ಶುಕ್ರವಾರ, ಅಕ್ಟೋಬರ್ 14, 2011

ಮತ್ತೆ ಬರೆಯುವ ಕಾರ್ಯ ಶೀಘ್ರದಲ್ಲಿ…


ಕಳದ ಒಂದೂವರೆ ವರ್ಷಗಳಿಂದ ನನ್ನ ಬ್ಲಾಗ್ನಲ್ಲಿ ನಾನು ಏನೂ ಬರೆದಿಲ್ಲ.. ಮತ್ತೆ ಬರೆಯುವ ವಾತಾವರಣವನ್ನು ನಾನೇ ಸೃಷ್ಟಿಸಿಕೊಂಡಿದ್ದೇನೆ…

ಶೀಘ್ರದಲ್ಲಿ ಈ ಪುಟದಲ್ಲಿ ನನ್ನ ಪದಗಳ ಗೀಚುಗಳನ್ನು ನೀವು ಕಾಣುವಿರಿ..

ನಿಮ್ಮವ

ಸೂರ್ಯ

ಭಾನುವಾರ, ಏಪ್ರಿಲ್ 11, 2010

ಮರೆಯದ ನೆನಪನು ನಮ್ಮಲ್ಲಿ ತಂದೆ ನೀನು..

ಕೆಲವು ವಾರಗಳ ಹಿಂದೆ ವಾಹಿನಿಯೊಂದರಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಅವರು
ನೀ ಬರೆದ ಕಾದಂಬರಿ’ ಚಿತ್ರದ ’ನೀ ಮೀಟಿದಾ ನೆನಪೆಲ್ಲವೂ. ಎದೆ ತುಂಬಿ ಹಾಡಾಗಿದೇ.... ಎಂದು ಹಾಡುತ್ತಿದ್ದರೆ, ಅವರ ಕಣ್ಣಂಚು .. ಜೊತೆಗೆ ನನ್ನ ಕಣ್ಣಂಚು ಒದ್ದೆಯಾಗಿತ್ತು. ಆ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಅಂತಹ ಭಾವನಾತ್ಮಕವಾದ ಹಲವಾರು ಹಾಡುಗಳನ್ನು ಹಾಡಿದ್ದರು. ಏಕೋ ಏನೋ ಆ ಹಾಡುಗಳನ್ನೆಲ್ಲಾ ಕೇಳುವಾಗ ಹೃದಯ ತುಂಬಾ ಭಾರವಾದ ಅನುಭವ.
~~~

ಸತ್ಯ ಎಂದಿಗೂ ಕಹಿ ಅನ್ನುವ ಮಾತನ್ನು ಹಲವಾರು ಬಾರಿ ಕೇಳಿದ್ದೆ. ಆದರೆ ಅರಗಿಸಿಕೊಳ್ಳಲಾರದ್ದು ಅಂತ ತಿಳಿದಿರಲಿಲ್ಲ. ಅಂದು ಮೊದಲ ಪಾಳಿ ಮುಗಿಸಿಕೊಂಡು ತಡವಾಗಿ ರೂಮಿಗೆ ಬಂದಿದ್ದ ನನಗೆ ನಿದ್ದೆಯ ಜೋಮು ಹಿಡಿಯಬೇಕಾದರೆ ಸುಮಾರು ಹೊತ್ತು ಹಿಡಿತ್ತು. ಅದಕ್ಕೆ ಕಾರಣವೂ ಇತ್ತು. ಅಂತು ಕೊನೆಗೂ ನಿದ್ದೆ ಬಂತೆನ್ನಿ. ಮರು ದಿನ ಬೆಳಗ್ಗೆ ೮.೩೦ರ ಸುಮಾರಿಗೆ ಮಿತ್ರ ಜೋಮನ್ ವರ್ಗೀಸ್ ಒಂದು ಎಸ್‌ಎಂಎಸ್ ಕಳಿಸಿದ್ದರು. ನಿದ್ದೆ ಕಣ್ಣಿನಲ್ಲಿ ಮೊಬೈಲ್ ಎತ್ತಿ ಅಸ್ಪಷ್ಟವಾಗಿ ಕಾಣುತ್ತಿದ್ದ ಮೆಸೇಜ್ ಓದಿದ ಕೂಡಲೇ ನಿದ್ದೆ ಗುಡ್ಡೆ ಹತ್ತಿತ್ತು. ಸೂರ್ಯ ವಿಷ್ಯ ಗೊತ್ತಾಗಿಲ್ವ ವಿಷ್ಣು ಇನ್ನಿಲ್ಲ ಎನ್ನುವುದು ಮೆಸೇಜ್‌ನಲ್ಲಿದ್ದ ಸಾರಾಂಶ. ತಕ್ಷಣ ಟಿವಿ ಆನ್ ಮಾಡಿದೆ. ಮೆಸೇಜ್‌ನಲ್ಲಿದ್ದ ಅಂಶಗಳು ದೃಶ್ಯ ರೂಪದಲ್ಲಿ ಗೋಚರವಾಗಿತ್ತು. ನಿದ್ದೆಯಿಂದ ಮಸುಕುಕಾಗಿದ್ದ ಕಣ್ ದೃಷ್ಟಿ ಕನ್ನಡ ಚಿತ್ರರಂಗದ ಆಪ್ತಮಿತ್ರ ವಿಷ್ಣುವರ್ಧನ್ ಅವರ ಪಾರ್ಥೀವ ಶರೀರ ಕಂಡಾಗ ಸರಿಯಾಗಿ ಗೋಚರವಾಗಲು ಆರಂಭವಾಯಿತು. ಹಿಂದಿನ ದಿನವಷ್ಟೇ ಸುಗಮ ಸಂಗೀತ ಕ್ಷೇತ್ರದ ಮೇರು ಗಾಯಕ ಸಿ.ಅಶ್ವತ್ಥ್ ಅವರು ನಿಧನರಾದ ಸುದ್ದಿ ಅರಗಿಸಿಕೊಳ್ಳುವಷ್ಟರಲ್ಲಿ ವಿಷ್ಣು ವಿಧಿವಶರಾಗಿದ್ದರು.

ವಿಷ್ಣುವರ್ಧನ್ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಬುದ್ಧಿ ತಿಳಿದಾಗಿನಿಂದ ಅವರನ್ನು ಹೃದಯದಲ್ಲಿ ಇಟ್ಟು ಆರಾಧಿಸಿದ್ದೇನೆ. ಚಿತ್ರಮಂದಿರಗಳಲ್ಲಿ ಅವರ ಚಿತ್ರಗಳನ್ನು ನೋಡದಿದ್ದರೂ, ವಾಹಿನಿಗಳಲ್ಲಿ ಅವರ ಚಿತ್ರಗಳನ್ನು ಒಂದೂ ಬಿಡದೆ ನೋಡಿ ಸವಿದಿದ್ದೇನೆ.

ಕನ್ನಡ ಚಿತ್ರರಂಗದ ಪರ್ವಕಾಲ ೭೦ ಹಾಗೂ ೮೦ರ ದಶಕದಲ್ಲಿ ಚಿತ್ರರಂಗದಲ್ಲಿನ ರಾಜಕೀಯದ ಹೊರತಾಗಿಯೂ ರಾಜನಂತೆ ಮೆರೆದವರು ವಿಷ್ಣು. ಭಾವ ತುಂಬಿದ ಅವರ ಅಭಿನಯ ಎಲ್ಲರನ್ನೂ ಮೋಡಿ ಮಾಡಿತ್ತು. ನನ್ನನ್ನೂ ಕೂಡ.
ಅವರೆಡೆಗೆ ಹೆಚ್ಚಾಗಿ ನನ್ನನ್ನು ಆಕರ್ಷಿಸಿದ್ದು ಅವರ ಕಣ್ಣುಗಳು. ಆ ಕಣ್ಣಿನ ತೇಜಸ್ಸು ಇದೆಯಲ್ಲಾ ಅದು ಸಾಮಾನ್ಯವಾದುದಲ್ಲ.. ತಟ್ಟನೆ ಎಲ್ಲರನ್ನೂ ಸೆಳೆದು ಬಿಡುತ್ತಿತ್ತು. ಭಾವಾನಾತ್ಮ ಚಿತ್ರಗಳಲ್ಲಿ ಆ ಕಣ್ಣುಗಳೇ ಹೀರೋ... ಸಾಹಸ ಸಿಂಹನಿಗಿಂತಲೂ ನನಗೆ ಹೆಚ್ಚು ಆಪ್ತವಾಗಿದ್ದು ಅಭಿನವ ಭಾರ್ಗವ ವಿಷ್ಣುವರ್ಧನ್. ಕರ್ಣ, ಮಲಯಮಾರುತ, ಒಂದಾಗಿ ಬಾಳು, ಬಂಧನ, ನೀ ಬರೆದ ಕಾದಂಬರಿ, ಲಾಲಿ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಭಾವನಾತ್ಮಕ ಚಿತ್ರಗಳಲ್ಲಿನ ಯಾವುದೇ ಸನ್ನಿವೇಶ ಆಗಿರಲಿ, ಅವರ ಕಣ್ಣುಗಳು ಆ ದೃಶ್ಯಕ್ಕೆ ನೈಜತೆಯ ಸ್ಪರ್ಶ ನೀಡುತ್ತಿದ್ದವು. ಇತ್ತ ಪ್ರೇಕ್ಷಕನ ಕಣ್ಣಲ್ಲಿ ನೀರು ಹರಿಸುತ್ತಿದ್ದವು.

ಈಗ ೪೦-೫೦ ವಯೋಮಾನದ ಹೆಂಗಸರಲ್ಲಿ ಕೇಳಿ ನೋಡಿ.. ವಿಷ್ಣುವರ್ಧನ್ ಅವರ ನೆಚ್ಚಿನ ನಟ.. ಯಾಕೆಂದರೆ ಅವರ ಯುವ ವಯಸ್ಸಿನ ಕಾಲದಲ್ಲಿ ವಿಷ್ಣು ಅವರ ಮನಸ್ಸನ್ನು ಸೂರೆ ಮಾಡಿದ್ದರು. ಆ ಕಾರಣಕ್ಕಾಗಿಯೇ ಅವರು ಭಾರಿ ಸಂಖ್ಯೆಯಲ್ಲಿ ಮಹಿಲಾ ಅಭಿಮಾನಿಗಳನ್ನು ಹೊಂದಿದ್ದರು.

ಚಿತ್ರರಂಗದ ರಾಜಕೀಯಕ್ಕೆ ಸಿಕ್ಕಿ ನರಳಿದ್ದರೂ, ಮುಂದೊಂದು ಅದೇ ಚಿತ್ರೋದ್ಯಮದ ನಾಯಕತ್ವವನ್ನು ಹೊತ್ತುಕೊಳ್ಳುವಷ್ಟು ಬೆಳೆದಿದ್ದು ವಿಷ್ಣು ಅವರ ಸಾಧನೆ. ನಾಯಕತ್ವದ ಜವಬ್ದಾರಿ ಹೊತ್ತುಕೊಳ್ಳಿ ಎಂದಾಗ ವಿಷ್ಣು ನಯವಾಗಿ ತಿರಸ್ಕರಿಸಿದ್ದರು. ಅದಕ್ಕೆ ಕಾರಣವೂ ಇಲ್ಲದಿಲ್ಲ. (ಅವರ ಆತ್ಮೀಯ ಮಿತ್ರ ಅಂಬರೀಷ್ ಇದ್ದರೆನ್ನಿ ಅದರ ಹೊರತಾಗಿ ಇನ್ನೂ ಹಲವು..! ).

ಅವರೊಬ್ಬ ಪರಿಪೂರ್ಣ ನಟ. ಖಂಡಿತ ಈ ಮಾತು ಅತಿಶಯೋಕ್ತಿ ಅಲ್ಲ. ತಮ್ಮ ಇತಿ ಮಿತಿಗಳನ್ನು ಅವರು ಚೆನ್ನಾಗಿ ತಿಳಿದಿದ್ದರು. ಅವರು ಚೆನ್ನಾಗಿ ಹಾಡದಿದ್ದರೂ, ಅವರು ಹಾಡಿರುವ ಹಾಡುಗಳು ಜನಪ್ರಿಯವಾಗಿದ್ದವು. (ಪ್ರತೀ ಬಾರಿ ನಾನು ಅಭಿಮಾನಿಗಳಿಗಾಗಿ ಹಾಡುತ್ತಿರುವುದಾಗಿ ವಿಷ್ಣು ಹೇಳುತ್ತಿದ್ದರು). ಚಿತ್ರಗಳಲ್ಲಿ ನೃತ್ಯ ಮಾಡಲು ಬರದಿರುವುದು ಅವರ ಬಹು ದೊಡ್ಡ ಮಿತಿಯಾಗಿತ್ತು. ನೀವು ನೋಡಿ, ಅವರ ಚಿತ್ರಗಳಲ್ಲಿ ನೃತ್ಯ ಸನ್ನಿವೆಶಗಳು ಇದ್ದುದು ಬಹಳ ಕಡಿಮೆ. ಆಗಿನ ಕಾಲದಲ್ಲಿ ಚಲನಚಿತ್ರಗಳಲ್ಲಿ ನೃತ್ಯಕ್ಕೆ ಹೆಚ್ಚು ಪ್ರಧಾನ್ಯತೆ ಇರಲಿಲ್ಲ. ಕನ್ನಡ ಸೇರಿದಂತೆ ಯಾವುದೇ ಚಿತ್ರರಂಗದ ಹಿರಿಯ ನಟರ ಚಿತ್ರಗಳನ್ನು ವೀಕ್ಷಿಸಿ. ಅಲ್ಲಿ ನೃತ್ಯಗಳೇ ಇಲ್ಲ. ಇದ್ದರೂ ಕಡಿಮೆ ಪ್ರಮಾಣದಲ್ಲಿ. ಆ ಕಾಲದಲ್ಲಿ ಮಹತ್ವ ಇದ್ದುದು ಅಭಿನಯಕ್ಕೆ ಮಾತ್ರ. ಅದರ ಹೊರತಾಗಿ ಅವರು ಪ್ರಾಯಶಃ ಚಲನಚಿತ್ರದಲ್ಲಿ ನಟನೆಗೆ ಬೇಕಾದ ಎಲ್ಲಾ ಅಂಶಗಳನ್ನು ಕರಗತಮಾಡಿಕೊಂಡಿದ್ದರು.

ಯಾಕೋ ಏನೋ ಅವರು ರಾಜಕೀಯದತ್ತ ಸುಳಿಯಲಿಲ್ಲ, ತಮ್ಮ ಸುತ್ತ ಅದು ಸುಳಿಯಲು ಯತ್ನಿಸಿದರೂ, ಸುತ್ತಲೂ ಬಲವಾದ ಬೇಲಿ ಹಾಕಿ ಅದರ ಸುಳಿವುವಿಕೆಯನ್ನು ತಡೆದರು. ಹಲವು ಪಕ್ಷಗಳು ರಾಜಕೀಯ ಅಖಾಡಕ್ಕೆ ಆಹ್ವಾನಿಸಿದರು. ಅವರಿಗೆ ವಿಷ್ಣು ನೀಡಿದ್ದು ನಗು ಮುಖದ ನಿರಾಕರಣೆ. ಈ ಕಾರಣಕ್ಕಾಗಿಯೇ ಅವರು ಎಲ್ಲರಿಗೂ ಇನ್ನಷ್ಟು ಇಷ್ಟವಾದದ್ದು. ಗೆಳೆಯ ಅಂಬಿಗಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದರೂ ಅಲ್ಲಿ ಸ್ನೇಹ ಬಿಟ್ಟು ರಾಜಕೀಯದ ವಾಸನೆ ಇರಲಿಲ್ಲ. ಗೆಳೆಯನ ಹೆಸರು ಹೇಳಿದರೇ ಹೊರತು, ಪಕ್ಷದ ಹೆಸರು ಹೇಳಲಿಲ್ಲ.

