ಮಂಗಳವಾರ, ಸೆಪ್ಟೆಂಬರ್ 29, 2009

ಅನುಭವಿ ಬ್ಲಾಗರ್‌ಗಳ ಅನಾಮಿಕ ಬ್ಲಾಗುಗಳು

ನಾನಂತು ಬ್ಲಾಗ್ ಲೋಕಕ್ಕೆ ಹೊಸಬ. ಅನಾಮಿಕ ಬ್ಲಾಗ್‌ಗಳ ಕಲ್ಪನೆಯೂ ಹೊಸತೇ. ನಾನು ಈಗಷ್ಟೇ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದೇನೆ. ಆದರೆ ಅನಾಮಿಕ ಬ್ಲಾಗುಗಳು ಹಾಸಿಗೆ ದಾಟಿ ಕಾಲು ಚಾಚುತ್ತಿವೆ. ಕಾರಣ ಸ್ಪಷ್ಟ. ಈ ಬ್ಲಾಗುಗಳ ಕರ್ತೃಗಳು ಅನುಭವಿ ಬ್ಲಾಗರ್‌ಗಳು.

ಬ್ಲಾಗ್‌ಲೋಕದಲ್ಲಿ ದಿನಕ್ಕೊಂದರಂತೆ ಅನಾಮಿಕ ಬ್ಲಾಗುಗಳು ತಲೆ ಎತ್ತುತ್ತಿವೆ. ಒಂದರ್ಥದಲ್ಲಿ ಇವೂ ಲೋಕದ ಮಗ್ಗುಲ ಮುಳ್ಳುಗಳು. ಇವುಗಳ ಕುರಿತು ಚರ್ಚೆಯೂ ಆರಂಭವಾಗಿದೆ. ಅಣಕವೆಂದರೆ ಈ ಚರ್ಚೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದೂ ಅವರೆ!.
ಅತಿ ಹೆಚ್ಚು ಹಿಟ್ಟು ಗಳಿಸುವ ಬ್ಲಾಗುಗಳೂ ಇವುಗಳೇ. ಅತೀ ಹೆಚ್ಚು ಪ್ರತಿಕ್ರಿಯೆಗಳು ಪಡೆಯುವುದೂ ಇವುಗಳೇ. ಕಾಮೆಂಟ್ ಬರೆಯುವವರೂ ಅನಾಮಿಕರೇ.

'ಅನಾಮಿಕತೆ’ ಎನ್ನುವುದೇ ಹಾಗೆ. ಜನರಲ್ಲಿ ಸಹಜ ಕುತೂಹಲವನ್ನು ಸೃಷ್ಟಿಸುವ ಶಕ್ತಿ ಈ ಐದಕ್ಷರದ ಪದಕ್ಕೆ ಇದೆ. ಈ ಅನಾಮಿಕ ಯಾರು? ಎಂದು ಹುಡುವುದಕ್ಕೆ ಯಾರೂ ಹೋಗುವುದಿಲ್ಲವಾದರೂ ಅನಾಮಿಕ ಏನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೆ. ಅನಾಮಿಕತೆ ವ್ಯಕ್ತಿಗೂ ಕೂಡ ಹೆಚ್ಚಿನ ಸ್ವತಂತ್ರತೆಯನ್ನು ನೀಡುತ್ತದೆ. ಹೆಸರು ಹೇಳಿಕೊಂಡು ಬರೆಯಲಾರದ ಅಥವಾ ಹೇಳಲಾರದ ವಿಚಾರವನ್ನು ನಿರ್ಭಿಡೆಯಿಂದ ಹೇಳುತ್ತಾರೆ ಅಥವಾ ಬರೆಯುತ್ತಾರೆ. ಅನುಭವಿ ಬ್ಲಾಗರ್‌ಗಳು ತಮ್ಮ ಅನಾಮಿಕ ಬ್ಲಾಗುಗಳಲ್ಲಿ ಬರೆಯುತ್ತಿರುವುದೂ ಇದನ್ನೇ.
ಬ್ಲಾಗ್ ಎಂಬುದು ಒಬ್ಬ ವ್ಯಕ್ತಿಯ ಮುಖವಾಣಿ. ರಾಜಕೀಯ ಪಕ್ಷ, ಸಂಘಟನೆಗಳು ಅದರದ್ದೇ ಆದ ಮುಖವಾಣಿಯನ್ನು ಹೊಂದಿರುವಂತೆ, ಆಯಾ ವ್ಯಕ್ತಿಗಳು ತಮ್ಮ ಅಭಿಪ್ರಾಯ, ಸಿದ್ಧಾಂತಗಳನ್ನು ಬ್ಲಾಗುಗಳ ಮೂಲಕ ತೆರೆದಿಡುತ್ತಾರೆ. (ಇನ್ನೊಬ್ಬರ ಮೇಲೆ ಹೇರುತ್ತಾರೆ.)

