಿಗೆ ಜೀವನ ಭದ್ರತೆ ಎಂಬುದಿಲ್ಲ. ಅಭದ್ರತೆ ಇವರ ಜೀವನದ ಹಾಸುಹೊಕ್ಕು. ಇಂದು ವ್ಯಾಪಾರ ಆದರೆ ಆಯಿತು. ನಾಳೆ ಏನಾಗುವುದೋ ಹೇಳಲು ಆಗುವುದಿಲ್ಲ. ಹಾಗಿದ್ದರೂ ಜೀವನ ಪ್ರೀತಿ ಮತ್ತು ಬದುಕಬೇಕೆಂಬ ಛಲ ಇವರಿಂದ ಈ ಕಸುಬನ್ನು ಮಾಡಿಸುತ್ತಿದೆ.
-ಸೂರ್ಯ ವಜ್ರಾಂಗಿ
ಕೃಪೆ: ಪ್ರಜಾವಾಣಿ
1 ಕಾಮೆಂಟ್:
vajrotthamara maathugalu chennagive... nimma blog lokada harivu innu vistharavaagali..
ಕಾಮೆಂಟ್ ಪೋಸ್ಟ್ ಮಾಡಿ