ಅವರ ಬಗ್ಗೆ ಬರೆಯ ಹೊರಟರೆ ಎಷ್ಟೂ ಬರೆಯಬಹುದು..... ಇನ್ನು ಬರೆಯಬೇಕು ಅನ್ನಿಸುತ್ತಿದೆ. ಮನಸ್ಸು ಭಾವುಕವಾದಾಗ ಮಾತು ಬರುವುದಿಲ್ಲ ಎಂದು ಹೇಳುತ್ತಾರೆ. ನನಗ್ಯಾಕೋ ಬರೆಯಲು ಕೈ ಮುಂದೆ ಹೋಗುತ್ತಿಲ್ಲ...

’ಕೆಲವು ವರ್ಷಗಳ ಹಿಂದೆ ವಿಷ್ಣು ನನಗೆ ಫೋನ್ ಮಾಡಿದ್ದರು. ಯಾಕೆ ಬಾಲು, ಇಲ್ಲಿ ಕಾಣಿಸ್ತಾ ಇಲ್ಲ, ಭಾರಿ ಬ್ಯುಸಿ ಅಂತೆ ನೀವು? ಅಂತ ಕೇಳಿದರು. ಹೀಗೆ ಹೀಗೆ(.....) ಅಂದೆ. ಏನೂ ಮಾತಾಡಬೇಡಿ. ನನ್ನ ಎಲ್ಲಾ ಚಿತ್ರಗಳಲ್ಲಿ ನೀವು ಹಾಡಬೇಕು. ನಿರ್ಮಾಪಕರೊಂದಿಗೆ ಒಪ್ಪಂದ (ಅಗ್ರಿಮೆಂಟ್) ಮಾಡುವಾಗಲೇ ನನ್ನ ಪಾತ್ರಕ್ಕೆ ಎಸ್.ಪಿ ಬಾಲಸುಬ್ರಮಣ್ಯಂ ಅವರಿಂದ ಹಾಡಿಸಬೇಕು ಎಂಬ ಷರತ್ತನ್ನು ಹಾಕುತ್ತೇನೆ. ನೀವು ಹಾಡಿದರೆ ಬಳಿಕ ನನಗಿರುವ ಕೆಲಸ ಶೇ ೨೫ರಷ್ಟು ಮಾತ್ರ ಅಂತ ವಿಷ್ಣು ಹೇಳಿದ್ದರು. ಪ್ರಾಯಶಃ ವಿಷ್ಣು ಅವರ ಹಾಡುಗಳಲ್ಲಿ ಶೇ ೯೯ ರಷ್ಟು ಹಾಡುಗಳನ್ನು ನಾನೇ ಹಾಡಿದ್ದೇನೆ. ಅಗ್ರಿಮೆಂಟ್‌ನಲ್ಲಿ ನನ್ನ ಪಾತ್ರಕ್ಕೆ ನನ್ನಿಂದಲೇ ಹಾಡಿಸಬೇಕು ಎಂದು ಷರತ್ತು ಹಾಕಿದ ಏಕೈಕ ಕಲಾವಿದ ವಿಷ್ಣವರ್ಧನ್. ಜೀವನದಲ್ಲಿ ನನಗೇ ಎರಡನೇ ಸಲ ಬಹು ದೊಡ್ಡ ಆಘಾತ ಆಗಿದ್ದು, ವಿಷ್ಣುವರ್ಧನ್ ಅವರು ಅಸ್ತಂಗತರಾಗಿದ್ದು ಎರಡನೇ ಆಘಾತ. ಈ ಹಿಂದೆ ನನ್ನ ಅಣ್ಣ ಮೃತಪಟ್ಟಾಗ ಮೊದಲ ಬಾರಿ ನನಗೆ ಭಾರಿ ಆಘಾತವಾಗಿತ್ತು. ವಿಷ್ಣು ಅವರು ನನ್ನ ಸಹೋದರನಂತೆ. ಹೀ ಈಸ್ ಎ ವಂಡರ್‌ಫುಲ್ ಹ್ಯೂಮನ್ ಬೀಯಿಂಗ್ ’ ಅಂತ ಹೇಳಿ ಎಸ್‌ಪಿಬಿ ಅದೇ ಕಾರ್ಯಕ್ರಮದಲ್ಲಿ ಕಂಬನಿ ಮಿಡಿದ್ದರು.

ಎಸ್‌ಪಿ ಅವರ ಮಾತನ್ನು ಕೇಳಿ ಮತ್ತೊಮ್ಮೆ ನನ್ನ ಕಣ್ಣು ತೋಯ್ದಿತು. ವಿಷ್ಣು ಅವರ ಸಾವು ಎಸ್‌ಪಿ ಅವರಿಗೆ ಮಾತ್ರವಲ್ಲ. ನನ್ನಂಥ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಅವರು ಇಲ್ಲ ಅನ್ನೋದು ಎಷ್ಟು ಸತ್ಯನೋ ಅವರ ನೆನಪು ಶಾಶ್ವತ ಅನ್ನೋದು ಅಷ್ಟೇ ಸತ್ಯ.

ನಮ್ಮನ್ನಗಲಿದ ಶ್ರೇಷ್ಠ ಕಲಾವಿದನಿಗೆ ವಿಳಂಬವಾಗಿ ನನ್ನದೊಂದು ಪುಟ್ಟ ಅಕ್ಷರನಮನ...

ಶನಿವಾರ, ಅಕ್ಟೋಬರ್ 10, 2009

ಹೀಗೊಂದು ಗೆಳೆಯನ ಮಿಂಚಂಚೆ....

ತ್ಮೀಯ ಗೆಳೆಯನೊಬ್ಬ ಮಿಂಚಂಚೆ ಕಳುಹಿಸಿದ್ದ. ಚಿತ್ರ ನೋಡಿ ಅಶ್ಲೀಲ ವಾಗಿದೆಯಲ್ಲಾ ಅಂದುಕೊಂಡೆ. ಸಂಪೂರ್ಣ ಓದಿದಾಗ ಅಂತ ಭಾವನೆ ಬರಲಿಲ್ಲ. ಜಾಗೃತಿ ಮೂಡಿಸುವ ಲೇಖನ ಅಂದುಕೊಂಡೆ. ಪ್ರಸ್ತುತ ಸನ್ನಿವೇಶದಲ್ಲಿ ಅರ್ಥಗರ್ಭಿತ ಲೇಖನ ಎಂದು ನನಗನ್ನಿಸಿತು. ಇದರ ಮೂಲ ಕರ್ತೃ ಯಾರೆಂದು ಗೆಳೆಯನಲ್ಲಿ ವಿಚಾರಿಸಿದೆ. ಅವನಿಗೂ ಮಾಹಿತಿಇಲ್ಲ. ಯಾರಾದರೂ ಬರೆಯಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ಈ ಲೇಖನವನ್ನು ಇಲ್ಲಿ ಪ್ರಕಟಿಸಿದ್ದೇನೆ. ನೀವೂ ಓದಿ...


ಹರೆಯದ ಕೊರಳಿಗೆ 'MMS' ಪಾಶ


ಮಾಯಾ ಹದಿಹರೆಯದ, ಕನಸು ಕಂಗಳ ಹುಡುಗಿ. ಗೆಳೆಯ ರಾಕೇಶ್ ಆಕೆಯ ಪಾಲಿಗೆ ಎಲ್ಲವೂ ಹೌದು. ಅರಳುಗಣ್ಣಿನ ಆ ಪೋರಿಯ ಕನಸುಗಳೆಲ್ಲಾ ಮೂರ್ತರೂಪ ಧರಿಸಿ ಬಂದಂತೆ ರಾಕೇಶ್ ಆಕೆಯ ಬದುಕನ್ನು ಪ್ರವೇಶಿಸಿದ್ದ. ತನ್ನ ಪ್ರೀತಿಯ ಇನಿಯನಿಗೋಸ್ಕರ ಏನು ಮಾಡಲೂ ಮಾಯಾ ತಯಾರಿದ್ದಳು. ಹೆತ್ತ ಅಪ್ಪ-ಅಮ್ಮನಿಗೇ ಸುಳ್ಳು ಹೇಳಲು ಹಿಂಜರಿಯಲಿಲ್ಲ, ಅವರನ್ನು ಎದುರು ಹಾಕಿಕೊಳ್ಳಲೂ ಹೆದರಲಿಲ್ಲ. ಆದರೆ ವಾಸ್ತವ ಬದುಕು ಕನಸಿನಂತಲ್ಲ ತಾನೇ? ತನ್ನ ಕನಸುಗಳಲ್ಲಿಯೇ ತೇಲಿ ಹೋಗಿದ್ದ ಆ ಮುಗ್ಧ ಹುಡುಗಿಯ ಎದುರು ವಾಸ್ತವದ ಕರಾಳತೆ ಧುತ್ತನೇ ವಿಶ್ವರೂಪ ಧರಿಸಿ ನಿಂತುಬಿಟ್ಟರೆ ಅದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?

ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ, ಹೆತ್ತವರಿಗಿಂತ ಹೆಚ್ಚು ನಂಬಿದ ತನ್ನ ಗೆಳೆಯನ ಇನ್ನೊಂದು ಮುಖ ನೋಡುವ ಹೊತ್ತಿಗೆ ಎಲ್ಲವೂ ಕೈ ಮೀರಿತ್ತು. ತಾನು ಪ್ರಿಯಕರನೊಂದಿಗೆ ಕಳೆದ ಆತ್ಮೀಯ, ಖಾಸಗಿ ಕ್ಷಣಗಳು ಮೊಬೈಲ್ ಫೋನ್ ಕ್ಯಾಮರಾಗಳಲ್ಲಿ ದಾಖಲಾಗಿದೆ ಎಂಬುದನ್ನು ಆ ಹುಡುಗಿ ಹೇಗೆ ತಾನೆ ಊಹಿಸಿಯಾಳು? ಪ್ರೀತಿಯ ಭ್ರಮೆಯ ಗುಳ್ಳೆ ಒಡೆಯಿತು. ರಾತ್ರಿ ಬೆಳಗಾಗುವುದರಲ್ಲಿ ಇನಿಯ ರಕ್ಕಸನಾಗಿ ಬದಲಾಗಿದ್ದ. ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದ ದೃಶ್ಯಗಳೇ ಸಾಕಾಗಿತ್ತು ಆತನಿಗೆ ಮಾಯಾಳನ್ನು ಹುರಿದು ಮುಕ್ಕಲು. ತನ್ನ ದುಷ್ಟ ಸ್ನೇಹಿತರ ದೈಹಿಕ ಆಸೆಯನ್ನು ತೀರಿಸದಿದ್ದರೆ ಎಂಎಂಎಸ್ ತುಣುಕು ಜಗಜ್ಜಾಹೀರಾಗುವುದು ಖಚಿತ ಎಂದು ರಾಕೇಶ್ ಬೆದರಿಸತೊಡಗಿದ. ತಾನು ಬಿದ್ದಿರುವ ಪ್ರಪಾತದ ಆಳ-ಅಗಲ ಅರ್ಥವಾಗುವುದರೊಳಗೆ ಮಾಯಾಳ ಮಾನ ಮಾರುಕಟ್ಟೆಯಲ್ಲಿ ಹರಾಜಾಗಿತ್ತು.

ಮಾಯಾಳಂತಹ ಮುಗ್ಧ ಬಾಲಕಿಯರ ದುರಂತಗಾಥೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಳ್ಳಿ ಇರಲಿ, ಪಟ್ಟಣಗಳಿರಲಿ ಕೇಳಿ ಬರುತ್ತಿರುವ ಕಥೆ ಮಾತ್ರ ಒಂದೇ. ದೆಹಲಿ, ಮುಂಬೈ, ಅಹಮದಾಬಾದ್, ಕಟಕ್ ಹಾಗೂ ಆಲಪುಳ ನಗರಗಳು ಈಗಾಗಲೇ ಈ ರೀತಿಯ ಹಲವು ನಿದರ್ಶನಗಳಿಗೆ ಸಾಕ್ಷಿಯಾಗಿವೆ. ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಹದಿಹರೆಯದವರ ಮುಕ್ತ ಮನೋಭಾವವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನರರೂಪದ ರಾಕ್ಷಸರು 'ಕನಸಿನ ಲೋಕದ ರಾಜಕುಮಾರರ' ರೂಪದಲ್ಲಿ ಮುಗ್ಧ ಹುಡುಗಿಯರ ಬೇಟೆಯಲ್ಲಿ ತೊಡಗಿದ್ದಾರೆ. ಲೈಂಗಿಕ ದೌರ್ಜನ್ಯ, ಬೆದರಿಕೆ ಕಥನಗಳು ಅಡೆ-ತಡೆ ಇಲ್ಲದೇ ಸಾಗುತ್ತಿವೆ.

ಆಧುನಿಕತೆಯ ವೈಭೋಗ

ದಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುತ್ತಿರುವ ಭಾರತ ಹದಿಹರೆಯದವರ ಪಾಲಿಗೆ, ಅವರೊಳಗಿನ ಸ್ವೇಚ್ಛಾಚಾರಿ ಮನೋಭಾವದ ಅಭಿವ್ಯಕ್ತಿಗೆ ಫಲವತ್ತಾದ ರಾಷ್ಟ್ರ. ವಿರುದ್ಧ ಲಿಂಗಿಗಳೊಂದಿಗಿನ ಒಡನಾಟಕ್ಕೆ ಈಗ ಯಾವ ಅಡೆ-ತಡೆಯೂ ಇಲ್ಲ. ತಮ್ಮೊಳಗಿನ ಆಸೆ, ಆಕಾಂಕ್ಷೆಗಳ ಅಭಿವ್ಯಕ್ತಿಗೆ ಸಂಪ್ರದಾಯಗಳ ಹಂಗಿಲ್ಲ. ಬದುಕನ್ನು ಅದರ ಸಮಗ್ರತೆಯಲ್ಲಿ ಸವಿಯುವ ಉತ್ಸಾಹಕ್ಕೆ ಲಂಗು-ಲಗಾಮಿಲ್ಲ. ಯೌವನದ ಈ ತಹತಹಿಕೆಯ ಬೆನ್ನಿಗೇ ಕಹಿ ಅನುಭವಗಳ ಸರಮಾಲೆಯೂ ಇದೆ. ಅವು ಈಗ ವಿಭಿನ್ನ ರೂಪಗಳಲ್ಲಿ ಪ್ರಕಟಗೊಂಡು ನಾಗರಿಕ ಸಮಾಜದ ನಿದ್ದೆಗೆಡಿಸುತ್ತಿವೆ. ಹೀಗೆ ಯೌವನದ ರಭಸಕ್ಕೆ ಸಿಲುಕಿ ದುರಂತ ಅಂತ್ಯ ಕಂಡ ಮುಗ್ಧ ಬದುಕುಗಳಲ್ಲಿ ಕಟಕ್‌ನ ಅಸೀಮಾ ಮೊಹಾಂತಿ ಕೂಡ ಒಬ್ಬಳು.