ಅನಾಮಿಕ ಬ್ಲಾಗರ್‌ಗಳು ಮಾಡುತ್ತಿರುವುದೂ ಅದನ್ನೇ. ತಮಗೆ ಯಾವುದು ಹಿತವಾಗಿಲ್ಲವೋ ಅದರ ವಿರುದ್ಧ ಅಥವಾ ಆ ವ್ಯಕ್ತಿಯ ವಿರುದ್ಧ ಒಂದು ಲೇಖನ ಬರೆಯುತ್ತಾರೆ. ಅದಕ್ಕೊಂದಿಷ್ಟು ಹಿಟ್ಟುಗಳು. ಲೇಖನವನ್ನು ಮೆಚ್ಚಿ ಕೆಲವರು ಪ್ರತಿಕ್ರಿಯೆ ಬರೆದರೆ ಇನ್ನೊಂದಿಷ್ಟು ಜನ ಖಾರವಾಗಿ ಪ್ರತಿಕ್ರಿಯೆ ಬರೆಯುತ್ತಾರೆ(ಬೇರೆ ಬೇರೆ ಹೆಸರುಗಳಲ್ಲಿ ತಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಬ್ಲಾಗರುಗಳೂ ಇದ್ದಾರೆ.)
ಅನಾಮಿಕ ಬ್ಲಾಗುಗಳಲ್ಲಿ ವಿಮರ್ಶಕರೆಲ್ಲಾ ವಿಮರ್ಶಕಿಗಳಾಗುತ್ತಾರೆ. ಒಬ್ಬರೇ ನಡೆಸುತ್ತಿದ್ದರೂ ನಮ್ಮದೊಂದು ತಂಡವಿದೆ ಎಂದು ಹೇಳಿಕೊಳ್ಳುತ್ತಾರೆ.

ಪ್ರತಿ ಕ್ಷೇತದಲ್ಲೂ ಇಂತಹ ಬ್ಲಾಗರುಗಳಿದ್ದಾರೆ, ಮಾಧ್ಯಮ ಕ್ಷೇತ್ರದಲ್ಲಿ , ಸಾಹಿತ್ಯ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅನಾಮಿಕರ ಬ್ಲಾಗುಗಳು ಇವೆ. ಈ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುವ ಚರ್ಚೆಯ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಕೇವಲ ಆಯಾ ಕ್ಷೇತ್ರದವರಿಗೆ ಮಾತ್ರ ಗೊತ್ತಿರುತ್ತದೆ.

ಉದಾಹರಣೆಗೆ ಮಾಧ್ಯಮ ಕ್ಷೇತ್ರವನ್ನು ತೆಗೆದುಕೊಂಡಾಗ, ಮಾಧ್ಯಮ ಮಂದಿಯ ಅನಾಮಿಕ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುತ್ತಿರುವ ಚರ್ಚೆಗಳ ಬಗ್ಗೆ ಕೇವಲ ಆ ಕ್ಷೇತ್ರದವರಿಗೆ ಮಾತ್ರ ಅರಿವಿದೆ. ಸಾಮಾನ್ಯ ಜನರಿಗೆ ಅಥವಾ ಇತರ ಕ್ಷೇತ್ರದವರಿಗೆ ಇದರ ಬಗ್ಗೆ ತಿಳಿದಿಲ್ಲ. ಇದು ಈ ಬ್ಲಾಗುಗಳ ಬಹು ದೊಡ್ಡ ಮಿತಿ. ಅವರ ಉದ್ದೇಶವೂ ಅಷ್ಟೇ ಇರುತ್ತದೆ. ಆ ಕ್ಷೇತ್ರದವರಿಗೆ ಮಾತ್ರ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದು.