ಅಸೀಮಾ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದ ಪ್ರತಿಭಾನ್ವಿತ ವಿದ್ಯಾರ್ಥಿನಿ. ಆಕೆಯ ನಂಬಿಕೆದ್ರೋಹಿ ಪ್ರಿಯಕರ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ದೃಶ್ಯಗಳನ್ನು ಹಣಕ್ಕೋಸ್ಕರ ಮಾರಾಟ ಮಾಡುವುದರೊಂದಿಗೆ ಅಸೀಮಾಳ ದುರಂತ ಅಂತ್ಯದ ಪ್ರಥಮ ಅಧ್ಯಾಯ ಪ್ರಾರಂಭವಾಗುತ್ತದೆ. ತನ್ನ ಗೆಳೆಯನ ಮೇಲಿಟ್ಟಿದ್ದ ಅಪರಿಮಿತ ನಂಬಿಕೆಯೇ ಅಸೀಮಾಳ ಬದುಕಿಗೆ ಎರವಾಯಿತು. ತಾನು ಆರಾಧಿಸಿದ ವ್ಯಕ್ತಿ ಒಬ್ಬ 'ತಲೆ ಹಿಡುಕ' ಎಂಬ ಸಂಗತಿ ಅವಳಿಗೆ ತಿಳಿದೇ ಇರಲಿಲ್ಲ. ಆತನ ಕಸುಬೇ ಅಂಥದ್ದು. ಹೆಣ್ಣಿನ ಮನಸ್ಸು ಗೆಲ್ಲುವುದು, ದೈಹಿಕವಾಗಿ ಬಳಸಿಕೊಳ್ಳುವುದು, ಸಾಧ್ಯವಾದರೆ ಆ ಎಲ್ಲವನ್ನೂ ಚಿತ್ರೀಕರಿಸಿ ಸಿ.ಡಿ. ರೂಪದಲ್ಲಿ ಮಾರಾಟ ಮಾಡುವುದು ಆತನಿಗೆ ಕರತಲಾಮಲಕ. ದೈಹಿಕ ಅವಮಾನದ ಜೊತೆಗೆ ಮಾನಸಿಕ ಹಿಂಸೆಯನ್ನೂ ಅನುಭವಿಸಲು ಸಿದ್ಧಳಿಲ್ಲದ ಅಸೀಮಾ ಆತ್ಮಹತ್ಯೆಗೆ ಶರಣಾದಳು. ಸಮಾಜದ ಕಣ್ಣಲ್ಲಿ ಹೇಸಿಗೆಯಾಗಿ ಬದುಕುವುದಕ್ಕಿಂತ ಸಾವೇ ಅಸೀಮಾಳಿಗೆ ಆಕರ್ಷಕವಾಗಿ ಕಂಡಿರಬೇಕು.

ಅಸೀಮಾಳ ಪ್ರಕರಣದಿಂದ ಇಡೀ ಒರಿಸ್ಸಾ ರಾಜ್ಯವೇ ತಲ್ಲಣಗೊಂಡಿತ್ತು. ಅಸೀಮಾಳ ಅಪ್ಪ ನೀಡಿದ ದೂರಿನ ಅನ್ವಯ ಕಟಕ್ ನಗರದ ಪೊಲೀಸರು ಅಸೀಮಾಳ ಸ್ನೇಹಿತ ಅಸ್ತಾರಂಗ್ ಸಾಹು ಅಲಿಯಾಸ್ ಪಿಣುವ ಹಾಗೂ ಆತನ ಜೊತೆಗಾರ ಸುಬ್ರತ್ ಪ್ರಧಾನ್ ಅಲಿಯಾಸ್ ಬಾಪಿ ಇಬ್ಬರನ್ನೂ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಮಾರಾಟ ಪ್ರಕರಣದ ಅಡಿಯಲ್ಲಿ ಬಂಧಿಸಿ, ತನಿಖೆಗೊಳಪಡಿಸಿದರು. ಈ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೂ ಐದು ಮಂದಿ ಈಗ ತಲೆಮರೆಸಿಕೊಂಡಿದ್ದಾರೆ. ಪಿಣುವ ಹಾಗೂ ಆತನ ಸಹಚರರು ಕೋಣೆಯಲ್ಲಿ ಕ್ಯಾiರಾಗಳನ್ನು ಅಡಗಿಸಿಟ್ಟು ಅಸೀಮಾಳಿಗೆ ತಿಳಿಯದಂತೆ ಅಲ್ಲಿ ನಡೆಯುವ ರಾಸಲೀಲೆಗಳನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ.

ನಮ್ಮಲ್ಲಿ ಬೇರು ಬಿಡುತ್ತಿರುವ ಈ ಎಂಎಂಎಸ್ ಸಂಸ್ಕೃತಿ ಮೊಟ್ಟ ಮೊದಲು ಬೆಳಕಿಗೆ ಬಂದದ್ದು ದೆಹಲಿ ಪಬ್ಲಿಕ್ ಸ್ಕೂಲ್ ಪ್ರಕರಣವೊಂದರಲ್ಲಿ. ಅಂದಿನಿಂದ ಇಂದಿನವರೆಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಮೊಬೈಲ್ ಫೋನ್‌ಗಳು, ಇಂಟರ್‌ನೆಟ್‌ಗಳ ಮೂಲಕ ಈ ಪಿಡುಗು ಸಾಂಕ್ರಾಮಿಕ ರೋಗದಂತೆ ವ್ಯಾಪಿಸುತ್ತಿದೆ. ಇದಕ್ಕೆ ಯಾರನ್ನು ಹೊಣೆಯಾಗಿಸುವುದು? ಬಹುತೇಕ ಪೋಷಕರು ಹಾಗೂ ಆಪ್ತ ಸಮಾಲೋಚಕರು ಹೇಳುವಂತೆ ಇಂಥ ಸೂಕ್ಷ್ಮ ವಿಚಾರಗಳಲ್ಲಿ ಹುಡುಗಿಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. "ಇಂದಿನ ಯುವ ಸಮುದಾಯದಲ್ಲಿ ಈ ಎಂಎಂಎಸ್ ಸಂಸ್ಕೃತಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಬಗೆಯ ಗೋಮುಖ ವ್ಯಾಘ್ರಗಳು ಎಲ್ಲಡೆಯೂ ಇವೆ. ಆದ್ದರಿಂದ ಒಬ್ಬ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸುವ ಮೊದಲು ಹುಡುಗಿಯರು ಸಾಕಷ್ಟು ಎಚ್ಚರಿಕೆ ವಹಿಸಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅಹಮದಾಬಾದ್ ಮೂಲದ ಮನಶ್ಯಾಸ್ತ್ರಜ್ಞ ಡಾ. ಹನ್ಸಾಲ್ ಭಚೇಚ್.

"ಇಂದಿನ ಯುವ ಜನಾಂಗದಲ್ಲಿ ಲೈಂಗಿಕತೆಯ ಕುರಿತ ಮಡಿವಂತಿಕೆ ಕಡಿಮೆಯಾಗುತ್ತಿದೆ. ದುರಂತವೆಂದರೆ, ಹುಡುಗಿಯರೇ ಈ ಪ್ರವೃತ್ತಿಯ ಮೊದಲ ಬಲಿಪಶುಗಳು" ಎನ್ನುತ್ತಾರೆ ಒರಿಸ್ಸಾದ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲ ಪ್ರೊ. ರಬೀಂದ್ರ ಕುಮಾರ್.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? "ಒಬ್ಬ ಪೋಷಕನಾಗಿ ನಾನು ಹೇಳುವುದೆಂದರೆ, ಅಂತಹ ಅವಘಡಗಳಿಗೆ ಹುಡುಗಿಯೇ ಹೊಣೆ. ಈ ಆಧುನಿಕ ಸಮಾಜದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಎಲ್ಲಾ ಹಕ್ಕು ಹುಡುಗಿಯರಿಗಿದೆ. ಆದರೆ, ಪ್ರೀತಿಯ ನೆಪದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೈಹಿಕ ಸಂಬಂಧವಿಟ್ಟುಕೊಳ್ಳುವುದು ಆರೋಗ್ಯಕರ ಪ್ರವೃತ್ತಿಯಲ್ಲ. ಅಂತಹ ಬೇಜವಾಬ್ದಾರಿ ನಡವಳಿಕೆ ಇಡೀ ಬದುಕನ್ನೇ ನಾಶಗೊಳಿಸಬಹುದು" ಎಂದು ಕಿವಿಮಾತು ಹೇಳುತ್ತಾರೆ ರಬೀಂದ್ರ ಕುಮಾರ್.

ಆದರೆ ಈ ಮೇಲಿನ ಮಾತುಗಳಿಗೆ ನಮ್ರತಾ (ಹೆಸರು ಬದಲಾಯಿಸಲಾಗಿದೆ) ಪ್ರಕರಣ ವ್ಯತಿರಿಕ್ತವಾಗಿದೆ. ಗುಜರಾತ್‌ನ ಮೆಹಸಾನ ಜಿಲ್ಲೆಯ ಈ ಹುಡುಗಿ ವಿಷ್ಣು ಚೌಧುರಿ ಎಂಬ ಯುವಕನ ಮೋಹಪಾಶಕ್ಕೆ ಸಿಲುಕಿದಳು. ಒಮ್ಮೆ ಆಕೆಯನ್ನು ಹೊಟೇಲ್ ರೂಮಿಗೆ ಕರೆದೊಯ್ದ ವಿಷ್ಣು ಆಕೆಯ ಮೇಲೆ ಬಲಾತ್ಕಾರವೆಸಗಿದ. ತನ್ನ ಹೀನ ಕೃತ್ಯವನ್ನು ಕ್ಯಾಮರಾದಲ್ಲೂ ಸೆರೆ ಹಿಡಿದು ನಮ್ರತಾಳನ್ನು ಬ್ಲ್ಯಾಕ್‌ಮೇಲ್ ಮಾಡತೊಡಗಿದ. ತೀವ್ರ ಆಘಾತಕ್ಕೊಳಗಾದ ನಮ್ರತಾ ಈ ಕುರಿತು ಪೊಲೀಸರಿಗೆ ದೂರು ನೀಡಿದಳು. ಇದರಿಂದ ಕೆರಳಿದ ವಿಷ್ಣು ಆ ಎಂಎಂಎಸ್ ತುಣುಕುಗಳನ್ನು ಬಹಿರಂಗಗೊಳಿಸಿ ಸೇಡು ತೀರಿಸಿಕೊಂಡ.

ನಮ್ಮಲ್ಲಿರುವ ಕೌಟುಂಬಿಕ ಹಾಗೂ ಸಮಾಜಿಕ ಸಂದರ್ಭಗಳು ಹೇಗಿವೆ ಎಂದರೆ ಬೆಳವಣಿಗೆಯ ಹಂತದಲ್ಲಿರುವ ಹೆಣ್ಣು ಮಗಳು ತಾವು ಪ್ರೀತಿಸುವ ವ್ಯಕ್ತಿಯನ್ನು ಪೂರ್ವಾಪರ ಯೋಚಿಸದೇ ನಂಬಿ ಬಿಡುವುದೇ ಜಾಸ್ತಿ. ಆ ನಂಬಿಕೆ ಎಷ್ಟರ ಮಟ್ಟಿಗಿರುತ್ತದೆ ಎಂದರೆ ತನ್ನ ಇನಿಯನ ಎಲ್ಲಾ ಬೇಡಿಕೆಗಳಿಗೂ ಈ ಮುಗ್ಧ ಮನಸ್ಸಿನ ಹುಡುಗಿಯರು ಕಣ್ಣು ಮುಚ್ಚಿಕೊಂಡು ಒಪ್ಪಿಗೆ ನೀಡುತ್ತಾರೆ. ಅದು ಒಂದು ಹಂತದವರೆಗೆ ಆ ಹುಡುಗಿಯರಲ್ಲಿ ಸ್ವತಂತ್ರ ಭಾವನೆಯನ್ನು ಮೂಡಿಸುವುದು ನಿಜವಾದರೂ ಬಹಳಷ್ಟು ಸಂದರ್ಭಗಳಲ್ಲಿ ಈ ಹುಡುಗಿಯರು ತಮ್ಮ ಪ್ರಿಯಕರನ ಕಾಮ ಪಿಪಾಸುತನಕ್ಕೆ ಬಲಿಯಾಗುವುದೇ ಜಾಸ್ತಿ.

ಮುಂಬೈ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಪ್ರಕರಣ ಇದಕ್ಕೆ ಉತ್ತಮ ಉದಾಹರಣೆ. ಭಾಯಂದರ್‌ನ ಈ ಹುಡುಗಿ ರಿತೇಶ್ ಪಾಟೀಲ್ ಎಂಬ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿದ ಪರಾಗ್ ಮಾತ್ರೆ ಎಂಬ 'ನಾಜೂಕಯ್ಯ'ನ ಮೋಹಪಾಶಕ್ಕೆ ಸಿಲುಕಿದಾಗ ಮುಂದೇನಾಗುವುದು ಎಂಬುದರ ಪರಿವೆಯೇ ಇರಲಿಲ್ಲ.

ಪ್ರೀತಿ ಮಾಡಿದ ಅಪರಾಧಕ್ಕಾಗಿ ಆಕೆ ಮೊದಲು ತನ್ನ ಪ್ರಿಯಕರನ ಕಾಮದಾಹಕ್ಕೆ ಬಲಿಯಾಗಿದ್ದು ಸಾಲದೆಂಬಂತೆ ಆತನ ಸ್ನೇಹಿತರಿಂದಲೂ ಅತ್ಯಾಚಾರಕ್ಕೊಳಗಾಗಬೇಕಾಯಿತು. ಈ ಕರ್ಮಕಾಂಡವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದ ಪರಾಗ್ ಈ ವಿಚಾರವನ್ನು ಎಲ್ಲಿಯಾದರೂ ಬಾಯಿ ಬಿಟ್ಟರೆ ಎಂಎಂಎಸ್‌ನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದ. ಕ್ರಮೇಣ ಆ ಎಂಎಂಎಸ್ ಪರಾಗ್‌ನ ಸಹೋದರ ಪಂಕಜ್ ಮೊಬೈಲ್‌ಗೆ ರವಾನೆಯಾಯಿತು. ಈಗ ಆ ಹುಡುಗಿಯನ್ನು ಬ್ಲ್ಯಾಕ್‌ಮೇಲ್ ಮಾಡುವ ಪಾಳಿ ಪಂಕಜ್‌ನದ್ದು.

ಆಕೆಯನ್ನು ಅದೇ ಹೊಟೇಲ್‌ಗೆ ಬರಹೇಳಲಾಯಿತು. ಎಲ್ಲಿ ಎಂಎಂಎಸ್‌ಗಳು ಬಹಿರಂಗಗೊಂಡು ತನ್ನ ಮಾನ ಹರಾಜಾಗುತ್ತದೋ ಎಂದು ಹೆದರುತ್ತಾ ಅಲ್ಲಿಗೆ ಹೋದ ಹುಡುಗಿ ಮತ್ತೊಮ್ಮೆ ಪಂಕಜ್ ಹಾಗೂ ಆತನ ಸ್ನೇಹಿತರ ಕಾಮದಾಹಕ್ಕೆ ಬಳಕೆಯಾಗಬೇಕಾಯಿತು. ಹೀಗೆ ಸರಣಿ ಅತ್ಯಾಚಾರಗಳಿಂದ ಮಾನಸಿಕವಾಗಿ ಕುಗ್ಗಿ ಹೋದ ಹುಡುಗಿ ಅಂತಿಮವಾಗಿ ಕುಟುಂಬದವರಲ್ಲಿ ತನ್ನ ಅಳಲು ತೋಡಿಕೊಂಡಳು. ಈ ಪ್ರಕರಣ ಮಿರಾ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಖ್ಯಾತ ಲೈಂಗಿಕ ವಿಜ್ಞಾನಿ (ಸೆಕ್ಸಾಲಜಿಸ್ಟ್) ಡಾ. ಪರಸ್ ಶಾ ಪ್ರಕಾರ ಇಂದು ಹುಡುಗಿಯರು ತುಂಬಾ ಸುಲಭವಾಗಿ ಕಾಮಪಿಪಾಸುಗಳ ಬಲೆಗೆ ಬೀಳುತ್ತಾರೆ. "ಎಂಎಂಎಸ್ ಸೌಲಭ್ಯವನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಹೇಗೆ ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ನಿದರ್ಶನ. ಇಂತಹ ಕೃತ್ಯಗಳಿಗೆ ಕೈಹಾಕುವ ಹುಡುಗರಿಗೆ ಹಣ ಸಂಪಾದನೆಯೊಂದೇ ಮುಖ್ಯ ಉದ್ದೇಶವಾಗಿರುವುದಿಲ್ಲ. ಪರಸ್ಪರ ಒಪ್ಪಿಗೆಯಿಂದಲೂ ಇದು ನಡೆಯುತ್ತದೆ. ಹುಡುಗಿಯರು ತಮ್ಮ ಗೆಳೆಯನ ಮೇಲೆ ಕುರುಡು ನಂಬಿಕೆ ಇಟ್ಟಾಗ ಇವೆಲ್ಲಾ ಘಟಿಸುತ್ತವೆ" ಎನ್ನುತ್ತಾರೆ ಡಾ. ಪರಸ್ ಶಾ.

ಎಂಎಂಎಸ್ ಬಲಿಪಶು ಅಸೀಮಾ ಮೊಹಾಂತಿ ಆತ್ಮಹತ್ಯೆ ಮಾಡಿಕೊಂಡ ನಂತರ ಅದೇ ರೀತಿಯ ಮತ್ತೊಂದು ಪ್ರಕರಣ ಕಟಕ್ ಜಿಲ್ಲೆಯಲ್ಲಿ ೨೦೦೮ ಅಕ್ಟೋಬರ್ ೧೫ರಂದು ಬೆಳಕಿಗೆ ಬಂದಿತ್ತು. ನಿಯಾಲಿ ಗ್ರಾಮದ ಅಮಿನಾ (ಹೆಸರು ಬದಲಿಸಲಾಗಿದೆ) ಕಲಪಾಂಚಣ ಗ್ರಾಮದ ಶೇಖ್ ಅಬ್ದುಲ್ ಎಂಬ ವ್ಯಕ್ತಿಯೊಬ್ಬನನ್ನು ಪ್ರೀತಿಸಿದ್ದಳು. ಎಲ್ಲಾ ತಲೆಮಾಸಿದ ಹುಡುಗರಂತೆ ಶೇಖ್ ಅಬ್ದಲ್ಲಾ ಕೂಡ ತಮ್ಮಿಬ್ಬರ ನಡುವಿನ ರಾಸಲೀಲೆಗಳನ್ನು ಸಿ.ಡಿ ಮಾಡಿ 'ಓiಚಿಟiಘಿಘಿಘಿ' ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ. ಅಸೀಮಾಳಂತೆ ದುಡುಕಿನ ನಿರ್ಧಾರ ಕೈಗೊಳ್ಳದ ಅಮೀನ ಮುಂದಿನ ಪರಿಣಾಮಗಳನ್ನು ಧೈರ್ಯದಿಂದ ಎದುರಿಸಿದಳು. ಆದರೆ ಆ ಧೈರ್ಯ ಎಷ್ಟು ಜನರಿಗಿದ್ದೀತು?

ಈ ವರ್ಷದ ಪ್ರಾರಂಭದಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆ ನಾಗರಿಕರಲ್ಲಿ ಆತಂಕದ ಅಲೆ ಸೃಷ್ಟಿಸಿತ್ತು. ಆಲಪುಳ ಜಿಲ್ಲೆಯ ಅಂಬಲಪುಳ ನಗರದ ಶಾಲೆಯೊಂದರ ಮೂವರು ಹುಡುಗಿಯರು ತರಗತಿಯ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದ್ದಂತೆಯೇ ಒಂದೊಂದೇ ಸಂಗತಿ ಹೊರ ಬೀಳತೊಡಗಿದ್ದವು.

ತಮ್ಮ ಖಾಸಗಿ ಡೈರಿಯಲ್ಲಿ ಆ ಹುಡುಗಿಯರು ತಮ್ಮದೇ ತರಗತಿಯ ಕೆಲವು ಹುಡುಗರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು ಎಂಬುದನ್ನು ಬರೆದುಕೊಂಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ಆ ಹುಡುಗಿಯರು ದೈಹಿಕ ಸಂಪರ್ಕಕ್ಕೆ ಒಳಗಾಗಿದ್ದು ಸಾಬೀತಾಗಿತ್ತು. ಆ ಡೈರಿಗಳನ್ನು ಆಧರಿಸಿಯೇ ಇಂದು ತನಿಖೆ ನಡೆಯುತ್ತಿದೆ.

ವಿಷಯ ಅಷ್ಟೇ ಆಗಿದ್ದರೆ ಇದ್ಯಾವುದೋ ವಿಫಲ ಪ್ರೇಮದ ಕತೆ ಎಂದು ಸುಮ್ಮನಿದ್ದುಬಿಡಬಹುದು. ಆದರೆ, ಆ ನಂತರ ಬೆಳಕಿಗೆ ಬಂದ ಕೆಲವು ಸಂಗತಿಗಳು ನಿಜಕ್ಕೂ ಕಳವಳಕಾರಿಯಾಗಿವೆ. ಪ್ರೀತಿಯ ನಾಟಕವಾಡಿದ್ದ ಹುಡುಗರು ಹುಡುಗಿಯರ ಗಮನಕ್ಕೆ ಬಾರದಂತೆ ಅವರ ನಡುವಿನ ಖಾಸಗಿ ಕ್ಷಣಗಳನ್ನು ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದರು. ಅದನ್ನು ಬಳಸಿಕೊಂಡೇ ಆ ಹುಡುಗಿಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಮಾನಕ್ಕೆ ಅಂಜುವ ಮಧ್ಯಮ ವರ್ಗದಿಂದ ಬಂದ ಈ ಹುಡುಗಿಯರು ಆತ್ಮಹತ್ಯೆಗೆ ಮೊರೆ ಹೋಗುವ ಮೂಲಕ ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದರು. ಈ ಘಟನೆಯಿಂದ ಇಡೀ ಕೇರಳವೇ ತತ್ತರಿಸಿತ್ತು. ಮಾತ್ರವಲ್ಲ ಹೆಣ್ಣು ಮಕ್ಕಳ ಪೋಷಕರು ಆತಂಕದಿಂದ ನಿದ್ದೆಗೆಡುವಂತಾಗಿತ್ತು.

ಬಹುತೇಕ ಮಂದಿ ಈ ಎಲ್ಲಾ ಸಮಸ್ಯೆಗಳಿಗೆ ಹುಡುಗಿಯರ ಪೋಷಕರ ಕಡೆ ಬೊಟ್ಟು ಮಾಡುತ್ತಾರೆ. "ಮೊದಲನೆಯದಾಗಿ ಪ್ರತಿ ತಂದೆ-ತಾಯಿಯೂ ತಮ್ಮ ಹದಿಹರೆಯದ ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಆಗ ಮಕ್ಕಳಿಗೂ ತಮ್ಮ ತವಕ-ತಲ್ಲಣಗಳನ್ನು ತಂದೆ-ತಾಯಿಗಳೊಂದಿಗೆ ಹಂಚಿಕೊಳ್ಳಲು ಅವಕಾಶವಾಗುತ್ತದೆ. ಅದರಲ್ಲೂ ಇಂತಹ ಸಂದರ್ಭಗಳಲ್ಲಿ ತಾಯಿಯ ಪಾತ್ರ ಮಹತ್ವದ್ದು" ಎಂಬ ಅಭಿಪ್ರಾಯ ಬೆಂಗಳೂರಿನ ಗೃಹಿಣಿ ಉಷಾ ಕುಮಾರಿ ಅವರದ್ದು. ಅವರ ಪುತ್ರಿ ಈಗ ಪತ್ರಿಕೋದ್ಯಮ ವಿದ್ಯಾರ್ಥಿನಿ.

ಜೊತೆಗೆ ಇಂದಿನ ಯುವ ಜನಾಂಗದ ಎದುರಿಗಿರುವ ಆಯ್ಕೆಗಳು, ಅವರ ಸುತ್ತ-ಮುತ್ತಲಿನ ವಾತಾವರಣ ಉಷಾ ರೀತಿಯ ಬಹಳಷ್ಟು ಪೋಷಕರನ್ನು ಆತಂಕದ ಮಡುವಿಗೆ ತಳ್ಳಿದೆ. "ನಿಜಕ್ಕೂ ನನಗೆ ಆತಂಕವಾಗುತ್ತದೆ. ನಮ್ಮ ಖಾಸಗಿ ಕ್ಷಣಗಳನ್ನ ಅಪಹರಿಸುತ್ತಿರುವ ಮಲ್ಟಿಮೀಡಿಯಾಗಳು, ಶಾಲೆ-ಕಾಲೇಜುಗಳಲ್ಲಿ ಅವರು ಒಡನಾಡುವ ಸ್ನೇಹಿತರು, ಆರ್ಕುಟ್, ಫೇಸ್‌ಬುಕ್ ರೀತಿಯ ಅಂತರ್ಜಾಲ ತಾಣಗಳು ಎಲ್ಲವೂ ಈ ಸಮಸ್ಯೆಗೆ ಇನ್ನಷ್ಟು ತುಪ್ಪ ಸುರಿಯುತ್ತಿವೆ. ಮಕ್ಕಳ ಸ್ನೇಹಿತರ ಮೇಲೆ ಒಂದು ಕಣ್ಣಿಟ್ಟಿರುವುದು ಅತ್ಯವಶ್ಯಕ" ಎನ್ನುತ್ತಾರೆ ಉಷಾ ಕುಮಾರಿ.

ಅಹಮದಾಬಾದ್‌ನ ಹುಡುಗಿ ಬಿಜಲ್ ಜೋಷಿಗೆ ತನ್ನ ಪ್ರಿಯಕರ ಸಜಾಲ್ ಜೈನ್ ಒಬ್ಬ ವಿವಾಹಿತ ಎಂಬ ಸಂಗತಿಯೇ ತಿಳಿದಿರಲಿಲ್ಲ. ೨೦೦೩ ಡಿಸೆಂಬರ್ ೩೧ರಂದು ಹೊಸ ವರ್ಷದ ಸಂಭ್ರಮಾಚರಣೆಗೆಂದು ತನ್ನ ಗೆಳೆಯನೊಂದಿಗೆ ಹೋಗುವವರೆಗೂ ಬಿಜಲ್ ಮನದಲ್ಲಿ ತನ್ನ ಗೆಳೆಯನ ಕುರಿತು ಕಿಂಚಿತ್ತೂ ಅನುಮಾನವಿರಲಿಲ್ಲ. ಗೆಳೆಯನನ್ನು ನಂಬಿ ಸಮೀಪದ ಹೊಟೇಲ್‌ಗೆ ಹೋದ ಬಿಜಲ್ ಮೇಲೆ ಸಜಾಲ್ ಹಾಗೂ ಆತನ ಸ್ನೇಹಿತ ಪಡೆ ಅತ್ಯಂತ ಅಮಾನುಷವಾಗಿ ಅತ್ಯಾಚಾರವೆಸಗಿತು.

ಮಾತ್ರವಲ್ಲ ಚಿತ್ರ-ವಿಚಿತ್ರ ದೈಹಿಕ ಹಿಂಸೆಗಳಿಗೂ ಅವಳನ್ನು ಗುರಿ ಮಾಡಲಾಯಿತು. ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಮನನೊಂದ ಬಿಜಲ್ ೨೦೦೪ ಜನವರಿ ೭ರಂದು ಆತ್ಮಹತ್ಯೆ ಮಾಡಿಕೊಂಡಳು.

ಬೆಂಗಳೂರಿನ ನಿಮ್ಹಾನ್ಸ್‌ನ ಮನೋವೈದ್ಯ ಡಾ.ಬಿ.ಎನ್. ಗಂಗಾಧರ್ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವುದು ಅಗತ್ಯ ಎನ್ನುತ್ತಾರೆ. "ಹದಿಹರೆಯ ಒಂದು ರೀತಿಯಲ್ಲಿ ಸಂಕ್ರಮಣ ಕಾಲ. ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಕಾಲಿಡುವ ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಗೊಂದಲಗಳಿಗೆ ಮಕ್ಕಳು ಪಕ್ಕಾಗುತ್ತವೆ. ಮಕ್ಕಳು ಅನುಭವಿಸುವ ಮಾನಸಿಕ ತುಮುಲ ತಂದೆ-ತಾಯಿಯರ ಗಮನಕ್ಕೆ ಬಾರದೇ ಹೋಗಬಹುದು. ಮಕ್ಕಳಿಗೆ ಯಾವಾಗ, ಎಷ್ಟು ಸ್ವಾತಂತ್ರ್ಯ ನೀಡಬೇಕು ಎಂಬ ಸಾಮಾನ್ಯ ಪ್ರಜ್ಞೆ ಕೂಡ ನಮ್ಮ ಬಹಳಷ್ಟು ಪೋಷಕರಿಗೆ ಇರುವುದಿಲ್ಲ. ಇದು ಮುಂದೆ ಮಕ್ಕಳು ಹಾಗೂ ಪೊಷಕರ ನಡುವಿನ ಶೀತಲ ಸಮರವಾಗಿ ಮಾರ್ಪಾಟಾಗುತ್ತದೆ. ಜೊತೆಗೆ ಮಕ್ಕಳು ಹಾಗೂ ಅವರ ಸ್ನೇಹಿತ ಬಳಗದ ಮೇಲೆ ಒಂದು ಕಣ್ಣಿಡುವುದು ಪೋಷಕರ ಹೊಣೆ" ಎನ್ನುತ್ತಾರೆ ಡಾ. ಗಂಗಾಧರ್.

ಆರ್ಥಿಕ ಜಾಗತೀಕರಣವೇ ಈ ಎಲ್ಲಾ ಹಳವಂಡಗಳಿಗೆ ಕಾರಣ ಎನ್ನುವುದು ಖ್ಯಾತ ಸಾಮಾಜಿಕ ಕಾರ್ಯಕರ್ತ ರಿತುಪರ್ಣ ಮೊಹಾಂತಿ ಅವರ ದೃಢ ನಿಲುವು. "ನಮ್ಮ ಪುರುಷ ಪ್ರಧಾನ ಸಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ಕೇವಲ ಭೋಗದ ವಸ್ತುವಿನ ಸ್ಥಾನ. ಹೆಣ್ಣು ಅಂದರೆ ಮನಸ್ಸು ಬಂದಾಗ ಬಳಸಿಕೊಂಡು ಬಿಸಾಡುವ ಪದಾರ್ಥಗಳೆಂದೇ ಬಹುತೇಕ ಮಂದಿಯ ಭಾವನೆ. ಇಂಥ ಸನ್ನಿವೇಶದಲ್ಲಿ ಬದುಕುತ್ತಿರುವ ಹೆಣ್ಣುಮಕ್ಕಳು ಒಂದೊಂದು ಹೆಜ್ಜೆ ಇಡುವಾಗಲೂ ಸಾವಿರ ಬಾರಿ ಚಿಂತಿಸಬೇಕಾಗುತ್ತದೆ" ಎನ್ನುತ್ತಾರೆ ರಿತುಪರ್ಣ ಮೊಹಾಂತಿ.