ಈ ಅನಾಮಿಕರನ್ನು ಕಂಡು ಹಿಡಿಯುವುದು ಕಷ್ಟದ ವಿಚಾರವೇನಲ್ಲ. ಅದಕ್ಕೆ ಒಂದಿಷ್ಟು ಸಮಯ ವ್ಯಯಿಸಿ ತಾಂತ್ರಿಕ ಶ್ರಮ ಹಾಕಿದರೆ ಆಯಿತು. ಆದರೆ ಅದನ್ನು ಮಾಡುವ ತಾಳ್ಮೆಯೂ ಅಗತ್ಯತೆಯೂ ಯಾರಿಗೂ ಇಲ್ಲ. ಯಾರಿಗೆ ಏನು ತೋಚತ್ತೋ ಅದನ್ನು ಹೇಳಲು ಬರೆಯಲು ಅವರು ಸ್ವತಂತ್ರರು. ಅದು ಅನಾಮಿಕರಾಗಿ ಬರೆದರೂ ಹೆಸರು ಹೇಳಿಕೊಂಡು ಬರೆದರೂ ವ್ಯತ್ಯಾಸವಿಲ್ಲ. ಈ ಬ್ಲಾಗುಗಳಲ್ಲಿ ಆರೋಗ್ಯಕರ ವಿಚಾರ ಚರ್ಚೆಯಾದರೆ ಅದರಿಂದ ಯಾರಿಗೂ ತೊಂದರೆಯಿಲ್ಲ. ಆದರೆ ಅಂತಹ ವಿಚಾರಗಳು ಚರ್ಚೆಯಾಗುತ್ತಿರುವುದು ಬಹಳ ಕಡಿಮೆ. ಅನಾರೋಗ್ಯಕರ ವಿಚಾರಗಳೇ ಈ ಬ್ಲಾಗುಗಳ ಜೀವಾಳವಾಗುತ್ತಿರುವುದು ಕೆಟ್ಟಬೆಳವಣಿಗೆ. ಇಂತಹುದಕ್ಕೆ ಅನಾಮಿಕರೇ ಸ್ವಯಂ ಆಗಿ ಕಡಿವಾಣ ಹಾಕಬೇಕು. ಆರೋಗ್ಯಕರ ವಿಚಾರ, ಆರೋಗ್ಯಕರ ಚರ್ಚೆಗಳಿದ್ದರೆ ಬ್ಲಾಗ್ ಲೋಕವೂ ಆರೋಗ್ಯಕರವಾಗುತ್ತದೆ. ಓದುಗರೂ ಕೂಡ.

ಕೊನೆಮಾತು: ಕೆಲವು ಅನಾಮಿಕ ಬ್ಲಾಗುಗಳು ’ಬೇಸತ್ತು’ ಲೋಕಕ್ಕೆ ವಿದಾಯ ಹೇಳುತ್ತಿವೆ. ಇನ್ನು ಕೆಲವು ಅಪ್‌ಡೇಟ್ ಹಾಗದೇ ಉಳಿದಿವೆ.







4 ಕಾಮೆಂಟ್‌ಗಳು:

Karnataka Best ಹೇಳಿದರು...

danikulu bari deep ath barevondu ullar. all d best

ಗೌತಮ್ ಹೆಗಡೆ ಹೇಳಿದರು...

tumbaa vicharayukta lekhana sir.

ಸೂರ್ಯ ವಜ್ರಾಂಗಿ ಹೇಳಿದರು...

@ ಪ್ರವೀಣಚಂದ್ರ
ಧನ್ಯವಾದಗಳು. ಹೀಗೆ ಬರುತ್ತಿರಿ.

@ ಗೌತಮ್‌ ಹೆಗಡೆ
ಮಾತಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ.

jomon varghese ಹೇಳಿದರು...

lekhana chennagide.. adre idakke yavude anamika pratikriye kanisuttillavalla....:)