ಹೌದು, ಈಗ ಕಾಲ ಸಾಕಷ್ಟು ಬದಲಾಗಿದೆ. ನಮ್ಮ ಪೋಷಕರು ಇದ್ದ ಕಾಲಕ್ಕೂ ಈಗಿನ ಕಾಲಕ್ಕೂ ಅಜಗಜಾಂತರ ಇದೆ. ನಿವೃತ್ತ ಶಾಲಾ ಶಿಕ್ಷಕಿ ಹಾಗೂ ದೆಹಲಿ ಪಬ್ಲಿಕ್ ಶಾಲೆಯ ಆಪ್ತ ಸಮಾಲೋಚಕಿ ಕಿರಣ್ ಮೆಹ್ತಾ, "ನನ್ನ ಪ್ರಕಾರ ಇಂದಿನ ಸಂಬಂಧಗಳಲ್ಲಿ ಅಂತಹ ಬದಲಾವಣೆ ಆಗಿಲ್ಲ. ಆದರೆ ಪ್ರೌಢಾವಸ್ಥೆಗೆ ಬಂದ ಮಕ್ಕಳು ಹಾಗೂ ಶಿಕ್ಷಕರ ದೃಷ್ಟಿಕೋನದಲ್ಲಿ ಬಹಳ ವ್ಯತ್ಯಾಸವಿದೆ. ಏಕೆಂದರೆ, ಶಿಕ್ಷಕರು ಹದಿಹರೆಯದಲ್ಲಿ ತಾವು ಹೇಗಿದ್ದೆವು ಎಂಬುದನ್ನೇ ಮರೆತುಬಿಡುತ್ತಾರೆ. ಈಗಿನ ಮಕ್ಕಳು ತುಸು ವಿಭಿನ್ನ ಮನೋವೃತ್ತಿ ತೋರುತ್ತಿರುವುದು ಬಿಟ್ಟರೆ ಹಿಂದಿನವರಿಗಿಂತಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ಹಿಂದಿನ ಕಾಲದಲ್ಲೂ ಹುಡುಗಿಯರು ಇದೇ ರೀತಿಯಲ್ಲಿ ಮೋಸ ಹೋದ ನಿದರ್ಶನಗಳಿವೆ. ಈಗ ಈ ಕುರಿತು ಬಹಿರಂಗವಾಗಿ ಚರ್ಚೆಗಳಾಗುತ್ತಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ ಅಷ್ಟೇ" ಎನ್ನುತ್ತಾರೆ.

"ಮಾಧ್ಯಮಗಳಿಗೂ ಈ ವಿಚಾರಗಳ ಕುರಿತು ಇನ್ನಿಲ್ಲದ ಕುತೂಹಲ ಹಾಗೂ ಆಸಕ್ತಿ. ಆದರೆ, ಹುಡುಗ ಹಾಗೂ ಹುಡುಗಿಯರನ್ನು ಮುಕ್ತವಾಗಿ ಬೆರೆಯಲು ಬಿಟ್ಟು, ಅವರಲ್ಲಾಗುವ ದೈಹಿಕ ಹಾಗೂ ಮಾನಸಿಕ ಗೊಂದಲಗಳನ್ನು ಒಪ್ಪಿಕೊಳ್ಳದಿರುವುದು ಸರಿಯಲ್ಲ. ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಹಂಚಿಕೊಳ್ಳುವ ಅವಕಾಶ ಪ್ರತಿಯೊಬ್ಬ ಹುಡುಗಿಗೂ, ಹುಡುಗನಿಗೂ ಇರಬೇಕು. ಆಗ ಮಾತ್ರ ಈ ರೀತಿಯ ಪ್ರಕರಣಗಳು ತಹಬಂದಿಗೆ ಬರುತ್ತವೆ" ಎನ್ನುತ್ತಾರೆ ಕಿರಣ್ ಮೆಹ್ತಾ.

ನಮ್ಮ ಸಮಾಜದ ದುರಂತವೆಂದರೆ, ಯುವ ಮನಸ್ಸುಗಳು ಸಮಸ್ಯೆಗಳ ಕೂಪಕ್ಕೆ ಬಿದ್ದು ಬಳಲಿ, ಇಂತಹ ಅನಾಹುತಗಳಾದಾಗ ಮಾತ್ರವೇ ನಮಗೆ ಜ್ಞಾನೋದಯವಾಗುವುದು. ಆದ್ದರಿಂದಲೇ ಇಂತಹ ಬಹಳಷ್ಟು ಸಮಸ್ಯೆಗಳಿಗೆ ನಮ್ಮಲ್ಲಿ ಇನ್ನೂ ಉತ್ತರ ದೊರೆಕಿಲ್ಲ.

ಮಂಗಳವಾರ, ಸೆಪ್ಟೆಂಬರ್ 29, 2009

ಅನುಭವಿ ಬ್ಲಾಗರ್‌ಗಳ ಅನಾಮಿಕ ಬ್ಲಾಗುಗಳು

ನಾನಂತು ಬ್ಲಾಗ್ ಲೋಕಕ್ಕೆ ಹೊಸಬ. ಅನಾಮಿಕ ಬ್ಲಾಗ್‌ಗಳ ಕಲ್ಪನೆಯೂ ಹೊಸತೇ. ನಾನು ಈಗಷ್ಟೇ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದೇನೆ. ಆದರೆ ಅನಾಮಿಕ ಬ್ಲಾಗುಗಳು ಹಾಸಿಗೆ ದಾಟಿ ಕಾಲು ಚಾಚುತ್ತಿವೆ. ಕಾರಣ ಸ್ಪಷ್ಟ. ಈ ಬ್ಲಾಗುಗಳ ಕರ್ತೃಗಳು ಅನುಭವಿ ಬ್ಲಾಗರ್‌ಗಳು.

ಬ್ಲಾಗ್‌ಲೋಕದಲ್ಲಿ ದಿನಕ್ಕೊಂದರಂತೆ ಅನಾಮಿಕ ಬ್ಲಾಗುಗಳು ತಲೆ ಎತ್ತುತ್ತಿವೆ. ಒಂದರ್ಥದಲ್ಲಿ ಇವೂ ಲೋಕದ ಮಗ್ಗುಲ ಮುಳ್ಳುಗಳು. ಇವುಗಳ ಕುರಿತು ಚರ್ಚೆಯೂ ಆರಂಭವಾಗಿದೆ. ಅಣಕವೆಂದರೆ ಈ ಚರ್ಚೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದೂ ಅವರೆ!.
ಅತಿ ಹೆಚ್ಚು ಹಿಟ್ಟು ಗಳಿಸುವ ಬ್ಲಾಗುಗಳೂ ಇವುಗಳೇ. ಅತೀ ಹೆಚ್ಚು ಪ್ರತಿಕ್ರಿಯೆಗಳು ಪಡೆಯುವುದೂ ಇವುಗಳೇ. ಕಾಮೆಂಟ್ ಬರೆಯುವವರೂ ಅನಾಮಿಕರೇ.

'ಅನಾಮಿಕತೆ’ ಎನ್ನುವುದೇ ಹಾಗೆ. ಜನರಲ್ಲಿ ಸಹಜ ಕುತೂಹಲವನ್ನು ಸೃಷ್ಟಿಸುವ ಶಕ್ತಿ ಈ ಐದಕ್ಷರದ ಪದಕ್ಕೆ ಇದೆ. ಈ ಅನಾಮಿಕ ಯಾರು? ಎಂದು ಹುಡುವುದಕ್ಕೆ ಯಾರೂ ಹೋಗುವುದಿಲ್ಲವಾದರೂ ಅನಾಮಿಕ ಏನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೆ. ಅನಾಮಿಕತೆ ವ್ಯಕ್ತಿಗೂ ಕೂಡ ಹೆಚ್ಚಿನ ಸ್ವತಂತ್ರತೆಯನ್ನು ನೀಡುತ್ತದೆ. ಹೆಸರು ಹೇಳಿಕೊಂಡು ಬರೆಯಲಾರದ ಅಥವಾ ಹೇಳಲಾರದ ವಿಚಾರವನ್ನು ನಿರ್ಭಿಡೆಯಿಂದ ಹೇಳುತ್ತಾರೆ ಅಥವಾ ಬರೆಯುತ್ತಾರೆ. ಅನುಭವಿ ಬ್ಲಾಗರ್‌ಗಳು ತಮ್ಮ ಅನಾಮಿಕ ಬ್ಲಾಗುಗಳಲ್ಲಿ ಬರೆಯುತ್ತಿರುವುದೂ ಇದನ್ನೇ.
ಬ್ಲಾಗ್ ಎಂಬುದು ಒಬ್ಬ ವ್ಯಕ್ತಿಯ ಮುಖವಾಣಿ. ರಾಜಕೀಯ ಪಕ್ಷ, ಸಂಘಟನೆಗಳು ಅದರದ್ದೇ ಆದ ಮುಖವಾಣಿಯನ್ನು ಹೊಂದಿರುವಂತೆ, ಆಯಾ ವ್ಯಕ್ತಿಗಳು ತಮ್ಮ ಅಭಿಪ್ರಾಯ, ಸಿದ್ಧಾಂತಗಳನ್ನು ಬ್ಲಾಗುಗಳ ಮೂಲಕ ತೆರೆದಿಡುತ್ತಾರೆ. (ಇನ್ನೊಬ್ಬರ ಮೇಲೆ ಹೇರುತ್ತಾರೆ.)

ಅನಾಮಿಕ ಬ್ಲಾಗರ್‌ಗಳು ಮಾಡುತ್ತಿರುವುದೂ ಅದನ್ನೇ. ತಮಗೆ ಯಾವುದು ಹಿತವಾಗಿಲ್ಲವೋ ಅದರ ವಿರುದ್ಧ ಅಥವಾ ಆ ವ್ಯಕ್ತಿಯ ವಿರುದ್ಧ ಒಂದು ಲೇಖನ ಬರೆಯುತ್ತಾರೆ. ಅದಕ್ಕೊಂದಿಷ್ಟು ಹಿಟ್ಟುಗಳು. ಲೇಖನವನ್ನು ಮೆಚ್ಚಿ ಕೆಲವರು ಪ್ರತಿಕ್ರಿಯೆ ಬರೆದರೆ ಇನ್ನೊಂದಿಷ್ಟು ಜನ ಖಾರವಾಗಿ ಪ್ರತಿಕ್ರಿಯೆ ಬರೆಯುತ್ತಾರೆ(ಬೇರೆ ಬೇರೆ ಹೆಸರುಗಳಲ್ಲಿ ತಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಬ್ಲಾಗರುಗಳೂ ಇದ್ದಾರೆ.)
ಅನಾಮಿಕ ಬ್ಲಾಗುಗಳಲ್ಲಿ ವಿಮರ್ಶಕರೆಲ್ಲಾ ವಿಮರ್ಶಕಿಗಳಾಗುತ್ತಾರೆ. ಒಬ್ಬರೇ ನಡೆಸುತ್ತಿದ್ದರೂ ನಮ್ಮದೊಂದು ತಂಡವಿದೆ ಎಂದು ಹೇಳಿಕೊಳ್ಳುತ್ತಾರೆ.

ಪ್ರತಿ ಕ್ಷೇತದಲ್ಲೂ ಇಂತಹ ಬ್ಲಾಗರುಗಳಿದ್ದಾರೆ, ಮಾಧ್ಯಮ ಕ್ಷೇತ್ರದಲ್ಲಿ , ಸಾಹಿತ್ಯ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅನಾಮಿಕರ ಬ್ಲಾಗುಗಳು ಇವೆ. ಈ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುವ ಚರ್ಚೆಯ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಕೇವಲ ಆಯಾ ಕ್ಷೇತ್ರದವರಿಗೆ ಮಾತ್ರ ಗೊತ್ತಿರುತ್ತದೆ.

ಉದಾಹರಣೆಗೆ ಮಾಧ್ಯಮ ಕ್ಷೇತ್ರವನ್ನು ತೆಗೆದುಕೊಂಡಾಗ, ಮಾಧ್ಯಮ ಮಂದಿಯ ಅನಾಮಿಕ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುತ್ತಿರುವ ಚರ್ಚೆಗಳ ಬಗ್ಗೆ ಕೇವಲ ಆ ಕ್ಷೇತ್ರದವರಿಗೆ ಮಾತ್ರ ಅರಿವಿದೆ. ಸಾಮಾನ್ಯ ಜನರಿಗೆ ಅಥವಾ ಇತರ ಕ್ಷೇತ್ರದವರಿಗೆ ಇದರ ಬಗ್ಗೆ ತಿಳಿದಿಲ್ಲ. ಇದು ಈ ಬ್ಲಾಗುಗಳ ಬಹು ದೊಡ್ಡ ಮಿತಿ. ಅವರ ಉದ್ದೇಶವೂ ಅಷ್ಟೇ ಇರುತ್ತದೆ. ಆ ಕ್ಷೇತ್ರದವರಿಗೆ ಮಾತ್ರ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದು.

ಈ ಅನಾಮಿಕರನ್ನು ಕಂಡು ಹಿಡಿಯುವುದು ಕಷ್ಟದ ವಿಚಾರವೇನಲ್ಲ. ಅದಕ್ಕೆ ಒಂದಿಷ್ಟು ಸಮಯ ವ್ಯಯಿಸಿ ತಾಂತ್ರಿಕ ಶ್ರಮ ಹಾಕಿದರೆ ಆಯಿತು. ಆದರೆ ಅದನ್ನು ಮಾಡುವ ತಾಳ್ಮೆಯೂ ಅಗತ್ಯತೆಯೂ ಯಾರಿಗೂ ಇಲ್ಲ. ಯಾರಿಗೆ ಏನು ತೋಚತ್ತೋ ಅದನ್ನು ಹೇಳಲು ಬರೆಯಲು ಅವರು ಸ್ವತಂತ್ರರು. ಅದು ಅನಾಮಿಕರಾಗಿ ಬರೆದರೂ ಹೆಸರು ಹೇಳಿಕೊಂಡು ಬರೆದರೂ ವ್ಯತ್ಯಾಸವಿಲ್ಲ. ಈ ಬ್ಲಾಗುಗಳಲ್ಲಿ ಆರೋಗ್ಯಕರ ವಿಚಾರ ಚರ್ಚೆಯಾದರೆ ಅದರಿಂದ ಯಾರಿಗೂ ತೊಂದರೆಯಿಲ್ಲ. ಆದರೆ ಅಂತಹ ವಿಚಾರಗಳು ಚರ್ಚೆಯಾಗುತ್ತಿರುವುದು ಬಹಳ ಕಡಿಮೆ. ಅನಾರೋಗ್ಯಕರ ವಿಚಾರಗಳೇ ಈ ಬ್ಲಾಗುಗಳ ಜೀವಾಳವಾಗುತ್ತಿರುವುದು ಕೆಟ್ಟಬೆಳವಣಿಗೆ. ಇಂತಹುದಕ್ಕೆ ಅನಾಮಿಕರೇ ಸ್ವಯಂ ಆಗಿ ಕಡಿವಾಣ ಹಾಕಬೇಕು. ಆರೋಗ್ಯಕರ ವಿಚಾರ, ಆರೋಗ್ಯಕರ ಚರ್ಚೆಗಳಿದ್ದರೆ ಬ್ಲಾಗ್ ಲೋಕವೂ ಆರೋಗ್ಯಕರವಾಗುತ್ತದೆ. ಓದುಗರೂ ಕೂಡ.

ಕೊನೆಮಾತು: ಕೆಲವು ಅನಾಮಿಕ ಬ್ಲಾಗುಗಳು ’ಬೇಸತ್ತು’ ಲೋಕಕ್ಕೆ ವಿದಾಯ ಹೇಳುತ್ತಿವೆ. ಇನ್ನು ಕೆಲವು ಅಪ್‌ಡೇಟ್ ಹಾಗದೇ ಉಳಿದಿವೆ.







ಭಾನುವಾರ, ಸೆಪ್ಟೆಂಬರ್ 6, 2009

'ಪ್ರಕೃತಿ'ಯೊಂದಿಗೆ ಬೆರೆತ ಆ ದಿನಗಳು..

ತುಳು ಭಾಷೆಯಲ್ಲಿ ಒಂದು ಗಾದೆಯಿದೆ 'ಅಮಾಸ್ಯೆಗೊರ ಪುಣ್ಣಮೆಗೊರ......' ಅಂದರೆ ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ .. ಅಂಥ.
ಆತ್ಮೀಯ ಮಿತ್ರನೊಬ್ಬ ಕೆಲ ದಿನಗಳ ಹಿಂದೆ ಫೋನ್ ಮಾಡಿದ್ದ. 'ಏನು ಮಾರಾಯ ನಿನ್ನ ಬ್ಲಾಗ್ ಅಪ್ಡೇಟ್ ಆಗ್ತಾ ಇಲ್ವಲ್ಲಾ ಅಂತ ಬೈಯ್ಯಲು ಶುರು ಹಚ್ಚಿದ. ಅದಕ್ಕೆ ಕಾರಣವೂ ಇತ್ತು. ಕಳೆದ ಒಂದು ತಿಂಗಳಿನಿಂದ ಹಲವು ಬಾರಿ ನನ್ನ ಬ್ಲಾಗಿಗೆ ಆತ ಇಣುಕಿ ನೋಡಿದ್ದಾನೆ. ಹೊಸ ಬರಹಗಳೇನು ಕಾಣಲಿಲ್ಲ. ಯಾವುದೇ ಬರಹಕ್ಕೆ ಒಂದು ಕಾಮೆಂಟನ್ನೂ ಆತ ಇದುವರೆಗೆ ಬರೆದಿಲ್ಲ. ಆದರೆ ಲೇಖನಗಳನ್ನು ಓದುತ್ತಾನೆ. ದೂರವಾಣಿಯ ಮೂಲಕ ಮುಖತಃ ಕಾಮೆಂಟ್ ನೀಡುತ್ತಾನೆ.
ಭಾರಿ ಉತ್ಸಾಹದಲ್ಲಿ ಬ್ಲಾಗ್ ಆರಂಭಿಸಿದ್ದೆ. ಹಲವು ವೃತ್ತಿ ಸ್ನೇಹಿತರು ಆಗಾಗ ಅಪ್ಡೇಟ್ ಮಾಡುತ್ತಿರಬೇಕು, ರಾಯರ ಕುದುರೆ ಕತ್ತೆ ಆಗಬಾರದು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದರು. ಆರಂಭದಲ್ಲಿ ಅಗಸ ಬಟ್ಟೆ ಎತ್ತಿ ಎತ್ತಿ ಒಗೆದ ಎಂಬ ಗಾದೆ ಮಾತಿನಂತೆ ಪ್ರಾರಂಭದಲ್ಲಿ ವಾರಕ್ಕೊಂದು ಲೇಖನ ಬರೆಯುತ್ತಿದ್ದೆ. ಈಗ ಬರೆಯದೆ ಒಂದು ತಿಂಗಳಾಯಿತು.
ತಿಂಗಳಿಗೊಮ್ಮೆ ಹುಣ್ಣಿಮೆ ಬರುವಾಗ ನಾನು ಬರೆಯದೇ ಇರುವುದಾದರೂ ಹೇಗೆ....

ಎರಡು ವಾರಗಳ ಹಿಂದೆ ಊರಿಗೆ ಹೋಗಿದ್ದೆ. ಮಳೆಗಾಲವನ್ನು ಸವಿಯುವುದಕ್ಕಾಗಿ!. ಕಾಂಕ್ರೀಟ್ ಕಾಡಾದ ಬೆಂಗಳೂರಲ್ಲಿ ನಾಲ್ಕು ಹನಿ ನೀರು ಭೂಮಿಗೆ ಬಿದ್ದರೆ ಭಾರಿ ಮಳೆಯಾದಂತೆ ಭಾಸವಾಗುತ್ತದೆ. ಆಗ ಉಂಟಾಗುವ ಟ್ರಾಫಿಕ್ಜಾಮ್ ಏನು?, ನೀರು ರಸ್ತ್ತೆ ಮೇಲೆ ಹರಿದು ಸೃಷ್ಟಿಸುವ ಅವಾಂತರಗಳೇನು? ಮರ ಮುರಿದು ಬೀಳುವುದೇನು? ಗೋಡೆ ಕುಸಿವುದೇನು? ಕೊನೆಗೆ ಮೋರಿ ನೀರಿನಲ್ಲಿ ನಾಗರಿಕರು ಕೊಚ್ಚಿ ಹೋಗುವುದೇನು? ಹೀಗೆ ಬೆಂಗಳೂರಿನಲ್ಲಿ ಧೋ... ಎಂದು ಸುರಿಯುವ ಮಳೆ ಸಂತಸ ತರುವುದಕ್ಕಿಂತ ಜನರಲ್ಲಿ ಅಸಹನೆಯನ್ನೇ ಉಂಟುಮಾಡುತ್ತಿರುವಾಗ ಹಲವಾರು ಬಾರಿ ಇಲ್ಲಿ ಯಾಕಾದರೋ ಮಳೆ ಬರುತ್ತದೋ ಎಂದು ಯೋಚಿಸಿದ್ದೇನೆ. ಇದೇ ಯೋಚನೆ ಮೊನ್ನೆ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲೂ ಮನಸಿನ ಹಾದಿಯಲ್ಲೊಮ್ಮೆ ನಡೆದಾಡಿತು.

ಬೆಳ್ಳಂಬೆಳಗ್ಗೆ ಬೆಂದಕಾಳೂರಿನಿಂದ ಬಸ್ಸಲ್ಲಿ ಹೊರಟವನಿಗೆ ಮಳೆ ಸ್ವಾಗತಕೋರಿದ್ದು ಶಿರಾಡಿಘಾಟ್ನಲ್ಲಿ, ಹಚ್ಚ ಹಸಿರ ಹಾಸಿನಲ್ಲಿ ಮಳೆಯ ನೃತ್ಯವನ್ನು ನೋಡಿ ಆಸ್ವಾದಿಸುತ್ತಿದ್ದ ನನಗೆ ಗಬ್ಬೆದ್ದು ಹೋಗಿದ್ದ ಶಿರಾಡ್ ಘಾಟ್ ರಸ್ತೆಯಲ್ಲಿ ಬಸ್ಸು ನೃತ್ಯ ಮಾಡುತ್ತಿದ್ದುದು ಗಮನಕ್ಕೇ ಬರಲಿಲ್ಲ!.

ಅಲ್ಲಲ್ಲಿ ಕಾಣುತ್ತಿದ್ದ ಕೃತಕ ಜಲಪಾತಗಳು, ಹರಿಯುವ ತೊರೆಗಳು, ಪಟ್ ಪಟ್ ಎಂದು ಸ್ವರ ಹೊರಡಿಸಿ ಬೀಳುತ್ತಿದ್ದ ಮಳೆ ಹನಿಗಳನ್ನು ಬಸ್ಸಿನ ಕಿಟಕಿ ಗಾಜುಗಳನ್ನು ಸರಿಸಿ ನೋಡುತ್ತಿದ್ದಾಗಲೇ ಎದುರಿನ ಸೀಟಿನಲ್ಲಿದ್ದ ಎಲೆ ಅಡಿಕೆ ಮೆಲ್ಲುತ್ತಿದ್ದ ವೃದ್ಧೆಯೊಬ್ಬರು ಉಗಿದ ಎಲೆ ಅಡಿಕೆ ರಸ ಮಳೆ ನೀರಿನ ಜೊತೆ ಬೆರೆತು ಹೋಯಿತು.
ಮನೆ ತಲುಪವವರೆಗೂ ಮಳೆಯ ಸಿಂಚನ ಮುಂದುವರೆದಿತ್ತು. ಆ ದೃಶ್ಯ ವೈಭವವನ್ನು ಸವಿಯುತ್ತಿರುವಾಗ ಮನಸ್ಸಿನ ಮೂಲೆಯಲ್ಲಿ

.....ಬೆಚ್ಚಗೆ ಕುಳಿತಿದ್ದ ಬಾಲ್ಯದ ನವಿರಾದ ನೆನಪುಗಳು ಒಂದೊಂದಾಗಿ ಸ್ಮೃತಿ ಪಟಲದಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದವು.
ಮಳೆಗಾಲ ಅಂದರೆ ಆದೇನೋ ಖುಷಿ. ಮಳೆಗಾಲ ಆರಂಭವಾದಗಲೇ ಶಾಲೆ ಆರಂಭಗೊಳ್ಳುತ್ತಿದ್ದುದು ನನಗಂತೂ ಖುಷಿ ನೀಡುತ್ತಿತ್ತು.

ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗಿರುತ್ತಿದ್ದ ಮರ ಗಿಡಗಳು ಮಳೆ ಹನಿಯ ಸ್ಪರ್ಶಕ್ಕೆ, ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು. ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಲದಲ್ಲಿ ಹಾವಸೆಯ ಸ್ಪರ್ಶದ ಹಿತವನ್ನು ಅನುಭವಿಸುತ್ತಿದ್ದವು. ಪಕ್ಷಿಗಳು, ಪ್ರಾಣಿಗಳು ಕೂಡ ಮಳೆಗಾಲದ ಸವಿ ಅನುಭವಿಸುವುದನ್ನು ಕಣ್ಣಾರೆ ಕಾಣಬಹುದಿತ್ತು. ಶಾಲೆಯಿಂದ ಮನೆಗೆ ಬರವ ಹೊತ್ತು ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಆಟವಾಡುತ್ತಿದ್ದ ಸಂಭ್ರಮ ಒಂದೆಡೆಯಾದರೆ, ನೆನೆದು ಬಂದಾಗ ವಸ್ತ್ರದಲ್ಲಿ ತಲೆ ಒರಸುತ್ತಿದ್ದ ಸಂದರ್ಭದಲ್ಲಿ ಪ್ರೀತಿಯ ಬೈಗುಳದ ಜೊತೆಗೆ ಅಮ್ಮನ ಬೆಚ್ಚಗಿನ ಅಪ್ಪುಗೆ ಎಂದೆಂದಿಗೂ ಮರೆಯಲಾಗದ್ದು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆಂಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆ.

ಆಷಾಢದಲ್ಲಿ ಜಡಿ ಮಳೆ ಸುರಿಯುತ್ತಿದ್ದರೆ ಇತ್ತ ಮನೆಯೊಳಗೆ ಮಕ್ಕಳಿಗೆ(ನನಗಂತು) ಸಂಭ್ರಮ. ಕಪ್ಪಿಟ್ಟ ವಾತಾವರಣದಲ್ಲಿ ಮನೆಯೊಳಗೆ ಎಣ್ಣೆ ಕಜ್ಜಾಯದ ಪರಿಮಳ ಮೂಗಿಗೆ ಬಡಿಯುತ್ತಿತ್ತು. ಮಳೆಗಾಲಕ್ಕೂ ಹಲಸಿನ ಹಣ್ಣಿಗೂ ಎಲ್ಲಿಲ್ಲದ ನಂಟು ಮಳೆ. ಆರಂಭಗೊಳ್ಳುವುದಕ್ಕೆ ಮುನ್ನ ಹಲಸಿನ ಕಾಯಿಯಿಂದ ತಯಾರಿಸಿದ ಆಹಾರ ಉತ್ಪನ್ನಗಳು (ಈ ಬಗ್ಗೆ ಹಲವು ಲೇಖನಗಳು ಭಾಗಶಃ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ) ಮಳೆಗಾಲದಲ್ಲಿ ನಮ್ಮ ನಾಲಗೆಗೆ ರುಚಿ ಹತ್ತಿಸುತ್ತಿದ್ದವು. ಮಳೆಗಾಲದಲ್ಲಿ ಮಾತ್ರ ಹಲಸಿನ ಹಣ್ಣು ದೊರೆಯುತ್ತಿದ್ದರಿಂದ ಹಣ್ಣಿನಿಂದ ತಾಯಾರಿಸಿದ ತಿಂಡಿ ಕೂಡ ಮಳೆಗಾಲಕ್ಕೆ ಮಾತ್ರ ಮೀಸಲು. ಮತ್ತೆ ಅದರ ಸವಿ ಆಸ್ವಾದಿಸಲು ಮುಂದಿನ ವರ್ಷಗಾಲ ಬರಬೇಕು.....
ಇನ್ನೆಲ್ಲಿ ಆ ಬಾಲ್ಯ....ಇನ್ನೆಲ್ಲಿ ಆ ಸಂತಸ, ಆ ಉಲ್ಲಾಸ ಉತ್ಸಾಹ....

ಜೋರಾಗಿ ಬೀಸಿದ ಗಾಳಿಗೆ ಬಸ್ಸಿನ ಕಿಟಕಿಯ ಮೂಲಕ ಒಳಬಂದ ನೀರು ನನ್ನ ಮುಖದ ಮೇಲೆ ಬಿದ್ದು, ನೆನಪುಗಳ ನೃತ್ಯವನ್ನು ನಿಲ್ಲಿಸಿದವು. ಮಂದಹಾಸದಿಂದ ಕಣ್ಣೆತ್ತಿ ನೋಡಿದರೆ ನನ್ನೂರಲ್ಲಿ ನೀರು ನಿಂತ ನಿಲ್ದಾಣದಲ್ಲಿ ಬಸ್ ನಿಂತಿತ್ತು.
ಹ್ಞಾಂ.. ಈ ಲೇಖನ ಬರೆಯುವ ಹೊತ್ತಿಗೆ ಮಳೆಗಾಲ ಮುಗಿಯುತ್ತೆ ಅಂಥ ನನ್ನ ಗೆಳೆಯ ಚುಚ್ಚಿದ್ದ. ಆದರೆ ದೇವರು ದೊಡ್ಡವನು... ಮತ್ತೆ ಧೋ ಎಂದು ಮಳೆರಾಯ ಅರ್ಭಟಿಸುತ್ತಿದ್ದಾನೆ..
ಕೊನೆ ಮಾತು: ಉದ್ಯಾನನಗರಿಯಲ್ಲಿ ಜೀನ್ಸ್, ಟೀ-ಶರ್ಟ್, ಕೃತಕತೆಯನ್ನು ಕಂಡು ಕಂಡು ಕೆಂಪಾಗಿದ್ದ ನನ್ನ ಕಣ್ಣುಗಳು ಆ ಎರಡು ದಿನಗಳಲ್ಲಿ ಪ್ರಾಕೃತಿಕ ಸಹಜ ಸೌಂದರ್ಯವನ್ನು ಕಂಡು ತಂಪಾಗಿದ್ದವು!....

ಶನಿವಾರ, ಜುಲೈ 18, 2009

ಪ್ರೇಮ ಧ್ಯಾನದ ಪಥದಲ್ಲಿ, ಕರ್ವಾಲೋ ಮತ್ತು ತೂಫಾನ್ ಮೇಲ್

ನಾನು ಇದುವರೆಗೆ ಮಾಡಿದ ಬಹು ದೊಡ್ಡ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಸಹೋದ್ಯೋಗಿ ಮಿತ್ರರೊಬ್ಬರು ನಾನು ಬರೆದ "ಮನಸೇ ಮತ್ತೆ ಮತ್ತೆ ಕಾಡಬೇಡ ಪ್ಲೀಸ್" ಲೇಖನವನ್ನು ಓದಿ ನಿಮ್ಮ ಜೀವನದಲ್ಲಿ ನೀವು ಮಾಡಿದ ಬಹು ದೊಡ್ಡ ತಪ್ಪು ಇದೇ ಅನಿಸುತ್ತೆ ಅಂತ ಕೆಣಕಿದ್ದರು. ಅವರಿಗೆ ಅದು ನನ್ನ ಕಥೆಯಲ್ಲ ಸುಮ್ಮನೆ ಹಾಗೆ ಬರೆದೆ ಎಂದು ಹಲವು ಬಾರಿ ಹೇಳಿದ್ದೆನಾದರೂ ಅವರು ನಂಬಲು ಸಿದ್ದರಿರಲಿಲ್ಲ. (ಅವರು ಮಾತ್ರವಲ್ಲ ಆತ್ಮೀಯ ಸ್ನೇಹಿತರೂ ಕೂಡ ಲೇಖನ ಓದಿ ಇದೇ ಅಭಿಪ್ರಾಯವನ್ನು ಹೇಳಿದ್ದರು).
ವಿಷಯಾಂತರ ಮಾಡುತ್ತಿಲ್ಲ. ಸಾಹಿತ್ಯವನ್ನು ಓದಲು ಆರಂಭಿಸಿದ್ದೇನೆ. ಇದುವರೆಗೆ ಕನ್ನಡ ಸಾಹಿತ್ಯವನ್ನು ಓದದೇ ಇದ್ದುದು ನಾನು ಮಾಡಿದ ಮಹಾನ್ ತಪ್ಪು ಎಂಬುದು ಮನದಟ್ಟಾಗಿದೆ. ಓದದೇ ಇರುವುದಕ್ಕೂ ಕಾರಣವಿತ್ತು. ವಿದ್ಯಾರ್ಥಿ ಜೀವನದಲ್ಲಿ ವಿಜ್ಞಾನವನ್ನು ನಿರ್ದಿಷ್ಟ ವಿಷಯವನ್ನಾಗಿ ಆರಿಸಿಕೊಂಡಿದ್ದರಿಂದ ಸಾಹಿತ್ಯ,ದ ಕಡೆಗೆ ಗಮನಕೊಡಲಾಗಿಲ್ಲ ಎಂಬ ಕಾರಣವನ್ನು ಸಂಪೂರ್ಣವಾಗಿ ಒಪ್ಪತಕ್ಕದ್ದಲ್ಲ ಎಂದು ಹೇಳಿ ಹಿರಿಯ ಸಹೋದ್ಯೋಗಿಯೊಬ್ಬರು ಕಿವಿಹಿಂಡಿದ್ದರು. ನೀವು ಸಾಹಿತ್ಯವನ್ನು ಓದಲೇ ಬೇಕೆಂಬುದು ಅವರ ಪ್ರೀತಿಪೂರ್ವಕ ಹಕ್ಕೋತ್ತಾಯವಾಗಿತ್ತು. ನಾನೇ ಖುದ್ದಾಗಿ ನಿಮಗೊಂದು ಪುಸ್ತಕ ತಂದು ಕೊಡುತ್ತೇನೆ ಎಂದು ಹೇಳಿ ಕೆಲವು ವಾರಗಳ(!) ಬಳಿಕ ಓಶೋ ಅವರ ಪ್ರೇಮ ಧ್ಯಾನದ ಪಥದಲ್ಲಿ ಎಂಬ ಪುಸ್ತಕವನ್ನು ಕೈಗಿತ್ತರು.
ಇನ್ನೋರ್ವ ಸಹೋದ್ಯೋಗಿ ಮಿತ್ರರೊಬ್ಬರಿಗೆ (ಸಮಾನ ವಯಸ್ಕ) ಈ ವಿಷಯ ತಿಳಿಸಿದೆ. ನನ್ನನ್ನು ಕೆಣಕಲು ಅವರಿಗೆ ಇಷಯವೊಂದು ಸಿಕ್ಕಿತ್ತು ಅನ್ಸತ್ತೆ. ಏನ್ ಸೂರ್ಯ.... ೨೦ರ ಆಸುಪಾಸಿನಲ್ಲೆ ಓಶೋ ಅವರ ಪುಸ್ತಕವನ್ನು ಓದಲು ಶುರು ಮಾಡಿದ್ದೀರಿ? ಎಂದು ಪ್ರಶ್ನೆ ಕೇಳಿದರು ಹಾಗೆ ಸುಮ್ಮನೆ. ಪುಸ್ತಕದಲ್ಲಿನ ವಿಚಾರವೂ ಹಾಗಿತ್ತು. ಅಧ್ಯಾತ್ಮ, ಧ್ಯಾನ ಇವುಗಳೇ ಆ ಪುಸ್ತಕದಲ್ಲಿ ಆಗಾಗ ಪುನರಾವರ್ತನೆ ಆಗುತ್ತಿದ್ದ ಎರಡು ಪದಗಳು. (ಅದೇ ಪುಸ್ತಕದಲ್ಲಿ ಜೀವನದಲ್ಲಿ ಪ್ರೀತಿ, ಸ್ನೇಹ, ಮುಖವಾಡಗಳ ಕುರಿತೂ ಮಾಹಿತಿ ಇತ್ತು.) ಇವೆರಡೂ ಈ ವಯಸ್ಸಿನಲ್ಲಿ ಯಾಕೆ? ಎಂಬುದು ಅವರ ಪ್ರಶ್ನೆಯ ತಾತ್ಪರ್ಯವಾಗಿತ್ತು. (ಬಹುಶಃ ಆ ಪುಸ್ತಕವನ್ನು ಅವರು ಓದದಿದ್ದರೂ ಓಶೋ ಅವರ ಬೇರೆ ಪುಸ್ತಕಗಳನ್ನು ಓದಿರಬಹುದು. ಅದನ್ನು ನಾನು ಅವರಲ್ಲಿ ಕೇಳಲಿಲ್ಲ.)
ಅವರು ಏನಂದುಕೊಂಡರೋ ಏನೋ ಅವರ ಬ್ಯಾಗ್‌ನಿಂದ ಎರಡು ಪುಸ್ತಕಗಳನ್ನು ನನಗೆ ನೀಡಿ ಇದನ್ನು ಓದಿ ಎಂಬ ಸಲಹೆ ನೀಡಿದರು. ಪುಸ್ತಕ ತೆಳ್ಳಗೆ ಇದ್ದಿದ್ದರಿಂದ ಏನೂ ಮಾತಾಡದೆ ತೆಗೆದುಕೊಂಡೆ. ಪ್ರೇಮ ಧ್ಯಾನದ ಪಥದಲ್ಲಿ ಪುಸ್ತಕದಲ್ಲಿ ೨೦೦ ಚಿಲ್ಲರೆ ಪುಟಗಳಿದ್ದರೆ ಇವೆರಡೂ ಪುಸ್ತಕಗಳು ಒಟ್ಟು ಸುಮಾರು ೨೪೦ ಪುಸ್ತಕಗಳನ್ನು ಹೊಂದಿದ್ದವು. ಒಂದು ಪೂರ್ಣ ಚಂದ್ರ ತೇಜಸ್ವಿ ಅವರ ಕರ್ವಾಲೋ ಹಾಗೂ ಇನ್ನೊಂದು "ಅನಿಸುತಿದೆ ಯಾಕೋ ಇಂದು’ ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲ್.
ತೇಜಸ್ವಿ ಅವರು ತೆಗೆದಿರುವ ಛಾಯಾಚಿತ್ರಗಳ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ದಿನಪತ್ರಿಕೆಯಲ್ಲಿ, ಸಾಹಿತ್ಯ ಪ್ರೇಮಿಗಳ ಮಾತುಗಳ ಮೂಲಕ ಕೇಳಿ ತಿಳಿದಿದ್ದೆ. ಕಾಯ್ಕಿಣಿಯವರು ಇತ್ತೀಚಿನವರು. ಅವರ ಬಗ್ಗೆಯೂ ಸ್ವಲ್ಪ ಗೊತ್ತಿದೆ.
ಈ ಎರಡು ಪುಸ್ತಕಗಳು ಕೈ ಸೇರೋ ಹೊತ್ತಿಗೆ ಓಶೋ ಅವರ ಪಥದಲ್ಲಿ ಅರ್ಧ ಓದಿ ಮುಗಿಸಿದ್ದೆ. ’ಪಥದಲಿ’ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿರುವಂತದು. ಅದರಲ್ಲಿರುವ ವಿಚಾರಗಳು ಮುದ ನೀಡಿತಾದರೂ, ಭಾಷಾಂತರ ಇಷ್ಟಾಗಲಿಲ್ಲ. ಓಶೋ ಅವರು ಹೇಳಿರುವ ಪ್ರತಿಯೊಂದು ವಿಚಾರವೂ ಚಿಂತನೆಗೆ ಹಚ್ಚುವಂತವು. ಅವರು ನೀಡುವ ಪ್ರತಿಯೊಂದು ಸಲಹೆಯು ಕೂಡ ನಮ್ಮ ಸಭ್ಯ ಜೀವನಕ್ಕೆ ನೆರವಾಗಬಲ್ಲುದು. ಆದರೆ ಅದನ್ನು ಜೀವನದಲ್ಲಿ ಅಳವಡಿಸಲು ದೃಢ ನಿಶ್ಚಯ ಬೇಕು, ಬದ್ಧತೆ ಬೇಕು.
ತೇಜಸ್ವಿಯವರ ಮೇಲಿದ್ದ ಸಹಜ ಕುತೂಹಲ ನನ್ನನ್ನು ಕಾರ್ವಾಲೋ ಕಡೆ ವಾಲುವಂತೆ ಮಾಡಿತು. ಮೊದಲ ಅಧ್ಯಾಯವನ್ನು ಓದುತ್ತಿರುವಾಗಲೇ ನಾನು ಎಂಥಾ ತಪ್ಪು ಮಾಡಿದ್ದೇನೆ ಎಂದನ್ನಿಸಿತು. ಪುಟದ ಮೊದಲ ಸಾಲೇ ನನ್ನನ್ನು ಆಕರ್ಷಿಸಿತು. ನವಿರಾದ ನಿರೂಪಣೆ ಆ ಪುಸ್ತಕವನ್ನು ಓದುವಂತೆ ಮಾಡುತ್ತದೆ. ಮಂದಣ್ಣ, ಕಿವಿ, ಜೇನ್ನೊಣ, ಹಳೆ ಜೀಪು, ಪ್ರತಿಯೊಂದು ಕೂಡ ನೆನಪಿನಂಗಳದಲ್ಲಿ ಉಳಿಯುವಂತೆ ತೇಜಸ್ವಿ ಬರೆದಿದ್ದಾರೆ. ಕೊನೆಗೆ ಒಂಚೂರು ಬೋರು ಹೊಡೆಸಿದರೂ ಓದಿಸಿಕೊಂಡು ಹೋಗಿತ್ತು. ಅಂತ್ಯದಲ್ಲಿ ಹಾರುವ ಓತಿ ಸಿಕ್ಕಿದ್ದರೆ ಚೆನ್ನಾಗಿತ್ತು ಅಂತ ನನಗೆ ಅನ್ನಿಸಿದ್ದು ಸುಳ್ಳಲ್ಲ. ಮಂದಣ್ಣ ಹಾಗೂ ಕರ್ವಾಲೋ, ಕಿವಿ ಮನಸ್ಸನ್ನು ಆಕರ್ಷಿಸಿದ ಮೂರು ಪಾತ್ರಗಳು. ಕರ್ವಾಲೋ ಓದಿ ಮುಗಿಸಿದ ತಕ್ಷಣ ಜೇನು ಕೃಷಿ ಮಾಡುವ ಆಲೋಚನೆ ಮನದಲ್ಲಿ ಮೂಡಿತಾದರೂ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಜೇನು ಸಾಕಣೆ ಅಸಂಭವ ಎಂದು ತಕ್ಷಣ ಮನಸ್ಸು ಮೆದುಳಿಗೆ ಸೂಚನೆ ನೀಡಿ ನನ್ನ ಆಲೋಚನೆಗೆ ಬ್ರೇಕ್ ಹಾಕಿತು.
ತೂಫಾನ್ ಮೇಲ್ ಜಯಂತ ಕಾಯ್ಕಿಣಿ ಅವರ ಬಳಿಯಿರುವ ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿ ಈ ಪುಸ್ತಕ. ಅದರಲ್ಲಿ ೧೨ ಕಥೆಗಳಿವೆ. ಒಂದಕ್ಕಿಂತ ಒಂದು ಭಿನ್ನ. ಪ್ರತಿ ಕಥೆಯನ್ನು ಎರಡೆರಡು ಬಾರಿ ಓದಿದರೆ ಮಾತ್ರ ನಿಮಗೆ ಅರ್ಥವಾಗುವುದು. ಹೋಲಿಕೆ ಮಾಡುವ ಕೌಶಲ ಅವರಿಗೆ ದೈವದತ್ತವಾಗಿ ಒಲಿದಿರುವುದು ಪ್ರತಿ ಕತೆಯಲ್ಲೂ ಗೋಚರವಾಗುತ್ತದೆ.
ಇನ್ನು ಮುಂದೆ ಸಾಹಿತ್ಯ ಓದಬೇಕು ಎಂದು ಮೂರು ಪುಸ್ತಕಗಳನ್ನು ಓದಿ ಮುಗಿಸಿದಾಗ ತೀರ್ಮಾನಿಸಿದ್ದೆ.

ನನ್ನ ಸಾಹಿತ್ಯ ಓದಿಗೆಕಾರಣರಾದ ಇಬ್ಬರು ಸಹೋದ್ಯೋಗಿ ಮಿತ್ರರಿಗೆ ನಾನು ಕೃತಜ್ಞ.

ಭಾನುವಾರ, ಜೂನ್ 21, 2009

ಬಿಎಂಟಿಸಿ ಕುರಿತು ಒಂದಿಷ್ಟು....

ವಾರ್ಷಿಕೋತ್ಸವದ ಸಂಭ್ರಮ....
ರಾಜ್ಯದ ರಾಜಧಾನಿ.... ಅದೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ನಾನು ವಲಸೆ (!?) ಬಂದು ಒಂದು ವರ್ಷವಾಯ್ತು. ಮನೆಯವರು, ಸಂಬಂಧಿಕರು, ಗೆಳೆಯರೆಲ್ಲಾ ಸಿಕ್ಕಾಗ ಕೇಳುವುದೊಂದೆ. ಎಷ್ಟು ಸಂಪಾಸಿದೆ? ಬ್ಯಾಂಕ್‌ನಲ್ಲಿ ಬ್ಯಾಲೆಂನ್ಸ್ ಎಷ್ಟಿದೆ? ಎಂಬ ಪ್ರಶ್ನೆಗಳನ್ನೇ. ಹ್ಞಾ ಮರೆತಿದ್ದೆ..... ಬೆಂಗಳೂರು ನಿಂಗೆ ಹಿಡಿಸುತ್ತಾ? ಎಂಬ ಇನ್ನೊಂದು ಪ್ರಶ್ನೆಯನ್ನೂ ಕೇಳುತ್ತಾರೆ. ಅವರಿಗೆ ಏನು ಗೊತ್ತು... ಯಾವ ಪ್ರದೇಶಕ್ಕೂ ಹೊಂದಿಕೊಳ್ಳದವರು ಬೆಂಗಳೂರಿಗೆ ಹೊಂದಿಕೊಳ್ಳುತಾರೆ ಅಂಥ. ಒಂದು ವೇಳೆ ನಾವು ಹೊಂದಿಕೊಳ್ಳದಿದ್ದರೂ, ಬೆಂಗಳೂರೇ ನಮ್ಮನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ. ಇಲ್ದಿದ್ರೆ ದೇಶದ ಮೂಲೆ ಮೂಲೆಯಿಂದ ಜನರು ಬಂದು ಇಲ್ಲಿ ನೆಲೆಕಂಡಿದ್ದು ಹೇಗೆ?. ಮಹಾ ಸಾಗರದಂತಿರುವ ಬೆಂಗಳೂರು ಬಂದ ಜನರನ್ನೆಲ್ಲಾ ತನ್ನ ಒಡಲಾಳದಲ್ಲಿ ತುಂಬಿಕೊಂಡಿದೆ. ಇನ್ನೂ ತುಂಬಿಕೊಳ್ಳುತ್ತಿದೆ.
ಬೆಳಗ್ಗೆ ಒಮ್ಮೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಸ್ಕೈ ವಾಕರ್‌ನಲ್ಲಿ ನಿಂತು ಸುತ್ತಲೂ ಒಮ್ಮೆ ದೃಷ್ಠಿ ಹಾಯಿಸಿ ನೋಡಿ....ಜನಸಾಗರದ ಹೊರತು ನಿಮಗೆ ಮತ್ತಿನ್ನೇನೂ ಕಾಣದು.ಒಂದು ವರ್ಷದಲ್ಲಿ ನಾನು ಪಡೆದ ಅನುಭವವಿದೆಯಲ್ಲಾ....ಜೀವನಾನುಭವ. ಅದಕ್ಕಿಂತ ದೊಡ್ಡ ಅನುಭವವಿಲ್ಲ ಎಂದು ಹಿರಿಯರು ಹೇಳುತ್ತಾರೆ. ಬೆಂಗಳೂರಿನಲ್ಲಿ ಪ್ರತಿ ದಿನ ನಾನು ಪಡೆದದ್ದು ಅದನ್ನೇ! ಉದ್ಯೋಗದ ನಿರೀಕ್ಷೆಯಲ್ಲಿ ಊರಿಂದ ಹೊರಟು ಬೆಂಗಳೂರಿಗೆ ತಲುಪಿದಾಗ ನನ್ನನ್ನು ಸ್ವಾಗತಿಸಿದ್ದು ಇಲ್ಲಿನ ಟ್ರಾಫಿಕ್ . ಮುಂಜಾವು ೪.೩೦ರ ಸಮಯ. ಸಿಲಿಕಾನ್ ಸಿಟಿಯ ಹೆಬ್ಬಾಗಿಲು ನೆಲಮಂಗಲಕ್ಕೆ ತಲುಪಿದ್ದೆ. ಆಗಷ್ಟೇ ನಿದ್ದೆಯಿಂದ ಎದ್ದು ಕಣ್ಣು ಉಜ್ಜುತ್ತಿದ್ದೆ. ಹಿಂದಿನಿಂದ ಮುಂದಿನಿಂದ ಕಿವಿ ತಮಟೆ ಹರಿಯುವಂತೆ ವಾಹನಗಳ ಹಾರ್ನ್‌ಗಳು ಆರ್ಭಟಿಸುತ್ತಿದ್ದವು. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಇಲ್ಲಿನ ಟ್ರಾಫಿಕ್ ಬಗ್ಗೆ ತಿಳಿದಿದ್ದೆನಾದರೂ ಮೊದಲ ಸಲವೇ ಅದರ ಅನುಭವ ಆದೀತು ಅಂತ ಕನಸಿನಲ್ಲೂ ಆಲೋಚಿಸಿರಲಿಲ್ಲ. ಪ್ರಾತಃಕಾಲದಲ್ಲಿ ದೇವರ ಸ್ಮರಣೆ ಮಾಡಬೇಕಾದ ಹೊತ್ತಲ್ಲಿ ನಾನು ಸುಮಾರು ೨ ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ ಒತ್ತಾಡುತ್ತಿದ್ದೆ.... ಆ ಮೊದಲ ದಿನದಿಂದ ಇಂದಿನವರೆಗೆ ಪ್ರತಿಯೊಂದು ದಿನವೂ ಒಂದಲ್ಲ ಒಂದು ಅನುಭವ ಪಡೆದಿದ್ದೇನೆ. ಎಲ್ಲವನ್ನೂ ಬರೆದರೆ ಸರಣಿ ಲೇಖನ ಆಗಬಹುದೇನೋ...
ಆದರೂ, ಬೆಂಗಳೂರು ಜನರ ಜೀವನಾಡಿ ಆಗಿರುವ ಬಿಎಂಟಿಸಿ ಬಗ್ಗೆ ಹೇಳಲೇಬೇಕು. ಬೆಂಗಳೂರು ಕುರಿತು ಮಾತನಾಡುವಾಗ ಬಿಎಂಟಿಸಿ ಕುರಿತು ಹೇಳದಿದ್ದರೆ ಅಥವಾ ಬರೆಯದಿದ್ದರೆ ಆ ಬರಹ ಅಪೂರ್ಣ ಎಂಬುದು ನನ್ನ ಭಾವನೆ. ನಿಮಗೂ ಹಾಗನ್ನಿಸಿರಬಹುದು.
ಬಿಎಂಟಿಸಿ ಎಂದರೆ ಏನು ಎಂದು ಬೆಂಗಳೂರಿನ ಸಾಮಾನ್ಯ ಜನತೆಗೆ ಅರ್ಥವಾಗುವುದಿಲ್ಲ. ಅದೇ ಬಿಟಿಎಸ್ ಅಂತ ಹೇಳಿ.. ತಟ್ಟನೆ ಗ್ರಹಿಸುತ್ತಾರೆ. ಅವರಿಗೆ ಬಿಎಂಟಿಸಿ ಇನ್ನೂ ಬಿಟಿಎಸ್. ಬೆಂಗಳೂರಿಗರ ಜೀವನಾಡಿ ಇದು. ಈ ಬಸ್‌ಗಳ ಹೊರತಾಗಿ ಬೆಂಗಳೂರ ಜನಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಈ ಬಸ್‌ಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ.ಬೆಂಗಳೂರಿನ ಜನಜೀವನ ತಿಳಿಯಬೇಕಾದರೆ (ಹಾಗೂ ಪುಕ್ಕಟೆ ಮನರಂಜನೆ ಸಿಗಬೇಕಾದರೆ!) ನೀವು ಒಂದು ದಿನವಿಡೀ ಬಿಎಂಟಿಸಿ ಬಸ್ಸಲ್ಲಿ ಸುತ್ತಿದರೆ ಸಾಕು. ಬೇರೇನೂ ಮಾಡಬೇಕಿಲ್ಲ. ಕಳೆದ ಒಂದು ವರ್ಷದಿಂದ ಪ್ರತಿ ದಿನವೂ ಈ ಬಸ್‌ನಲ್ಲಿ ನಾನು ಪ್ರಯಾಣಿಸುತ್ತಿರುವುದರಿಂದ ಈ ಮಾತನ್ನು ನಾನು ಖಚಿತವಾಗಿ ಹೇಳಬಲ್ಲೆ.
ಒಂದು ಬಿಎಂಟಿಸಿ ಬಸ್ ಮಿನಿ ಬೆಂಗಳೂರಿಗೆ ಸಮ. ಅಲ್ಲಿ ಯಾರು ಇರುವುದಿಲ್ಲ ಹೇಳಿ. ಶೇ ೩೦.ತಮಿಳರು, ಶೇ ೨೦ ತೆಲುಗರು ಇನ್ನು ಹದಿನೈದು ಶೇ. ಮಲ್ಲುಗಳು (ಮಳಿಯಾಳಿಗಳು), ೫ ಪರ್ಸೆಂಟ್ ಹಿಂದಿ ಭಾಷಿಗರು ಇನ್ನುಳಿದವರು ಕನ್ನಡಿಗರು. (ವಿ.ಸೂ: ಈ ಅಂಕಿ ಅಂಶಗಳು ನನ್ನವು- ಹೆಚಚು ಕಮ್ಮಿ ಸರಿ ಇರಬಹುದು ಎಂಬುದು ನನ್ನ ಅನಿಸಿಕೆ) ಕಳ್ಳರು, ಪ್ರಾಮಾಣಿಕರು, ಜಗಳಗಂಟರು, ಹರಟಿಗರು, ಹೆಂಗರುಳಿನ ಯಜಮಾನರು (ಮಹಿಳೆಯರ ಬಗ್ಗೆ ಮೋಹ ಉಳ್ಳವರನ್ನು ನಾನು ಕರೆಯುವುದು ಹೀಗೆ!), ಕುಡುಕರು, ಪ್ರೇಮಿಗಳು-ಕಾಮಿಗಳು ಹೀಗೆ ಎಲ್ಲರೂ ಬಿಎಂಟಿಸಿ ಪ್ರಯಾಣಿಕರೇ.
ಬಸ್ಸಿಗೊಬ್ಬ/ಳು ಕಂಡಕ್ಟರ್. ಕೋಪ ದೇವತೆ ಅವರ ಮೂಗಿನ ತುದಿಯಲ್ಲಿ ನಲಿಯುತ್ತಿರುತ್ತಾಳೆ. ಎಷ್ಟು ಹೊತ್ತಿಗೂ ಅರಚುತ್ತಾ, ಬುಸುಗುಡುತ್ತಾ ಇರುತ್ತಾರೆ ಪ್ರಯಾಣಿಕರ ಬಳಿ ಚಿಲ್ಲರೆ ಇಲ್ಲದಿದ್ದರೆ ಅವರ ಅರಚಾಟ ಆರಂಭಗೊಳ್ಳುತ್ತದೆ ಇನ್ನು ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೋ....ಒಬ್ಬೊಬ್ಬರು ಒಂದೊಂದು ರೀತಿ. ಕೆಲವರು ಜಗಳ ತೆಗೆಯುವುದಕ್ಕಾಗಿಯೇ ಬಸ್ಸಿಗೆ ಹತ್ತಿರುತ್ತಾರೆ. ಚಾಲಕ ಬಸ್ಸನ್ನು ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ನಿಲ್ಲಿಸಿದರೆ ಸಾಕು. ಅದು ಜಗಳಕ್ಕೆ ನಾಂದಿ.
ಈ ಮೊಬೈಲ್‌ಗಳಲ್ಲಿ ಎಫ್‌ಎಂ, ಎಂಪಿತ್ರೀಗಳನ್ನು ಯಾಕಾದರೂ ತಂತ್ರಜ್ಞರು ಅಳವಡಿಸಿದರು ಎಂದು ಬಸ್ಸಲ್ಲಿ ಪ್ರಯಾಣಿಸುವಾಗ ನೀವು ತಲೆ ಚಚ್ಚಿಕೊಂಡಿರಬಹುದು. ಹಾಡನ್ನು ಕೇಳಲು ಹೆಡ್‌ಸೆಟ್ ಪ್ರತ್ಯೇಕವಾಗಿ ಇರುತ್ತದೆ. ಆದರೂ ಅದೇನು ಮಜಾ ಸಿಗುತ್ತೋ ಏನೋ.... ಹೆಡ್ ಸೆಟ್ ಇದ್ದರೂ ಬಸ್‌ಲ್ಲಿ ಲೌಡ್ ಸ್ಪೀಕರ್‌ನಲ್ಲಿಟ್ಟು ಹಾಡು ಕೇಳುತ್ತಾರೆ. ಹೀಗೆ ಯಾರಾದರು ಒಬ್ಬರು ಮಾಡಿದರೆ ಪರವಾಗಿಲ್ಲ. ಇಂಥ ಐದಾರು ಮಂದಿ ಬಸ್ಸಲ್ಲಿರುತ್ತಾರೆ. ಇದು ಸಾಲದೆಂಬತೆ ಚಾಲಕನೂ ಕೂಡ ರೇಡಿಯೋ ಚಾಲೂ ಮಾಡಿ, ಶಬ್ದ ಮಾಲಿನ್ಯದ ಪ್ರಮಾಣವನ್ನು ಇನ್ನೂ ಹೆಚ್ಚಿಸುತ್ತಾನೆ. ಆ ಬಸ್ಸಲ್ಲಿ ಪ್ರಯಾಣಿಸುವ ಸಂಗೀತ ಪ್ರೇಮಿ ಕೂಡ ಕಿವಿ ಮುಚ್ಚುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿರುತ್ತದೆ.
ಜಗಳವನ್ನು ನೋಡಬೇಕಾದರೆ ನೀವು ಬಿಎಂಟಿಸಿಯಲ್ಲಿ ಪ್ರಯಾಣಿಸಬೇಕು. ಎದುರಿಗೆ ಸಿಗುವ (ಅಡ್ಡಾದಿಡ್ಡಿ ವಾಹನ ಓಡಿಸುವ) ವಾಹನಗಳ ಚಾಲಕರಿಗೆ ಬೈಗುಳದ ಮಂಗಳಾರತಿ ಎತ್ತುತ್ತಲೇ ಬಸ್ಸನ್ನು ಚಾಲನೆ ಮಾಡುತ್ತಿರುತ್ತಾನೆ. ಚಾಲಕನ ಆರತಿಗೆ ಮೊದಲು ಮುಖ ಒಡ್ಡುವವರು ಆಟೋ ಡ್ರೈವರ್‌ಗಳು. (ಅವರೇನೂ ಕಮ್ಮಿ ಇಲ್ಲ ಬಿಡಿ). ಇದೆಲ್ಲವುದರ ನಡುವೆ ಟ್ರಾಫಿಕ್ ಜಾಮ್. ಮತ್ತೆ ಹಾರ್ನ್‌ಗಳ ಸದ್ದು. ಕೊನೆಗೆ ನೀವು ಇಳಿಯಬೇಕಾದ ಸ್ಥಳ ಬಂದಾಗ, ಅಂತೂ ಹೇಗಾದರೂ ತಲುಪಿದೆನಲ್ಲಾ ಎಂಬ ಉದ್ಘಾರ ನಿಮ್ಮ ಮನಸಿನ ಮೂಲೆಯಲ್ಲಿ ಉಂಟಾಗಿ, ಬಸ್ಸಿನಲ್ಲಿ ನಡೆದ ಘಟನೆಗಳನ್ನು ನೆನೆದುಮುಗುಳ್ನಗೆ ಸಹಿತ/ರಹಿತ ಮುಖದೊಂದಿಗೆ ಬಸ್ಸಿನ ಮೆಟ್ಟಿಲು ಇಳಿವಾಗ ಎದುರಿಗೊಬ್ಬರು ಅವಸರದಿಂದ ತಳ್ಳಿಕೊಂಡು ಅರಚುತ್ತಾ ಬಸ್ಸಿಗೆ ಹತ್ತುತ್ತಿರುತ್ತಾರೆ!.
ಮನೆಯವರು ಸ್ನೇಹಿತರು, ಹಿತೈಷಿಗಳು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಮೊದಲು ಹೇಳಿದ್ದೆ. ಅವರ ಎಲ್ಲಾ ಪ್ರಶ್ನೆಗಳಿಗೆ ಹೇಗೂ ಉತ್ತರ ಕೊಟ್ಟಿದ್ದೆ. ಆದರೆ ಅವರು ಮತ್ತೊಂದು ಪ್ರಶ್ನೆನಾ ಮುಂದಿಡುತ್ತಾರೆ.
ಯಾವುದಾದರೂ ಹುಡುಗೀನಾ ನೋಡಿಟ್ಟಿದ್ದೀಯಾ ಬೆಂಗಳೂರಿನಲ್ಲಿ?
ಉತ್ತರ:???????!!!!!!!
ನಿಮ್ಮವ ವಜ್ರಾಂಗಿ ಸೂರ್ಯ